ಕುಶಾಲನಗರ: ಕೊಡಗು ವಿಶ್ವವಿದ್ಯಾಲಯದ ನೂತನ ಕುಲ ಸಚಿವರಾಗಿ (ಮೌಲ್ಯಮಾಪನ) ಪ್ರೊ.ಎಂ. ಸುರೇಶ್ ಶುಕ್ರವಾರ ಅಧಿಕಾರ ಸ್ವೀಕಾರ ಸ್ವೀಕರಿಸಿದರು.
ನಿರ್ಗಮಿತ ಕುಲ ಸಚಿವ ಸೀನಪ್ಪ ಅವರು ನೂತನ ಕುಲ ಸಚಿವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಬಳಿಕ ಮಾತನಾಡಿದ ಅವರು, ‘ಕೊಡಗು ವಿಶ್ವವಿದ್ಯಾಲಯ ಉತ್ತಮ ವಾತಾವರಣದಲ್ಲಿ ನಿರ್ಮಾಣವಾಗಿದ್ದು, ಈ ವಿಶ್ವವಿದ್ಯಾಲಯವನ್ನು ರಾಜ್ಯಕ್ಕೆ ಮಾದರಿ ವಿಶ್ವವಿದ್ಯಾಲಯ ಮಾಡುವ ಕಲ್ಪನೆ ನಮ್ಮ ನಿಮ್ಮೆಲ್ಲರ ಮೇಲಿದೆ ಅದಕ್ಕೆ ಎಲ್ಲಾ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಸಹಕಾರ ನೀಡಿ ಕನಸು ನನಸು ಮಾಡಬೇಕು’ ಎಂದರು.
ಸೀನಪ್ಪ ಮಾತನಾಡಿ, ‘ಕೊಡಗು ಜನರ ಆಶೋತ್ತರ ಹಾಗೂ ಕನಸನ್ನು ಸಾಕಾರಗೊಳಿಸಲು ಸಾಕಷ್ಟು ಪ್ರಯತ್ನ ಪಡುವ ಕೆಲಸ ಮಾಡಿದ್ದೇವೆ. ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಸಹಕಾರದಿಂದ ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ತಲುಪಿಸುವ ಕೆಲಸ ಮಾಡಿದ್ದೇವೆ’ ಎಂದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾಘವನ್, ಸಹಾಯಕ ಪ್ರಧ್ಯಾಪಕರಾದ ರವಿಶಂಕರ್ ಎಂ.ಎನ್, ತಿಪ್ಪೇಸ್ವಾಮಿ, ನಾಗರಾಜ್ ಕೆ.ಟಿ, ಎಂ.ಪಿ. ಕೃಷ್ಣ, ಅರುಣ್ ಕುಮಾರ್, ಗಗನ್, ಮಮತಾ ಹಾಗೂ ಸಿಬ್ಬಂದಿ ಇದ್ದರು.