ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಸರ ಸಂರಕ್ಷಿಸಿ: ರಂಜಿತ್ ಕಿವಿಮಾತು

Published 14 ಜೂನ್ 2024, 6:36 IST
Last Updated 14 ಜೂನ್ 2024, 6:36 IST
ಅಕ್ಷರ ಗಾತ್ರ

ನಾಪೋಕ್ಲು: ‘ಮಾನವನ ಮಿತಿ ಮೀರಿದ ಚಟುವಟಿಕೆಗಳಿಂದ ನಮ್ಮ ಸುತ್ತಲಿನ ಪರಿಸರ ಮಾಲಿನ್ಯವಾಗುತ್ತಿದೆ. ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರಿಂದ ಉತ್ತಮ ಪರಿಸರವನ್ನು ನಿರ್ಮಿಸಬಹುದು’ ಎಂದು ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ರಂಜಿತ್ ಹೇಳಿದರು.

‌ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಸ್ಥಳೀಯ ಸಂಸ್ಥೆ ಸಂಪಾಜೆ ವತಿಯಿಂದ ವಿವಿಧ ಶಾಲೆಗಳಲ್ಲಿ ಭೂಮಿಯ ಮರುಸ್ಥಾಪನೆ ಮತ್ತು ಹಸಿರು, ಬರ ಪರಿಸ್ಥಿತಿ ನಿರ್ವಹಣೆ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

‘ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಗಾಳಿ, ನೆರಳು, ಹಣ್ಣುಗಳು ದೊರೆತು ಪರಿಸರ ಸಂಪದ್ಭರಿತವಾಗುತ್ತದೆ.ನಮ್ಮ ಸುತ್ತಿಲಿನ ಪರಿಸರದ ಅಂಶಗಳಾದ ನೀರು, ಜಲ, ನೆಲವನ್ನು ಹಾಳುಗೆಡುವಬಾರದು. ಗಿಡಗಳನ್ನು ಪೋಷಣೆ ಮಾಡಿ ಸಂರಕ್ಷಿಸಿ ಅದರ ನೆರಳು ಅಥವಾ ಫಲವನ್ನು ಪಡೆದುಕೊಳ್ಳುವಂತಾಗಬೇಕು ’ಎಂದರು.

ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಸಂಪಾಜೆ ವಲಯ ಅಧ್ಯಕ್ಷ ಎಂ.ಧನಂಜಯ ಮಾತನಾಡಿ, ‘ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಪರಿಸರ ಸಂರಕ್ಷಣೆ ಅರಿವು ಮೂಡಿಸುವ ಉದ್ದೇಶದಿಂದ ಮಡಿಕೇರಿ ತಾಲ್ಲೂಕಿನ ಆಯ್ದ 15 ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದರು.

‘ಕಾಟಕೇರಿ, ಬೆಳಕುಮಾನಿ, ಜೋಡುಪಾಲ, ಚೆಂಬು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿವಿಧ ಶಾಲೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಸಂರಕ್ಷಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಗಿಡಗಳನ್ನು ನೀಡಿದ್ದು ಅದರ ಸಂಪೂರ್ಣ ಪೋಷಣೆಯ ಜವಾಬ್ದಾರಿಯನ್ನು ಮಕ್ಕಳು ಮಾಡಲಿದ್ದಾರೆ’ ಎಂದರು.

ಸಂಸ್ಥೆಯ ಕಾರ್ಯದರ್ಶಿ ಕೆ.ಬಿ ಉಷಾರಾಣಿ ಮಾತನಾಡಿ, ‘ಪರಿಸರವನ್ನು ಸಂರಕ್ಷಣೆ ಮಾಡುವ ಹೊಣೆ ಎಲ್ಲರದ್ದು. ನಮ್ಮ ಭೂಮಿಯನ್ನು ಕಲುಷಿತಗೊಳಿಸಲು ಬಿಡಬಾರದು. ಗಿಡಮರಗಳನ್ನು ಕಡಿದು ಪರಿಸರವನ್ನು ಪ್ಲಾಸ್ಟಿಕ್‌ಮಯವಾಗಿ ಮಾಡಿ ನೆಲ, ಜಲ, ವಾಯುಮಾಲಿನ್ಯ ಉಂಟು ಮಾಡುತ್ತಿದ್ದೇವೆ. ಇದನ್ನು ತಪ್ಪಿಸಲು ಎಲ್ಲರೂ ಪರಿಸರ ಸಂರಕ್ಷಣೆ ವಿಚಾರದಲ್ಲಿ ಜಾಗೃತರಾಗಬೇಕಾಗಿದೆ. ನಮ್ಮ ಮಕ್ಕಳನ್ನು ನಾವು ಯಾವ ರೀತಿ ಪೋಷಣೆ ಮಾಡುತ್ತೇವೋ ಅದೇ ರೀತಿ ಮರ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದರೆ ಮಾತ್ರ ನಮ್ಮ ಮುಂದಿನ ತಲೆಮಾರು ಬದುಕಲು ಸಾಧ್ಯ’ ಎಂದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಸ್ಥಳೀಯ ಸಂಸ್ಥೆ ಸಂಪಾಜೆಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿಯಾನ ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಪ್ತಿಗೊಂಡಿತು.

ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT