ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವೇಣಿ ಸಂಗಮದಲ್ಲಿ ಮೈದುಂಬಿದ ಕಾವೇರಿ

ಕಾವೇರಿ, ಕನ್ನಿಕಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಳ
Published 23 ಮೇ 2024, 4:14 IST
Last Updated 23 ಮೇ 2024, 4:14 IST
ಅಕ್ಷರ ಗಾತ್ರ

ನಾಪೋಕ್ಲು: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜೀವನದಿ ಕಾವೇರಿ ಮೈದುಂಬುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ದಿನದಿಂದ ದಿನಕ್ಕೆ ನೀರಿನ ಹರಿವು ಅಧಿಕಗೊಳ್ಳುತ್ತಿದ್ದು ಜನತೆ ನಿರಾಳವಾಗಿದ್ದಾರೆ. ಮಂಗಳವಾರ ಕ್ಷೇತ್ರಕ್ಕೆ ಬಂದ ಭಕ್ತರು ತ್ರಿವೇಣಿ ಸಂಗಮದಲ್ಲಿ ಅಡ್ಡಾಡಿ ಸಂಭ್ರಮಿಸಿದರು.

ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ಸುತ್ತಮುತ್ತ ಉತ್ತಮ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮಕ್ಕೆ ಬಂದು ಸೇರುವ ಕಾವೇರಿ ಮತ್ತು ಕನ್ನಿಕಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಿ, ಸಂಗಮಕ್ಕೆ ಮತ್ತೆ ಜೀವ ಕಳೆ ಬಂದಿದೆ.

ಸಂಗಮದ ಜೊತೆಗೆ ಕಾವೇರಿ ಹರಿವಿನ ತಾಣಗಳಲ್ಲೂ ಹೊಳೆಗಳು ತುಂಬುತ್ತಿದ್ದು, ಜೀವರಾಶಿಗಳಿಗೆ ನೀರ ನೆಮ್ಮದಿ ಸಿಕ್ಕಂತಾಗಿದೆ. ಕಾವೇರಿ ತವರಾದ ಭಾಗಮಂಡಲದಲ್ಲಿ ಈ ವರ್ಷ ಗ್ರಾಮಸ್ಥರಿಗೆ ಟ್ಯಾಂಕರ್ ನೀರು ಪೂರೈಸಲೇಬೇಕಾದ ಸನ್ನಿವೇಶ ಎದುರಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದ ಭಕ್ತರಿಗೂ ನೀರಿನ ಕೊರತೆಯ ಬಿಸಿ ತಟ್ಟಿತ್ತು. ಸಂಗಮದಲ್ಲಿ ಬತ್ತಿದ ಕಾವೇರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರಿಗೇ ಕಟ್ಟೆ ಹಾಕಿ ಪಿಂಡ ಪ್ರಧಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕಾವೇರಿ ಒಡಲಿಗೆ ಈಗ ಮರು ಜೀವ ಬಂದಿದ್ದು, ಭಕ್ತರಲ್ಲಿ ಸಂತಸ ಮನೆ ಮಾಡಿದೆ. ಸಂಗಮದಲ್ಲಿ ಸ್ವಚ್ಛಂದವಾಗಿ ಅಡ್ಡಾಡಿ, ಸ್ನಾನ ಪೂರೈಸಿ, ಖುಷಿಯಿಂದ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ಪರದಾಡಿದವರಿಗೆ ಮಳೆಯು ಖುಷಿ‌ ತಂದಿದೆ.

‘ಹೊಳೆ, ಕೆರೆಗಳಲ್ಲಿ ನೀರು ತಗ್ಗಿ ಕಾಫಿ ಹೂವರಳಿಸಲೂ ಬೆಳೆಗಾರರಿಗೆ ಸಮಸ್ಯೆಯಾಗಿತ್ತು. ಈಗ ಸುರಿಯುತ್ತಿರುವ ಮಳೆಯಿಂದ ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚತೊಡಗಿದೆ’ ಎನ್ನುತ್ತಾರೆ ನೆಲಜಿ ಗ್ರಾಮದ ಕಾಫಿ ಬೆಳೆಗಾರ ಬಾಳೆಯಡ ಪ್ರಭು.

‘ಜಿಲ್ಲೆಯ ಜೀವನದಿ ಕಾವೇರಿಯ ಉಗಮಸ್ಥಾನದಲ್ಲಿ ಅಧಿಕ ಮಳೆಯಾದರೆ, ಸಹಜವಾಗಿ ಸನಿಹದ ಭಾಗಮಂಡಲದ ತ್ರಿವೇಣಿ ಸಂಗಮ ತುಂಬಿ ಹರಿಯುತ್ತದೆ. ಜಿಲ್ಲೆಯಲ್ಲೂ ನೀರಿನ ಸಮಸ್ಯೆ ತಲೆದೋರುವುದಿಲ್ಲ’ ಎನ್ನುತ್ತಾರೆ ಅವರು.

ಮಳೆಯಿಂದಾಗಿ ಕಾವೇರಿ ಹರಿವಿನ ತಾಣಗಳಾದ ಪಾಲೂರು, ಕೊಟ್ಟಮುಡಿ, ಬಲಮುರಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಉದ್ದಕ್ಕೂ ಹಸಿರುಕ್ಕತೊಡಗಿದೆ. ಇಳೆಗೆ ಜೀವಕಳೆ ಬಂದಿದೆ. ನೀರಿಲ್ಲದೇ ಪರದಾಡುತ್ತಿದ್ದ ಮಂದಿಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮಂಗಳವಾರ ಕಂಡುಬಂದ ನೀರಿನ ಹರಿವು.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮಂಗಳವಾರ ಕಂಡುಬಂದ ನೀರಿನ ಹರಿವು.
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ಬೆಳೆಗಾರ ಬಾಳೆಯಡ ಪ್ರಭು ಅವರ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ..
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ಬೆಳೆಗಾರ ಬಾಳೆಯಡ ಪ್ರಭು ಅವರ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ..

ಕಾವೇರಿಯ ಉಗಮಸ್ಥಾನದಲ್ಲಿ ಅಧಿಕ ಮಳೆ ಹೊಳೆಗಳು ತುಂಬುತ್ತಿವೆ ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT