ಮಡಿಕೇರಿ: ರಾಜ್ಯದಲ್ಲಿ ಬರ ಆವರಿಸಿರುವುದರಿಂದ ಈ ವರ್ಷ ಮೈಸೂರು ದಸರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿರುವುದು ಇಲ್ಲಿನ ವಾಣಿಜ್ಯ ಹಾಗೂ ಪ್ರವಾಸೋದ್ಯಮ ವಲಯದಲ್ಲಿ ನಿರಾಸೆ ಕವಿಯುವಂತೆ ಮಾಡಿದೆ. ಮಡಿಕೇರಿ ದಸರೆಯನ್ನು ಸರಳವಾಗಿ ಆಚರಿಸಬಾರದು, ಹಿಂದಿನ ವರ್ಷದಂತೆಯೇ ಆಚರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
2018ರಿಂದ ಸತತ 4 ವರ್ಷಗಳ ಕಾಲ ಭೂಕುಸಿತ ಹಾಗೂ ಕೋವಿಡ್ ಕಾರಣದಿಂದಾಗಿ ಮಡಿಕೇರಿ ದಸರೆಯನ್ನು ಸರಳವಾಗಿಯೇ ಆಚರಿಸಲಾಗಿತ್ತು. ಕಳೆದ ವರ್ಷ ಮಾತ್ರ ಅದ್ದೂರಿಯಾದ ಆಚರಣೆ ನಡೆದಿತ್ತು. ಸರಿ ಸುಮಾರು 2 ಲಕ್ಷ ಮಂದಿ ಪ್ರವಾಸಿಗರು ಕೇವಲ ಎರಡೇ ದಿನಗಳಲ್ಲಿ ಕೊಡಗಿಗೆ ದಸರೆಯ ವೇಳೆ ಬಂದಿದ್ದರು. ಇಲ್ಲಿನ ವಾಣಿಜ್ಯ ಚಟುವಟಿಕೆಗಳು ಗರಿಗೆದರಿದ್ದವು. ಆದರೆ, ಸರ್ಕಾರ ಮತ್ತೆ ಸರಳ ಮೈಸೂರು ದಸರೆ ಆಚರಣೆಗೆ ನಿರ್ಧರಿಸಿರುವುದರಿಂದ ವಾಣಿಜ್ಯ ವಹಿವಾಟುಗಳಿಗೆ ಮತ್ತೆ ಹಿನ್ನಡೆ ಉಂಟಾಗಲಿದೆಯೇ ಎಂಬ ಭೀತಿ ಮೂಡಿದೆ.
ಮೈಸೂರು ದಸರೆಗೆ ಬರುವ ಪ್ರವಾಸಿಗರಲ್ಲಿ ಬಹುತೇಕ ಮಂದಿ ಕೊಡಗಿಗೂ ಭೇಟಿ ನೀಡುತ್ತಾರೆ. ಆದರೆ, ಮೈಸೂರು ದಸರೆ ಸರಳವಾಗಿ ಆಚರಣೆಯಾದರೆ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಕೆಯಾಗುತ್ತದೆ. ಸಹಜವಾಗಿಯೇ ಕೊಡಗಿಗೂ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಬಹುದೆ ಎಂಬ ಪ್ರಶ್ನೆ ಹಾಗೂ ಆತಂಕ ವಾಣಿಜ್ಯೋದ್ಯಮಿಗಳನ್ನು ಕಾಡುತ್ತಿದೆ.
‘ಮೈಸೂರು ದಸರೆಯೇ ಸರಳ. ಇನ್ನು ಆ ಕಡೆ ಹೋಗಿ ಏನು ಪ್ರಯೋಜನ. ಅದರ ಬದಲಿಗೆ ದಸರೆ ರಜಾ ದಿನಗಳಲ್ಲಿ ಬೇರೆ ರಾಜ್ಯಕ್ಕೆ ಅಥವಾ ಬೇರೆ ಜಿಲ್ಲೆಗಳಿಗೆ ಹೋಗೋಣ’ ಎಂಬ ನಿಲುವಿಗೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಪ್ರವಾಸಿಗರು ಬಂದರೆ ನಷ್ಟ ಕಟ್ಟಿಟ್ಟ ಬುತ್ತಿ.
ಕೊಡಗಿನಲ್ಲಿ ಕಾಫಿಯನ್ನು ಜನರು ಹೇಗೆ ನಂಬಿಕೊಂಡಿದ್ದರೋ ಪ್ರವಾಸೋದ್ಯಮವನ್ನೂ ಜನರು ಅಷ್ಟೇ ನೆಚ್ಚಿಕೊಂಡಿದ್ದಾರೆ. ತಮ್ಮ ದೈನಂದಿನ ಬದುಕಿಗೂ ಪ್ರವಾಸೋದ್ಯಮವನ್ನೇ ನಂಬಿರುವ ಸಾವಿರಾರು ಮಂದಿ ಇಲ್ಲಿದ್ದಾರೆ. ಇವರಿಗೆಲ್ಲ ಸರ್ಕಾರದ ಈ ನಿರ್ಧಾರ ಬರಸಿಡಿಲು ಬಡಿದಂತಾಗಿದೆ.
‘ಏನೆಯಾದರೂ ಸಂಪ್ರದಾಯಕ್ಕೆ ಚ್ಯುತಿ ಬಾರದ ಹಾಗೆ ದಸರೆಯಂತೂ ನಡೆಯುತ್ತದೆ. ಸರ್ಕಾರಕ್ಕೆ ಅನುದಾನ ಕೊಡಲು ಆಗದಿದ್ದರೆ ಅನುದಾನಕ್ಕೆ ಕತ್ತರಿ ಹಾಕಲಿ. ಅದನ್ನು ಬಿಟ್ಟು ಮೊದಲೇ ಸರಳ ದಸರೆ ಎಂದು ಘೋಷಿಸಿದರೆ ಹೊರಗಿನಿಂದ ಜನರು ಇಲ್ಲಿಗೆ ಏಕಾದರೂ ಬರುತ್ತಾರೆ’ ಎಂದು ವಾಣಿಜ್ಯೋದ್ಯಮಿಗಳು ಪ್ರಶ್ನಿಸುತ್ತಾರೆ.
ಸರಿಸುಮಾರು ಜಿಲ್ಲೆಯಲ್ಲಿ 300 ಹೋಟೆಲ್ ಮತ್ತು ರೆಸಾರ್ಟ್‌ಗಳು ಇವೆ. ಹೋಂಸ್ಟೇಗಳು ಸುಮಾರು 3,500 ಸಾವಿರದಷ್ಟಿವೆ. ಇವರೆಲ್ಲರೂ ದಸರೆಯಲ್ಲಿ ಬರುವ ಪ್ರವಾಸಿಗರನ್ನೇ ನೆಚ್ಚಿಕೊಂಡಿವೆ. ಒಂದು ವೇಳೆ ಸರಳ ದಸರೆ ಎಂದು ತಿಳಿದು ಪ್ರವಾಸಿಗರು ಬಾರದಿದ್ದರೆ ಇವರಿಗೆಲ್ಲ ಅತೀವ ನಷ್ಟ ಉಂಟಾಗಲಿದೆ.
ಕೇವಲ ಇವರು ಮಾತ್ರವಲ್ಲ, ಇಲ್ಲಿನ ಅಂಗಡಿಗಳು, ಜೇನು, ವೈನ್, ಸಾಂಬಾರ ಪದಾರ್ಥಗಳ ಅಂಗಡಿಗಳು, ಕಾಫಿ ಹೀಗೆ ಇಲ್ಲಿನ ಅಂಗಡಿಗಳಲ್ಲೂ ವ್ಯಾಪಾರ ತಗ್ಗುತ್ತದೆ. ಪ್ರವಾಸಿಗರು ಬಾರದಿದ್ದರೆ ಆಟೊ, ಕಾರು, ಮೊದಲಾದ ಪ್ರವಾಸಿ ವಾಹನಗಳಿಗೂ ಬೇಡಿಕೆ ಸೃಷ್ಟಿಯಾಗುವುದಿಲ್ಲ. ಒಟ್ಟಾರೆ, ಜಿಲ್ಲೆಯಲ್ಲಿ ಆರ್ಥಿಕ ಹಿಂಜರಿತ ಉಂಟಾಗುವುದು ನಿಶ್ಚಿತ ಎಂಬುದು ಬಹುತೇಕ ವಾಣಿಜ್ಯೋದ್ಯಮಿಗಳ ಅಭಿಪ್ರಾಯವಾಗಿದೆ.
ಈಗಾಗಲೇ ಮಳೆಗಾಲದ ಪ್ರವಾಸೋದ್ಯಮವು ಮಳೆ ಇಲ್ಲದೇ ಮಂಕಾಗಿದೆ. ಆಗಸ್ಟ್ 15ರ ಸಮಯದಲ್ಲಿ ಪ್ರವಾಸಿಗರು ಬಂದಿದ್ದು ಬಿಟ್ಟರೆ ಉಳಿದ ಸಮಯದಲ್ಲಿ ಹೆಚ್ಚು ಮಂದಿ ಬರಲೇ ಇಲ್ಲ. ದಸರೆ ರಜೆಯಲ್ಲಾದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಬಹುದು ಎಂಬ ಲೆಕ್ಕಾಚಾರ ಸರ್ಕಾರದ ನಿರ್ಧಾರದಿಂದ ಸುಳ್ಳಾಗುತ್ತಿದೆ.
ಖಾಸಗಿ ಸಹಭಾಗಿತ್ವ ಪಡೆಯಬಹುದಿತ್ತು: ಒಂದು ವೇಳೆ ಸರ್ಕಾರದ ಬಳಿ ವಿಜೃಂಭಣೆಯ ದಸರೆಗೆ ನೀಡುವಷ್ಟು ಹಣ ಇಲ್ಲದೇ ಹೋಗಿದ್ದರೆ ಖಾಸಗಿ ಸಹಭಾಗಿತ್ವ ಪಡೆದು ಹಿಂದಿನ ವರ್ಷದಂತೆ ದಸರೆಯನ್ನು ಆಚರಿಸುವ ನಿರ್ಧಾರ ಮಾಡಬೇಕಿತ್ತು ಎಂಬ ಕೂಗು ಕೇಳಿ ಬಂದಿದೆ.
ಖಾಸಗಿ ಉದ್ಯಮಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ವಾಣಿಜ್ಯೋದ್ಯಮಿಗಳ ಸಹಭಾಗಿತ್ವದಿಂದ ವಿಜೃಂಭಣೆಯ ದಸರೆ ಆಚರಿಸುವ ಅವಕಾಶವೂ ಇತ್ತು. ಸರ್ಕಾರ ಅದನ್ನು ಬಳಸಿಕೊಳ್ಳದೇ ಏಕಾಏಕಿ ಸರಳ ಎಂದು ಘೋಷಿಸಿರುವುದು ಸರಿಯಲ್ಲ ಎಂಬುದೂ ಬಹುಜನರ ಅಭಿಪ್ರಾಯವಾಗಿದೆ.
ಮಡಿಕೇರಿ ದಸರೆಯನ್ನೂ ಈ ರೀತಿ ಸರಳ ಎಂದು ಸರ್ಕಾರ ಘೋಷಿಸಬಾರದು. ವಿಜೃಂಭಣೆಯ ದಸರೆ ನಡೆಯುವುದಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು ಎಂದು ವಾಣಿಜ್ಯೋದ್ಯಮಿಗಳು ಒತ್ತಾಯಿಸುತ್ತಾರೆ.
ನಿಜ ಬರ ಬಂದಿದೆ. ಸರ್ಕಾರ ಅನೇಕ ಗ್ಯಾರಂಟಿಗಳನ್ನೂ ನೀಡಿದೆ. ಅನುದಾನ ಕೊಡುವುದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಮಾಡಲಿ. ಅದನ್ನು ಬಿಟ್ಟು ಸರಳ ಎಂದು ಮೊದಲೇ ಘೋಷಿಸಬಾರದು. ಯಾವಾಗ ಸರಳ ಎಂದು ಸರ್ಕಾರವೇ ಘೋಷಣೆ ಮಾಡುತ್ತದೋ ಆಗ ಇಲ್ಲಿಗೆ ಬರಲು ಪ್ರವಾಸಿಗರು ನಿರಾಸಕ್ತಿ ವಹಿಸುತ್ತಾರೆ. ಆರ್ಥಿಕ ಹಿಂಜರಿತ ಉಂಟಾಗುತ್ತದೆ. ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಲಿ.- ಬಿ.ಆರ್.ನಾಗೇಂದ್ರ ಪ್ರಸಾದ್, ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ.
ಇದುವರೆಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೋಂಸ್ಟೇಗಳ ಬುಕಿಂಗ್‌ಗಳು ಬಿರುಸಿನಿಂದ ನಡೆದಿತ್ತು. ಆದರೆ ಈಗ ಸರ್ಕಾರ ಸರಳ ಎಂಬ ಪದ ಪ್ರಯೋಗ ಮಾಡಿರುವುದರಿಂದ ಮುಂದೇನಾಗುವುದೋ ಎಂಬ ಆತಂಕ ಉಂಟಾಗಿದೆ. ಸರ್ಕಾರ ನಿಜಕ್ಕೂ ಈ ಪದ ಪ್ರಯೋಗ ಮಾಡಬಾರದಿತ್ತು. ಹಣದ ಕೊರತೆ ಇದ್ದರೆ ಖಾಸಗಿ ಸಹಭಾಗಿತ್ವದಲ್ಲಿ ದಸರೆಯನ್ನು ಆಚರಿಸಿದ್ದರೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ವಾಣಿಜ್ಯ ವಹಿವಾಟುಗಳಿಗೆ ತೊಂದರೆಯಾಗುತ್ತಿರಲಿಲ್ಲ.- ನವೀನ್ ಅಂಬೆಕಲ್, ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಪ್ರಧಾನ ಕಾರ್ಯದರ್ಶಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.