ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಕಾಫಿ ದಿನಾಚರಣೆ: ಹಲವು ಸ್ಥಿತ್ಯಂತರಗಳ ಮಧ್ಯೆ ಕಾಫಿ ಬೆಳೆ

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೆ ಇರುವ ಬೆಳೆಗಾರರ ಸಂಕಷ್ಟಗಳು
Published : 1 ಅಕ್ಟೋಬರ್ 2024, 7:01 IST
Last Updated : 1 ಅಕ್ಟೋಬರ್ 2024, 7:01 IST
ಫಾಲೋ ಮಾಡಿ
Comments

ಮಡಿಕೇರಿ: ವಿಶ್ವಸಂಸ್ಥೆ ಘೋಷಿಸಿದ ವಿಶ್ವ ಕಾಫಿ ದಿನಾಚರಣೆ ಇದೀಗ 10ನೇ ವರ್ಷಕ್ಕೆ ಕಾಲಿಡುತ್ತಿದೆ. ಆದರೆ, ಭಾರತದಲ್ಲಿ ವಿವಿಧ ಕಾರಣಗಳಿಂದ ಕಾಫಿ ಬೆಳೆ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಲಾರಂಭಿಸಿದೆ.

ರಾಜ್ಯದಲ್ಲೇ ಅತ್ಯಂತ ಹೆಚ್ಚು ಕಾಫಿ ಉತ್ಪಾದಿಸುವ ಕೊಡಗಿನಲ್ಲಿ ಹವಾಮಾನ ವೈಪರೀತ್ಯ, ಕೂಲಿಕಾರ್ಮಿಕರ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಕಾಫಿ ಕೃಷಿಯಿಂದಲೇ ಬೆಳೆಗಾರರು ವಿಮುಖರಾಗುವ ಸ್ಥಿತಿಗೆ ತಲುಪಿದ್ದಾರೆ. ಎಕರೆಗಟ್ಟಲೆ ಕಾಫಿತೋಟಗಳನ್ನು ಭೂಪರಿವರ್ತನೆ ಮಾಡಿ ಬಡಾವಣೆಗಳು ನಿರ್ಮಾಣ ಮಾಡುವ ಪ್ರಯತ್ನಗಳು ಸಾಗಿವೆ. ಕಾಫಿ ತೋಟಗಿಂತಲೂ ಭೂಪರಿವರ್ತನೆ ಮಾಡಿ ವಾಣಿಜ್ಯ ಬಳಕೆಗೆ ಉಪಯೋಗಿಸುವುದೇ ಲಾಭ ಎನ್ನುವ ಭಾವನೆ ದಟ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳನ್ನು ಬೃಹತ್ ಪ್ರಮಾಣದಲ್ಲಿ ಭೂಪರಿವರ್ತನೆ ಮಾಡುವುದು ಬೇಡ ಎನ್ನುವ ಹೋರಾಟವೂ ಜಿಲ್ಲೆಯಲ್ಲಿ ಆರಂಭವಾಗಿದೆ.

ಮತ್ತೊಂದಡೆ, ಕಾಫಿ ಬೆಳೆ ಜಿಲ್ಲೆಯಲ್ಲಿ ಸ್ಥಿತ್ಯಂತರವನ್ನು ಕಾಣಲಾರಂಭಿಸುತ್ತಿದೆ. ಇಲ್ಲಿನ ಪಾರಂಪರಿಕ ತಳಿಯಾದ ಅರೇಬಿಕಾ ಕಾಫಿಯಿಂದ ರೊಬಸ್ಟಾ ಕಾಫಿ ಕಡೆಗೆ ಬೆಳೆಗಾರರು ಚಿತ್ತ ಹರಿಸುತ್ತಿದ್ದಾರೆ. ಇದರಿಂದ ಕೊಡಗು ಜಿಲ್ಲೆ ಜಿ.ಐ ಟ್ಯಾಗ್ ಪಡೆದಿರುವ ಅರೇಬಿಕಾ ಕಾಫಿ ಬೆಳೆ ಕ್ರಮೇಣ ಇಳಿಮುಖವಾಗುತ್ತಿದೆ.

ಒಂದಡೆ ಕಾಫಿ ಬೆಳೆಗಾರರು ಹಲವು ಸಮಸ್ಯೆಗಳಿಂದ ಬಸವಳಿಯುತ್ತಿದ್ದರೆ, ಮತ್ತೊಂದೆಡೆ ನಮ್ಮಿಂದ ತರಬೇತಿ ಪಡೆದು ಕಳೆದ ಕೆಲವು ದಶಕಗಳಿಂದೀಚೆಗೆ ಕಾಫಿ ಬೆಳೆಯಲು ಆರಂಭಿಸಿದ ವಿಯಟ್ನಾಂನಂತಹ ದೇಶಗಳು ನಮಗಿಂತಲೂ ವಿಫುಲವಾಗಿ ಕಾಫಿ ಬೆಳೆಯಲಾರಂಭಿಸಿವೆ. ಒಂದು ಎಕರೆಗೆ ನಮ್ಮಲ್ಲಿ 1ರಿಂದ 1.2 ಟನ್‌ ಇಳುವರಿ ಬಂದರೆ ವಿಯಟ್ನಾಂನಲ್ಲಿ 2ರಿಂದ 2.5 ಟನ್‌ ಇಳುವರಿ ಬರುತ್ತಿದೆ.

ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾಗುವ ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ವನ್ಯಜೀವಿ ಉಪಟಳ, ಏರುತ್ತಿರುವ ನಿರ್ವಹಣಾ ವೆಚ್ಚ, ಕೂಲಿಕಾರ್ಮಿಕರ ಕೊರತೆ, ಸರ್ಕಾರಗಳ ಸತತ ನಿರ್ಲಕ್ಷ್ಯ ಕಾಫಿ ಬೆಳೆಗಾರರ ಪ್ರಮುಖ ಸವಾಲುಗಳೆನಿಸಿವೆ. ಈ ಸವಾಲುಗಳನ್ನು ಎದುರಿಸಲು ಅವರಿಗೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ನೀಡುತ್ತಿಲ್ಲ ಎಂಬ ನೋವು ಬೆಳೆಗಾರರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT