ಭಾನುವಾರ, ಜನವರಿ 17, 2021
22 °C
ತಾಲ್ಲೂಕು ವ್ಯಾಪ್ತಿಯ ಕಾಫಿ ಹಾಗೂ ಭತ್ತ ಬೆಳೆದ ರೈತರು ಕಂಗಾಲು

ಸೋಮವಾರಪೇಟೆ: ಅಕಾಲಿಕ ಮಳೆಗೆ ಬೆಳೆ ಹಾನಿ

ಡಿ.ಪಿ. ಲೋಕೇಶ್ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ತಾಲ್ಲೂಕು ವ್ಯಾಪ್ತಿಯಲ್ಲಿ ಕಾಫಿ ಮತ್ತು ಭತ್ತದ ಕೊಯ್ಲು ಮುಗಿಯುತ್ತಾ ಬಂದಿದ್ದು, ಮಳೆಯಿಂದ ಮಾತ್ರ ಬಿಡುಗಡೆಯಾಗದೆ, ಫಸಲನ್ನು ಉಳಿಸಿಕೊಳ್ಳಲು ರೈತರು ಕಷ್ಟಪಡುವಂತಾಗಿದೆ.

ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಬುಧವಾರದಿಂದ ತುಂತುರು ಮಳೆ ಆಗುತ್ತಿದೆ. ಮೊದಲೇ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿರುವ ಕಾಫಿ ಮತ್ತು ಭತ್ತದ ಬೆಳೆಗಾರರಿಗೆ ಫಸಲು ಉಳಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.

ಮುಂಗಾರು ಮಳೆ ಸಂದರ್ಭ ಸುರಿದ ಧಾರಾಕಾರ ಮಳೆ ಹಾಗೂ ನಂತರ ಸುರಿದ ಅಕಾಲಿಕಾ ಮಳೆಯಿಂದ ಕಾಫಿ ಹಾಗೂ ಕಾಳುಮೆಣಸಿನ ಫಸಲು ಹಾನಿಯಾಗಿತ್ತು. ಫಸಲು ಕೊಯ್ಲಿಗೆ ಬಂದಿದ್ದು, ಚಿಕ್ಕಪುಟ್ಟ ಬೆಳೆಗಾರರು ಕೊಯ್ಲು ಮುಗಿಸಿದ್ದಾರೆ. ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಸಬ ಹೋಬಳಿ ಸೇರಿದಂತೆ ಎಲ್ಲೆಡೆ ಬೆಳೆಗಾರರು ಭತ್ತ ಮತ್ತು ಕಾಫಿಯನ್ನು ಕೊಯ್ಲು ಮಾಡುತ್ತಿದ್ದು, ಫಸಲನ್ನು ಒಣಗಿಸಲು ಸಾಧ್ಯವಿಲ್ಲದಂತಾಗಿದೆ.

ಬಿಸಿಲಿನಲ್ಲಿ ಕಾಫಿ ಬೀಜ ಒಣಗಿದರೆ ಮಾತ್ರ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. ಇಲ್ಲದಿದ್ದರೆ ಕಾಫಿಯನ್ನು ಕೊಳ್ಳುವವರೆ ಇಲ್ಲದಂತಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಹುತೇಕ ರೈತರು ಭತ್ತ ಬೆಳೆಯನ್ನು ಕೊಯ್ಲು ಮಾಡುತ್ತಿದ್ದು, ಮುಗಿಯುವ ಹಂತದಲ್ಲಿದೆ. ಇನ್ನೂ ಗದ್ದೆಗಳಲ್ಲಿ ಕಟಾವು ಮಾಡಿದ ಬೆಳೆ ಉಳಿದಿದ್ದರೆ, ಕೆಲವು ರೈತರು ಮನೆಯ ಎದುರಿನಲ್ಲಿ ತಂದು ಸಂಗ್ರಹಿಸಿದ್ದಾರೆ. ಮಳೆ ಸುರಿದರೆ ಗದ್ದೆಯಲ್ಲಿರುವ ಭತ್ತದ ಪೈರಿನ ಮೇಲೆ ನೀರು ಶೇಖರಣೆಗೊಂಡು ದೊಡ್ಡ ಮಟ್ಟದ ಹಾನಿ ಸಂಭವಿಸುವ ಭಯ ಕಾಡುತ್ತಿದೆ’ ಎಂದು ಹಂಡ್ಲಿ ಗ್ರಾಮದ ಲಕ್ಷ್ಮೀಶೆಟ್ಟಿ ಹೇಳಿದರು.

ಮೋಡ ಮುನ್ಸೂಚನೆ ಸಿಕ್ಕಿದ ತಕ್ಷಣ ಕೆಲ ರೈತರಂತೂ ಸಿಕ್ಕಿದಷ್ಟು ಭತ್ತ ಸಿಗಲಿ ಎಂದು ಕೊಯ್ಲು ಮಾಡಿದ ಒಂದೇ ದಿನಕ್ಕೆ ಗದ್ದೆಯಲ್ಲೇ ಟಾರ್ಪಲ್ ಹಾಕಿ ಬಡಿದು ಭತ್ತವನ್ನು ಸಂಗ್ರಹಿಸಿದ್ದಾರೆ.

‘ತಾಲ್ಲೂಕಿನಲ್ಲಿ 7,600 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಮುಂಗಾರು ವಿಳಂಬ, ನಂತರ ಸುರಿದ ಧಾರಾಕಾರ ಮಳೆಯಿಂದ ಭತ್ತ ಕೃಷಿಗೆ ಹಿನ್ನಡೆಯಾಗಿದೆ. ಶಾಂತಳ್ಳಿ ಹೋಬಳಿ ಹಾಗೂ ಸುಂಟಿಕೊಪ್ಪ ಹೋಬಳಿಯ ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯಾ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಭಾರೀ ಪ್ರಮಾಣದ ಬೆಳೆ ಹಾನಿಯಾಗಿತ್ತು. ಭೂಕುಸಿತದಿಂದ ಎಷ್ಟೋ ಗದ್ದೆಗಳು ಮುಚ್ಚಿಹೋಗಿದ್ದವು. ಪ್ರಸಕ್ತ ಸಾಲಿನಲ್ಲಿ ಇರುವ ಭತ್ತದ ಫಸಲು ಉತ್ತಮವಾಗಿದ್ದು, ಮಳೆ ಬೀಳುತ್ತಿರುವುದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ರಮೇಶ್ ತಿಳಿಸಿದರು.

ತಾಲ್ಲೂಕಿನಲ್ಲಿ 28,590 ಹೆಕ್ಟೇರ್‌ನಲ್ಲಿ ಕಾಫಿ ಬೆಳೆ ಇದೆ. 22,900 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಹಾಗೂ 5690 ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗಿದೆ. ಕಾಫಿ ಮಂಡಳಿಯು ತಾಲ್ಲೂಕನ್ನು ಕಾಫಿ ಬೆಳೆಯುವ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದೆ. ಸೋಮವಾರಪೇಟೆಯಲ್ಲಿ 6,900 ಅರೇಬಿಕಾ, 400 ಹೆಕ್ಟೇರ್‌ನಲ್ಲಿ ರೋಬಸ್ಟಾ ಸೇರಿದಂತೆ 7,300 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗಿದೆ. ಶನಿವಾರಸಂತೆಯಲ್ಲಿ 6,740 ಹೆಕ್ಟೇರ್‌ನಲ್ಲಿ ಅರೇಬಿಕಾ, 270 ಹೆಕ್ಟೇರ್‌ನಲ್ಲಿ ರೋಬಸ್ಟಾ ಸೇರಿದಂತೆ 7,010, ಹೆಕ್ಟೇರ್‌ ಕಾಫಿ
ಬೆಳೆಯಲಾಗಿದೆ.

ಸುಂಟಿಕೊಪ್ಪದಲ್ಲಿ 6,660 ಹೆಕ್ಟೇರ್‌ನಲ್ಲಿ ಅರೇಬಿಕಾ ಮತ್ತು 3,820 ಹೆಕ್ಟೇರ್‌ನಲ್ಲಿ ರೋಬಸ್ಟಾ ಸೇರಿದಂತೆ ಒಟ್ಟು 10,480 ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆಯಲಾಗಿದೆ.

‘ಮನೆಗೆ ಸಾಕಾಗುವಷ್ಟು ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಬೆಳೆದ ಬೆಳೆಯನ್ನು ಸರಿಯಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಹೆಚ್ಚಿನ ಗದ್ದೆಗಳು ಕಾಫಿ ತೋಟ ಹಾಗೂ ಅಡಿಕೆ ತೋಟಗಳಾಗಿ ಪರಿವರ್ತನೆ ಆಗುತ್ತಿವೆ’ ಎಂದು ಹಿರಿಕರ ಗ್ರಾಮದ ಕೃಷಿಕ ಎಚ್.ಈ. ರಮೇಶ್ ಬೇಸರ ವ್ಯಕ್ತಪಡಿಸಿದರು.

‘ಕೆಲವು ವರ್ಷಗಳಿಂದ ಹವಾಮಾನ ಸಮಸ್ಯೆಯಿಂದಾಗಿ ಕಾಫಿ ಫಸಲು ಸರಿಯಾಗಿ ಸಿಗುತ್ತಿಲ್ಲ. ಇದರೊಂದಿಗೆ ಜಿಲ್ಲೆಯಲ್ಲಿ ಕಾಫಿ ಮತ್ತು ಭತ್ತದ ಕಟಾವು ಒಂದೇ ಸಮಯದಲ್ಲಿ ಬರುವುದರಿಂದ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಕೊಯ್ಲು ಮಾಡಲು ಸಾಧ್ಯವಾಗದೆ ನಷ್ಟಕ್ಕೊಳಗಾಗಬೇಕಾಗಿದೆ’ ಎಂದು ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು