ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಮಾತು ಬೇಡ: ಶಾಶ್ವತ ಜಾಗ ನೀಡಿ, ಸಂತ್ರಸ್ತರ ಆಗ್ರಹ

Last Updated 13 ಫೆಬ್ರುವರಿ 2020, 14:34 IST
ಅಕ್ಷರ ಗಾತ್ರ

ಸಿದ್ದಾಪುರ: ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಸಿದ್ದಾಪುರ ವರ್ತಕರ ಸಂಘ ಬೆಂಬಲ ಸೂಚಿಸಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ ಶ್ರೀನಿವಾಸ್ ತಿಳಿಸಿದ್ದಾರೆ.

ಸಂತ್ರಸ್ತರು ನ್ಯಾಯಯುತ ಬೇಡಿಕೆಯನ್ನು ಇಟ್ಟಿದ್ದು ಸರ್ಕಾರ ಶೀಘ್ರದಲ್ಲಿ ಶಾಶ್ವತ ಸೂರು ಒದಗಿಸಬೇಕೆಂದು ಅವರು ಒತ್ತಾಯಿಸಿದರು.

ಶಾಶ್ವತ ಸೂರಿಗಾಗಿ ಪ್ರವಾಹ ಸಂತ್ರಸ್ತರು ನಡೆಸುತ್ತಿರುವ ಅಹೋರಾತ್ರಿ ಹೋರಾಟದ ಸ್ಥಳಕ್ಕೆ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿ, ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು.

ಸಿದ್ದಾಪುರ ಗ್ರಾ.ಪಂ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಹೋರಾಟ ವೇದಿಕೆಯಲ್ಲಿ ಉಪ ವಿಭಾಗಾಧಿಕಾರಿ ಜವರೇಗೌಡ, ಕಂದಾಯ ಇಲಾಖೆಯ ಅಧಿಕಾರಿಗಳಿಂದ ಅವರು ಮಾಹಿತಿಯನ್ನು ಪಡೆದರು.

ಗುಹ್ಯ, ಮಾಲ್ದಾರೆ, ಚೆನ್ನಯ್ಯನಕೋಟೆ ವ್ಯಾಪ್ತಿಯ ಸರ್ಕಾರಿ ಒತ್ತುವರಿ ಜಾಗದ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.

ಆದರೆ ಬಹುತೇಕ ಜಾಗದ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ತ್ವರಿತ ಗತಿಯಲ್ಲಿ ಒತ್ತುವರಿ ಜಾಗ ತೆರವುಗೊಳಿಸಲು ಸಾಧ್ಯವಿಲ್ಲ. ಹಾಗಾಗಿ, ಖಾಸಗಿ ಜಾಗವನ್ನು ಖರೀದಿಸಿ ಸಂತ್ರಸ್ತರಿಗೆ ನೀಡಬೇಕಾಗಿದೆ ಎಂದರು.

ಈ ಸಂದರ್ಭ ಅವರೆಗುಂದ ಅಸ್ತಾನ ಹಾಡಿ ಹಾಗೂ ಕರಡಿಗೋಡಿನಲ್ಲಿ ಖಾಸಗಿ ಜಾಗ ಮಾರಾಟಕ್ಕೆ ಇರುವುದಾಗಿ‌ ಕೆಲವರು ತಿಳಿಸಿದ್ದಾರೆ. ಈ ಎರಡು‌ ಜಾಗದ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಕಾನೂನು ರೀತಿಯಲ್ಲಿ ಕ್ರಮ‌ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದರು.

ನೆಲ್ಯಹುದಿಕೇರಿ ಭಾಗದ ಸಂತ್ರಸ್ತರಿಗಾಗಿ‌ ಗುರುತಿಸಿರುವ ಅರೆಕಾಡು ಬಳಿಯ ಜಾಗದಲ್ಲಿ ಸಿದ್ದಾಪುರದ 60 ಮಂದಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಕ್ರಮ‌ ವಹಿಸುವಂತೆ ಎ.ಸಿ ಅವರಿಗೆ ತಿಳಿಸಿದರು.

ಕೂಡಲೇ ಈ ಸಮಸ್ಯೆ ಬಗೆ ಹರಿಯುವ ಸಾಧ್ಯತೆ ಇಲ್ಲದಿರುವುದರಿಂದ ಎಲ್ಲದಕ್ಕೂ ಸಮಯ‌ ಬೇಕಾಗಿದೆ. ಹಾಗಾಗಿ, ಪ್ರತಿಭಟನೆಯನ್ನು ಕೈ ಬಿಡಬೇಕೆಂದು ಮನವಿ‌ ಮಾಡಿದರು.

ಹೋರಾಟ ಸಮಿತಿಯ ಯಮುನಾ, ಬೈಜು, ಮುಸ್ತಫ, ವಿರಾಜಪೇಟೆ ತಹಶೀಲ್ದಾರ್ ಮಹೇಶ್, ಸಿ.ಐ ಅನೂಪ್ ಮಾದಪ್ಪ, ಕಂದಾಯ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.

ನದಿ‌ ತೀರದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ, ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಬಾಡಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು‌ ಈ ಹಿಂದೆ ಜಿಲ್ಲಾಡಳಿತ ಹೇಳಿತ್ತು. ಆದರೆ, ಅನಧಿಕೃತ ಸೇರಿದಂತೆ ಮನೆ ಕಳೆದುಕೊಂಡ ಪ್ರತಿಯೊಬ್ಬರಿಗೂ ಬಾಡಿಗೆ ಹಣವನ್ನು ನೀಡಬೇಕೆಂದು ಹೋರಾಟ ಸಮಿತಿಯ ಬೇಡಿಕೆಯಾಗಿತ್ತು. ಅನಧಿಕೃತವಾಗಿ ಮನೆ ಕಟ್ಟಿದ್ದ 228 ಕುಟುಂಬಗಳ ಖಾತೆಗಳಿಗೆ ತಿಂಗಳಿಗೆ ₹5 ಸಾವಿರದಂತೆ ಐದು ತಿಂಗಳು ₹25 ಸಾವಿರ ಪಾವತಿ ಮಾಡಿರುವ ಬಗ್ಗೆ ಪ್ರತಿಭಟನಾ ಸಭೆಯಲ್ಲಿ ಮಾಹಿತಿ ನೀಡಿದರು.

ಸಂತ್ರಸ್ತರನ್ನು ಮುಂದಿಟ್ಟುಕೊಂಡು ಚುನಾವಣಾ ಗಿಮಿಕ್ ನಡೆಯುತ್ತಿದೆ ಎಂಬ ಉಪ ವಿಭಾಗಾಧಿಕಾರಿ ಹೇಳಿಕೆ ವಿರುದ್ಧ ಪ್ರತಿಭಟನಕಾರರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಉಪ ವಿಭಾಗಾಧಿಕಾರಿ ಮಾತನಾಡಿ, ಈ ರೀತಿಯಲ್ಲಿ ನಾನು ಎಲ್ಲೂ ಮಾತನಾಡಿಲ್ಲ. ನಾನು ಹಾಗೆ ಮಾತನಾಡುವ ವ್ಯಕ್ತಿಯೂ ಅಲ್ಲ ಎಂದರು. ಹಾಗಾದರೆ ಸುಳ್ಳು ಸುದ್ದಿಯನ್ನು ಪ್ರಕಟಿಸಿರುವ ಪತ್ರಿಕೆಯ ವಿರುದ್ಧ ಕ್ರಮ‌ಕೈಗೊಳ್ಳುವಂತೆ ಸಂತ್ರಸ್ತರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT