ಗೋಣಿಕೊಪ್ಪಲು: ಎರಡು ದಿನ ಪಟ್ಟಣದಲ್ಲಿ ನಡೆದ 5ನೇ ವರ್ಷದ ಕಾಟ್ರಕೊಲ್ಲಿ ಪ್ರೀಮಿಯರ್ ಲೀಗ್ (ಕೆಪಿಎಲ್) ಕಪ್-2024ರ ಕ್ರಿಕೆಟ್ ಟೂರ್ನಿಯಲ್ಲಿ ಎಸ್.ಎಸ್.ಫ್ರೆಂಡ್ಸ್ ತಂಡ ಜಯಗಳಿಸಿ ಪ್ರಶಸ್ತಿ ಪಡೆಯಿತು. ನಾಧೀಶ್ ಕ್ರಿಕೆಟರ್ಸ್ ತಂಡ ರನ್ನರ್ಸ್ ಪಟ್ಟಕ್ಕೆ ತೃಪ್ತಿ ಪಡಬೇಕಾಯಿತು.
ಆಲೀರ ಎಂ.ರಶೀದ್ ಮಾಲೀಕತ್ವದ ಎಸ್.ಎಸ್. ಫ್ರೆಂಡ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರಿಂದ ಆಲೀರ ಅಝೀಜ್ ಮಾಲಿಕತ್ವದ ನಾಧೀಶ್ ಕ್ರಿಕೆಟರ್ಸ್ ತಂಡ ಬ್ಯಾಟಿಂಗ್ ಆರಂಭಿಸಿತು.
ತೀವ್ರ ಹಣಾಹಣಿಯಿಂದ ಕೂಡಿದ ಫೈನಲ್ ಪಂದ್ಯದಲ್ಲಿ ನಾಧೀಶ್ ತಂಡ ನಿಗದಿತ ಐದು ಓವರ್‌ನಲ್ಲಿ 45 ರನ್ ಬಾರಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ಎಸ್.ಎಸ್. ಫ್ರೆಂಡ್ಸ್ ತಂಡ ಕೊನೆ ಓವರ್‌ನಲ್ಲಿ ಗುರಿ ಸಾಧಿಸಿ 46ರನ್ ಗಳಿಸುವ ಮೂಲಕ ಜಯದ ಮಾಲೆ ಕೊರಳಿಗೇರಿಸಿಕೊಂಡಿತು.
ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಎಸ್.ಎಸ್. ಫ್ರೆಂಡ್ಸ್ ತಂಡದ ರಾಫಿ ಪಡೆದುಕೊಂಡರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಅದೇ ತಂಡದ ಶಂಶೀರ್ ಪಡೆದುಕೊಂಡರು. ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಫಿಟ್ನೆಸ್ ಮಂತ್ರ ತಂಡದ ಅನೀಶ್, ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ನಾಧೀಶ್ ಕ್ರಿಕೆಟರ್ಸ್ ತಂಡದ ರಂಶಾದ್, ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ಅದೇ ತಂಡದ ಪ್ರದೀಪ್ ಗಳಿಸಿದರೆ, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ನಾಧೀಶ್ ಕ್ರಿಕೆಟರ್ಸ್ ತಂಡದ ನಾಫಿ ಪಡೆದುಕೊಂಡರು. ಪಂದ್ಯಾವಳಿಯ ಅತ್ಯುತ್ತಮ ತಂಡ ಪ್ರಶಸ್ತಿಯನ್ನು ಸ್ಟಾರ್ ಬಾಯ್ಸ್ ತಂಡ ತನ್ನದಾಗಿಸಿಕೊಂಡಿತು.
ಕಾಟ್ರಕೊಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಕೆ.ಎಚ್.ಶಫೀಕ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ವಿವಿಧ ಕ್ರಿಕೆಟ್ ತಂಡದ ಮಾಲೀಕರಾದ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ಎಂ. ರಶೀದ್, ಸದಸ್ಯರಾದ ಎ.ಎ. ಅಝೀಜ್, ಕಾಟ್ರಕೊಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಅಕ್ಕಳತಂಡ ಝಿಯಾ, ಉಪಾಧ್ಯಕ್ಷ ಸೆಂದಿಲ್, ಕಾರ್ಯದರ್ಶಿ ಕುಟ್ಟ, ಪದಾಧಿಕಾರಿ ರಫೀಕ್ ಪ್ರದೀಪ್, ಅಫ್ರೀದ್, ಪಿ.ಜಿ. ಸಂತು, ಪ್ರಶಾಂತ್, ಅನೀಶ್, ರಂಶಾದ್, ಟಿ.ಸಿ. ಮಂಜು, ಸತೀಶ್, ಟಿ.ವಿ. ಮಂಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.