ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲಿಗೆ ಬಂತು ಬಸ್‌ನಿಲ್ದಾಣ ಭಾಗ್ಯ!

ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ
Published 1 ಮಾರ್ಚ್ 2024, 4:27 IST
Last Updated 1 ಮಾರ್ಚ್ 2024, 4:27 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಹಲವು ವರ್ಷಗಳ ಬೇಡಿಕೆಯಾಗಿದ್ದ ಇಲ್ಲಿನ ಬಸ್ ನಿಲ್ದಾಣದ ನಿರ್ಮಾಣದ ಕಾಮಗಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯಿತಿಗೆ ಸೇರಿದ ಬಸ್ ನಿಲ್ದಾಣದ ಪ್ರಯಾಣಿಕರ ತಂಗುದಾಣ ಮಳೆಗೆ ಕುಸಿದು ಬಿದ್ದಿತ್ತು. ಅಂದಿನಿಂದ ಪ್ರಯಾಣಿಕರು ನಿಲ್ಲಲು ಸ್ಥಳವಿಲ್ಲದೆ ಬಿಸಿಲು ಮತ್ತು ಮಳೆಯಲ್ಲಿ ಪರದಾಡುತ್ತಿದ್ದರು. ಈ ಸಮಸ್ಯೆಯನ್ನು ನೀಗಿಸುವಂತೆ ಜನತೆ ಬಹಳ ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದರು.

‘ಇದೀಗ ಈ ಕಾಮಗಾರಿಗೆ ಸಮಯ ಕೂಡಿ ಬಂದಿದ್ದು ಶೌಚಾಲಯ, ಕುಡಿಯುವ ನೀರು ಪ್ರಯಾಣಕರು ಕುಳಿತುಕೊಳ್ಳುವ ಆಸನ ಮೊದಲಾದ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಬಸ್ ನಿಲ್ದಾಣದ ಜತೆಗೆ ತಂಗುದಾಣವನ್ನೂ ನಿರ್ಮಾಣ ಮಾಡಲಾಗುವುದು’ ಎಂದು ಎ.ಎಸ್.ಪೊನ್ನಣ್ಣ ಹೇಳಿದರು.

ಇದಕ್ಕೆ ಸಂಬಂಧಿಸಿದ ಅನುದಾನ, ಅಂದಾಜು ಪಟ್ಟಿ ಇಲಾಖೆ ಅನುಮೋದನೆ, ಕಾರ್ಯಾದೇಶ ಪಡೆದುಕೊಂಡೇ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಗುತ್ತಿಗೆದಾರರು ಯಾವುದೇ ಸಬೂಬು ಹೇಳದೆ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಿ ಕೆಲಸ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕರ ಹರ್ಷ: ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಗಣಪತಿ ಮಾತನಾಡಿ, ‘ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲುವ ಸ್ಥಳದಲ್ಲಿ ಪ್ರಯಾಣಿಕರ ತಂಗುದಾನವಿಲ್ಲದೆ ಅಂಗಡಿ ಮುಂಗಟ್ಟುಗಳನ್ನು ಆಶ್ರಯಿಸಿದ್ದರು. ಜತೆಗೆ, ವಾಹನ ನಿಲುಗಡೆಗೂ ಕಷ್ಟಕರವಾಗಿತ್ತು. ಇದೀಗ ವ್ಯವಸ್ಥಿತವಾದ ರೀತಿಯಲ್ಲಿ ಬಸ್ ನಿಲ್ದಾಣದ ಕಟ್ಟಡ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಶಾಸಕ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಪೊನ್ನಣ್ಣ ಡಾಂಬರೀಕರಣಗೊಂಡ ಕಾನೂರು ಬೆಕ್ಕೆಸೊಡ್ಲೂರು ರಸ್ತೆಯನ್ನೂ ಉದ್ಘಾಟಿಸಿದರು.

ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಕೂಡಲೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ನಿಟ್ಟೂರು ಬಳಿಯ ಲಕ್ಷ್ಮಣತೀರ್ಥ ನದಿ ದೋಣಿಕಡವು ಕುಸಿದು ಕೃಷಿ ಗದ್ದೆಗಳಿಗೆ ಹಾನಿಯಾಗುತ್ತಿರುವುದರ ಬಗ್ಗೆ ಸ್ಥಳೀಯ ಕೃಷಿಕರ ಮನವಿ ಸಲ್ಲಿಸಿದ್ದರು. ಈ ಕುರಿತು ಸಣ್ಣ ನೀರಾವರಿ ಇಲಾಖೆಯಿಂದ ತಗುಲುವ ವೆಚ್ಚ ಭರಿಸಿ ತಡೆಗೋಡೆ ನಿರ್ಮಿಸಲು ಭೂಮಿಪೂಜೆ ನೆರವೇರಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಎಸ್ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಕಾಂಗ್ರೆಸ್ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪೃಥ್ಯು, ವಕ್ತಾರ ಟಾಟು ಮೊಣ್ಣಪ್ಪ, ಹಿರಿಯ ಕಾಂಗ್ರೆಸ್ ಮುಖಂಡ ಅಜಿತ್ ಅಯ್ಯಪ್ಪ, ಶಿವಾಜಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಪಿ.ಜಿ.ರಾಜಶೇಖರ್, ಹಾತ್ತೂರು ವಲಯ ಅಧ್ಯಕ್ಷ ರೋಷನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಲಾಲ ಅಪ್ಪಣ್ಣ, ಸದಸ್ಯೆ ತೆರೇಸಾ ವಿಕ್ಟರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ.ಬಾಬು, ಉಪಾಧ್ಯಕ್ಷ ಅಬ್ದುಲ್ ಸಮ್ಮದ್, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT