ಮಡಿಕೇರಿ: ಕೃಷಿಯ ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಯಶಸ್ಸು ಗಳಿಸಿದವರು ವಿರಾಜಪೇಟೆಯ ಕಡಂಗದ ನಿವಾಸಿ ಕೋಡಿರ ಅರ್ಚನಾ ಮುತ್ತಣ್ಣ.
ವಿರಾಜಪೇಟೆಯ ಕಡಂಗದಲ್ಲಿ ಇವರು ತಮ್ಮ ತೋಟದಲ್ಲಿ ಪತಿಯೊಂದಿಗೆ ಕಾಫಿ ಹಾಗೂ ಕಾಳು ಮೆಣಸು ಬೆಳೆಯುತ್ತಿದ್ದಾರೆ. ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಅವರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಕ್ಷೇತ್ರಕ್ಕೆ 2021ರಲ್ಲಿ ಪದಾರ್ಪಣೆ ಮಾಡಿದರು.
ಸಿರಿಧಾನ್ಯಗಳಾದ ನವಣೆ, ಸಾಮೆ, ಸಜ್ಜೆ, ಊದಲು, ರಾಗಿ ಹಾಗೂ ಇತರ ಧಾನ್ಯಗಳಿಂದ ಅವರು ದೋಸೆ ಮಿಕ್ಸ್, ನೂಡಲ್ಸ್, ಪಾಸ್ಟಾ, ಶ್ಯಾವಿಗೆ, ಜಾಮ್ಸ್, ಕಾಚಂಪುಳಿ ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಶುರು ಮಾಡಿದರು.
ಇದಕ್ಕಾಗಿ ಕುಶಾಲನಗರಕ್ಕೆ ಬಂದ ಅವರು ತಮ್ಮದೇಯಾದ ನರೀಶ್‌ಇಲೈಟ್ ಡೈವರ್ಸಿಟೀಸ್‌ನ್ನು ಸ್ಥಾಪಿಸಿ ‘ವಿನ್‌ಎಸ್ಸೆನ್ಸ್’ ಎಂಬ ಬ್ರ್ಯಾಂಡಿಂಗ್ ಮೂಲಕ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.
ಮಾರುಕಟ್ಟೆಯಲ್ಲಿ ಇವರ ಉತ್ಪನ್ನಗಳಿಗೆ ಇದೀಗ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ವೇದಿಕೆಯಲ್ಲೂ ಇವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಯಶಸ್ಸು ಪಡೆದಿದ್ದಾರೆ. ಹೊರದೇಶಗಳಿಂದಲೂ ಬೇಡಿಕೆ ಬಂದಿದ್ದು, ಅಲ್ಲಿಗೂ ಇವರು ಪೂರೈಕೆ ಮಾಡುತ್ತಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ಅರ್ಚನಾ ಮುತ್ತಣ್ಣ ಅವರನ್ನು ಸಂಪರ್ಕಿಸಿದಾಗ ಅವರು, ‘ಸಿರಿಧಾನ್ಯಗಳನ್ನು ಕೊಡಗಿನಲ್ಲಿ ಬೆಳೆಯುವುದು ತೀರಾ ಕಡಿಮೆ. ಹಾಗಾಗಿ, ಉತ್ತರ ಕರ್ನಾಟಕದಿಂದ ಉತ್ತಮ ಗುಣಮಟ್ಟದ ಸಿರಿಧಾನ್ಯಗಳನ್ನು ನೇರವಾಗಿ ರೈತರಿಂದ ತರಿಸಿಕೊಂಡು ಅದರ ದೋಸೆ, ನೂಡಲ್ಸ್, ಪಾಸ್ಟಾ, ಶ್ಯಾವಿಗೆ, ಜಾಮ್ಸ್ ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ’ ಎಂದರು.
ಯಾವುದೇ ಕೃಷಿ ಉತ್ಪನ್ನದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಸಿಎಫ್‌ಟಿಆರ್‌ಐನಲ್ಲಿ ತಂತ್ರಜ್ಞಾನದ ನೆರವು ಸಿಗುತ್ತಿದೆ ಅದನ್ನು ಆಸಕ್ತರು ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅವುಗಳ ಮೌಲ್ಯವರ್ಧಿತ ಉತ್ಪನ್ನಗಳಿಗೂ ಬಹುಬೇಡಿಕೆ ಮಾರುಕಟ್ಟೆಯಲ್ಲಿದೆ. ಈ ಅಂಶವನ್ನು ಮನಗಂಡಿರುವ ಅವರು ಉದ್ಯಮದಲ್ಲಿ ಯಶಸ್ಸಿನ ಹೆಜ್ಜೆಗಳನ್ನು ಇಡುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಇವರು ಸಿಎಫ್‌ಟಿಆರ್‌ಐಯಲ್ಲಿ ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದಿದ್ದಾರೆ. ಸಿಎಫ್‌ಟಿಆರ್‌ಐನಿಂದ ತಂತ್ರಜ್ಞಾನದ ನೆರವನ್ನು ಹಾಗೂ ಕೃಷಿ ಇಲಾಖೆಯಿಂದ ಪಿಎಂಎಫ್ಎಂಇ ಯೋಜನೆಯ ನೆರವನ್ನೂ ಪಡೆದಿದ್ದಾರೆ.
‘ಪಿಎಂಎಫ್ಎಂಇ’ ಯೋಜನೆ ನೆರವು ಪಡೆಯಿರಿ
‘ಪ್ರಜಾವಾಣಿ’ ಕೃಷಿ ಇಲಾಖೆಯ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ ಮೈತ್ರಿ ಅವರನ್ನು ಸಂಪರ್ಕಿಸಿದಾಗ ಅವರು ಅರ್ಚನಾ ಮುತ್ತಣ್ಣ ಅವರಿಗೆ ಪಿಎಂಎಫ್‌ಎಂಇ ಯೋಜನೆಯಿಂದ ನೆರವು ನೀಡಲಾಗಿದೆ ಎಂದರು. ಯಾವುದೇ ಬೆಳೆ ಆಹಾರವನ್ನು ಸಂಸ್ಕರಿಸಿ ಅವುಗಳ ಮೌಲ್ಯವರ್ಧನೆ ಮಾಡಿ ಬ್ರಾಂಡಿಂಗ್ ಮಾಡುವ ಯಾರಾದರೂ ಈ ಯೋಜನೆಯ ಲಾಭ ಪಡೆಯಬಹುದು. ಶೇ 50ರವರೆಗೂ ಸಹಾಯಧನ ಈ ಯೋಜನೆಯಡಿ ಫಲಾನುಭವಿಗಳಿಗೆ ಸಿಗುತ್ತದೆ. ಮಾಹಿತಿಗೆ ಈ ಯೋಜನೆಗೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳಾದ ನೀರಜಾ ಮತ್ತು ಕುಮುದಾ ಅವರನ್ನು ಸಂಪರ್ಕಿಸಬಹುದು. ದೂ:08272298732 ಸಂಪರ್ಕಿಸಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.