ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನೋಪಾಯಕ್ಕೆ ಇದ್ದ ಮಾರ್ಗವೂ ಬಂದ್‌

ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ
Last Updated 8 ಡಿಸೆಂಬರ್ 2018, 17:04 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ತಡಿಯಂಡಮೋಳ್ ಬೆಟ್ಟ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವುದರಿಂದ ಚಾರಣಿಗರ ಸಂಖ್ಯೆ ಇಳಿಮುಖಗೊಂಡಿದೆ. ಇದರಿಂದಾಗಿ ಬುಡಕಟ್ಟು ಜನಾಂಗದ ಅನೇಕರ ಜೀವನೋಪಾಯಕ್ಕೆ ಇದ್ದ ಮಾರ್ಗವೂ ಬಂದ್‌ ಆಗಿದೆ.

ಪ್ರಸಕ್ತ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ನಾಲ್ಕುನಾಡು ವಿಭಾಗದಲ್ಲಿ ಕಾಫಿ, ಕರಿಮೆಣಸು ಸೇರಿದಂತೆ ಎಲ್ಲಾ ವಿಧದ ಬೆಳೆಗಳು ನಾಶವಾಗಿವೆ. ಇದರಿಂದ ಈ ಭಾಗದ ಕಾಫಿ ತೋಟಗಳಲ್ಲಿ ದುಡಿಯುತ್ತಿದ್ದ ನೂರಾರು ಕೂಲಿ ಕಾರ್ಮಿಕ ಕುಟುಂಬಗಳಿಗೆ ಕೆಲಸವಿಲ್ಲದಂತಾಗಿದೆ. ತೋಟದ ಮಾಲೀಕರು ಕೂಡ ಈ ಕುಟುಂಬಗಳಿಗೆ ಕೆಲಸ ನೀಡಲಾಗದ ಪರಿಸ್ಥಿತಿಯಲ್ಲಿದ್ದಾರೆ.

ಈ ನಡುವೆ ಅನೇಕ ಕೂಲಿ ಕಾರ್ಮಿಕ ಕುಟುಂಬಗಳು ನಾಲ್ಕುನಾಡು ವಿಭಾಗದ ಹಲವು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಯವಕಪಾಡಿ ಗ್ರಾಮದ ಅನೇಕ ಬುಡಕಟ್ಟು ಯುವಕರು ಚಾರಣ ಮಾಡುವ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡಿ ಸ್ವಲ್ಪ ಆದಾಯ ಗಿಟ್ಟಿಸುತ್ತಿದ್ದರು. ಈಗ ತಡಿಯಂಡಮೋಳ್ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿರುವುದರಿಂದ ಅವರಿಗೆ ಇದ್ದ ಆದಾಯಕ್ಕೂ ಕಲ್ಲು ಬಿದ್ದಂತಾಗಿದೆ.

‘ಪ್ರಕೃತಿ ವಿಕೋಪಕ್ಕೆ ತುತ್ತಾದ ಮಾಂದಲಪಟ್ಟಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಯಾವುದೇ ಅನಾಹುತ ಸಂಭವಿಸದ ತಡಿಯಂಡಮೋಳ್ ಬೆಟ್ಟದ ವೀಕ್ಷಣೆಗೆ ಅವಕಾಶ ನೀಡದಿರುವುದು ವಿಷಾದನೀಯ. ಹೋಂಸ್ಟೇ ಮಾಲೀಕರ ಬಗ್ಗೆ ಅರಣ್ಯ ಇಲಾಖೆ, ಜಿಲ್ಲಾಡಳಿತಕ್ಕೆ ಭಿನ್ನಾಭಿಪ್ರಾಯಗಳಿದ್ದರೂ ಬುಡಕಟ್ಟು ಜನರ ಅದರಲ್ಲೂ ಕೂಲಿಕಾರ್ಮಿಕರ ಜೀವನೋಪಾಯಕ್ಕೆ ಪೂರಕವಾಗಿರುವ ಪ್ರವಾಸೋದ್ಯಮಕ್ಕೆ ಜಿಲ್ಲಾಡಳಿತ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ’ ಎಂಬುದು ಇಲ್ಲಿನ ಗ್ರಾಮಸ್ಥರ ಅಭಿಪ್ರಾಯ.

‘ಈ ಭಾಗದಲ್ಲಿ ಚಾರಣಕ್ಕೆ ನಿರ್ಬಂಧ ವಿಧಿಸಿರುವುದರಿಂದ ಜೊತೆಗೆ, ಪ್ರಕೃತಿ ವಿಕೋಪದಿಂದಾಗಿ ಅರಣ್ಯದಲ್ಲಿ ಕಿರುಉತ್ಪನ್ನಗಳು ಕೂಡ ಸಂಪೂರ್ಣ ನಾಶವಾಗಿರುವುದರಿಂದ ಈ ಭಾಗದ ಬುಡಕಟ್ಟು ಜನಾಂಗದವರ ಜೀವನ ಶೋಚನೀಯವಾಗಿದೆ’ ಎನ್ನುತ್ತಾರೆ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ.

‘ತಡಿಯಂಡಮೋಳ್ ವ್ಯಾಪ್ತಿಯ 4,650 ಏಕರೆ ಪ್ರದೇಶವನ್ನು ಗ್ರಾಮ ಅರಣ್ಯ ಹಕ್ಕು ಸಮಿತಿಗೆ ವಹಿಸಲಾಗಿದೆ. ಅಲ್ಲಿ ಅರಣ್ಯ ಇಲಾಖೆಗೆ ಯಾವುದೇ ಅಧಿಕಾರ ಇಲ್ಲ. ಆದರೆ, ಕಂದಾಯ ಇಲಾಖೆಗೆ ಸೇರಿದ ಪೈಸಾರಿ ಜಾಗದಲ್ಲಿ ಗೇಟ್ ಅಳವಡಿಸುವ ಮೂಲಕ ಪ್ರವಾಸಿಗರಿಂದ ಹಣ ಸಂಗ್ರಹಿಸಲಾಗುತ್ತಿತ್ತು. ಪ್ರಸಕ್ತ ಸುಮಾರು ₹8 ಲಕ್ಷದಿಂದ ₹10 ಲಕ್ಷದಷ್ಟು ಶುಲ್ಕವನ್ನು ಅರಣ್ಯ ಇಲಾಖೆ ಪ್ರವಾಸಿಗರಿಂದ ಸಂಗ್ರಹಿಸಿದ್ದರೂ ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಇಲಾಖೆ ಮುಂದಾಗಿಲ್ಲ’ ಎಂದು ಕುಡಿಯರ ಮುತ್ತಪ್ಪ ಆರೋಪಿಸಿದ್ದಾರೆ.

ಇದೀಗ ರಸ್ತೆ ಸರಿ ಇಲ್ಲ ಎಂಬ ನೆಪವೊಡ್ಡಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವುದರಿಂದ ಬುಡಕಟ್ಟು ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆ ನಡೆಸಿ, ಪ್ರವಾಸಿಗರಿಂದ ಶುಲ್ಕ ವಸೂಲಿ ಸೇರಿದಂತೆ ಪ್ರವಾಸಿಗರ ನಿಯಂತ್ರಣಗಳನ್ನು ಸಂಪೂರ್ಣವಾಗಿ ಸಮಿತಿಯೇ ಪಡೆದುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಒಂದು ವೇಳೆ ಇದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಿದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗು ವುದಾಗಿ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT