ಕಾವೇರಿ ಪವಿತ್ರ ತೀರ್ಥ ಪಡೆಯಲು ಮುಗಿಬಿದ್ದ ಅಪಾರ ಜನರು
ಶಾಸಕ ಎ.ಎಸ್.ಪೊನ್ನಣ್ಣ ಬಂದ ಭಕ್ತರಿಗೆ ಪ್ರಸಾದ ವಿತರಿಸಿದರು
ಬೇರೆ ಬೇರೆ ಊರುಗಳಿಂದ ಬಂದಿದ್ದ ಭಕ್ತರು ತೀರ್ಥವನ್ನು ತುಂಬಿಸಿಕೊಂಡು ಹೋಗಲು ಸಾಲುಗಟ್ಟಿ ವಾಹನಗಳನ್ನು ನಿಲ್ಲಿಸಿದ್ದರು
ತಲಕಾವೇರಿಯ ಅಲ್ಲಲ್ಲಿ ಭಕ್ತರು ಬಂದಿದ್ದ ಜನರಿಗೆ ಪ್ರಸಾದ ವಿತರಿಸಿದರು
ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಮಂಡಲದಿಂದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದರು
ಕಾಲ್ನಡಿಗೆಯಲ್ಲೇ ಬೆಟ್ಟವೇರಿದ ಶಾಸಕ
ಸಂಸದ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದರು. ಕೆಲದೂರ ಒಟ್ಟಿಗೆ ಹೆಜ್ಜೆ ಹಾಕಿದರು. ಪೊನ್ನಣ್ಣ ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದರೆ ಯದುವೀರ್ ಬರಿಗಾಲಿನಲ್ಲಿ ಬೆಟ್ಟ ಹತ್ತುವ ಮೂಲಕ ಗಮನ ಸೆಳೆದರು.
ಕೊನೆ ಕ್ಷಣ ಮರೆಯಾದ ಗಣ್ಯರು!
ಬೆಳಿಗ್ಗೆಯಿಂದಲೂ ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲೆಂದು ಕಲ್ಯಾಣಿಯ ಸುತ್ತಲೂ ಕಾದು ನಿಂತಿದ್ದ ಭಕ್ತವೃಂದಕ್ಕೆ ಗಣ್ಯರೇ ಮರೆಯಾದರು. ತೀರ್ಥೋದ್ಭವದ ಕ್ಷಣಗಳು ಸಮೀಪಿಸುತ್ತಿದ್ದಂತೆ ಶಾಸಕರಾದಿಯಾಗಿ ಜನಪ್ರತಿನಿಧಿಗಳು ರಾಜಕಾರಣಿಗಳು ಬ್ರಹ್ಮಕುಂಡಿಕೆಯ ಸುತ್ತಲೂ ನಿಂತರು. ಇದರಿಂದ ಭಕ್ತರಿಗೆ ಬ್ರಹ್ಮಕುಂಡಿಕೆ ಕಾಣದಾಯಿತು. ಕೊನೆಗೆ ಅಳವಡಿಸಿದ್ದ ಬೃಹತ್ ಎಲ್‌ಇಡಿ ಪರದೆಗಳನ್ನೇ ತೀರ್ಥೋದ್ಭವದ ಕ್ಷಣಗಳನ್ನು ಕಾಣಲು ಆಶ್ರಯಿಸಬೇಕಾಯಿತು.
ಗಮನ ಸೆಳೆದ ಭಕ್ತಿಗೀತ ಗಾಯನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಾವೇರಿ ಮಾತೆ ಭಕ್ತಿ ಗೀತಾ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಕಸಾಪ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್ ಹಾಗೂ ಅಕಾಡೆಮಿ ಅಧ್ಯಕ್ಷರು ಇದ್ದರು. ಕೊಡಗು ಏಕೀಕರಣ ರಂಗ ವತಿಯಿಂದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣಾ ಕಾರ್ಯ ನಡೆಯಿತು. ಹಾಗೆಯೇ ಚೆಟ್ಟಿಯಾರ್ ವತಿಯಿಂದಲೂ ಪ್ರಸಾದ ವಿನಿಯೋಗ ಜೊತೆಗೆ ಭಾಗಮಂಡಲದಲ್ಲಿ ಗಜಾನನ ತಂಡದವರಿಂದ ಭಕ್ತಾದಿಗಳಿಗೆ ಪ್ರಸಾದ ನೀಡುವ ಕಾರ್ಯ ನಡೆಯಿತು. ಭಾಗಮಂಡಲದಿಂದ ತಲಕಾವೇರಿವರೆಗೆ ವಿವಿಧ ಕೊಡವ ಸಮಾಜಗಳಿಂದ ಪಾದಯಾತ್ರೆ ನಡೆಯಿತು.
ಗುಂಡಿಮಯ ರಸ್ತೆಯಲ್ಲೇ ಪ್ರಯಾಣ
ಮಡಿಕೇರಿಯಿಂದ ಭಾಗಮಂಡಲದವರೆಗೂ ಗುಂಡಿ ಬಿದ್ದ ರಸ್ತೆಯಲ್ಲೇ ಭಕ್ತರು ಈ ಬಾರಿಯೂ ಪ್ರಯಾಣ ಮಾಡಬೇಕಾಯಿತು. ಡಾಂಬರು ಕಿತ್ತು ಹೋದ ಗುಂಡಿ ಬಿದ್ದ ರಸ್ತೆ ಸಂಪೂರ್ಣ ದುರಸ್ತಿಯಾಗಿರಲಿಲ್ಲ. ಕೆಲವು ಕಡೆ ದೊಡ್ಡಗಾತ್ರದ ಗುಂಡಿಗಳಿಗೆ ಲೋಕೋಪಯೋಗಿ ಇಲಾಖೆ ವೆಟ್‌ಮಿಕ್ಸ್ ಹಾಕಿ ಮುಚ್ಚಿತ್ತು. ಆದರೆ ಗುರುವಾರ ಸುರಿದ ಭಾರಿ ಮಳೆಗೆ ೆಟ್‌ಮಿಕ್ಸ್ ಹಲವಡೆ ಕೊಚ್ಚಿಕೊಂಡು ಹೋಗಿತ್ತು.