ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿಯಲಿ ಕೊಡಗಿನ ಸ್ವಾತಂತ್ರ್ಯ ಹೋರಾಟದ ಹೆಗ್ಗುರುತು

Published 15 ಆಗಸ್ಟ್ 2023, 4:39 IST
Last Updated 15 ಆಗಸ್ಟ್ 2023, 4:39 IST
ಅಕ್ಷರ ಗಾತ್ರ

ಕೆ.ಎಸ್.ಗಿರೀಶ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯೂ ಅವಜ್ಞೆಗೆ ತುತ್ತಾಗಿದೆ. ಒಮ್ಮೆ ಇತಿಹಾಸದತ್ತ ದೃಷ್ಟಿ ಹರಿಸಿದರೆ, ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿದ್ದ ಕೊಡಗಿನಲ್ಲಿ ಸಾಲು ಸಾಲು ಚಳವಳಿಗಳು, ಬಲಿದಾನಗಳು ನಡೆದಿರುವುದು ಕಂಡು ಬರುತ್ತದೆ. ಆದರೆ, ಇವೆಲ್ಲವನ್ನೂ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ನಡೆದಿಲ್ಲ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ರೂಪಿಸಿದ https://amritmahotsav-nic-in ವೆಬ್‌ಸೈಟ್‌ ಇಲ್ಲಿನ ಕೊಡಗಿನ ಗೌರಮ್ಮ ಅವರ ಸಾಧನೆಯನ್ನು ಪ್ರಕಟಿಸಿದೆ. ಇದರಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಸ್ವಾತಂತ್ರ್ಯ ಚಳವಳಿಗಾಗಿ ತಮ್ಮ ಆಭರಣಗಳನ್ನು ಗೌರಮ್ಮ ನೀಡಿದ ವಿವರಗಳೂ ಸೇರಿದಂತೆ ಅವರ ದೇಶಭಕ್ತಿ, ದೇಶಸೇವೆಯ ವಿವರಗಳನ್ನು ದಾಖಲಿಸಲಾಗಿದೆ. ಆಭರಣ ನೀಡಿದ ಘಟನೆಯನ್ನು ಮಹಾತ್ಮ ಗಾಂಧೀಜಿ ಅವರು ತಮ್ಮ ಪತ್ರಿಕೆಯಲ್ಲಿ 1934ರ ಮಾರ್ಚ್ 2ರ ಸಂಚಿಕೆಯಲ್ಲಿಯೂ ಬರೆದಿದ್ದಾರೆ.

ಈ ರೀತಿಯ ಇನ್ನಿತರ ಅನೇಕ ಘಟನೆಗಳ ದಾಖಲೀಕರಣದ ಪ್ರಯತ್ನಗಳು ಜಿಲ್ಲೆಯಲ್ಲಿ ನಡೆದಿಲ್ಲ.

ಬ್ರಿಟಿಷರು ಇಲ್ಲಿನ ರಾಜರನ್ನು ಪದಚ್ಯುತಗೊಳಿಸಿ ನೇರವಾಗಿ ಆಳ್ವಿಕೆಯನ್ನು ತಮ್ಮ ಕೈಗೆ ತೆಗೆದುಕೊಂಡ ಬಳಿಕ ನಡೆದ ಕಲ್ಯಾಣಸ್ವಾಮಿಯ ದಂಗೆಯನ್ನು ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದೇ ಕೆಲವು ಇತಿಹಾಸಕಾರರು ವ್ಯಾಖ್ಯಾನಿಸುತ್ತಾರೆ. ಏಕೆಂದರೆ, ಈ ಹೋರಾಟ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಕೊಡಗಿನಲ್ಲಿ ನಡೆದಿತ್ತು. ಆದರೂ, ಇದರ ಪ್ರಸ್ತಾವದ ಫಲಕಗಳು ಕೊಡಗಿನಲ್ಲಿ ಎಲ್ಲೂ ಕಂಡು ಬರುವುದಿಲ್ಲ.

ಬ್ರಿಟಿಷರ ವಿರುದ್ದ ಸಿಡಿದೆದ್ದ ವೀರ ಸೇನಾನಿ ಸುಬೇದಾರ್ ಅಪ್ಪಯ್ಯಗೌಡ ಅವರನ್ನು ಮಡಿಕೇರಿಯ ಕೋಟೆ ಆವರಣದ ಮುಂಭಾಗದಲ್ಲಿ 1837 ಅಕ್ಟೋಬರ್ 31 ರಂದು ಸಾರ್ವಜನಿಕವಾಗಿ ಅವರ ಪತ್ನಿಯ ಎದುರು ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಈ ಜಾಗವನ್ನೂ ಮರೆಯಲಾಗಿದೆ. ಇಂತಹ ಅನೇಕ ಹೋರಾಟಗಳು ಕೊಡಗಿನಲ್ಲಿ ನಡೆದಿವೆಯಾದರೂ, ಅವುಗಳನ್ನು ದಾಖಲಿಸುವ ಪ್ರಯತ್ನಗಳು ಮಾತ್ರ ನಡೆದಿಲ್ಲ.

1930ರ ಹೊತ್ತಿಗೆ ಇಲ್ಲಿನ ಕೋಟೆಯಲ್ಲಿ ಹಾರುತ್ತಿದ್ದ ಬ್ರಿಟಿಷರ ಧ್ವಜವನ್ನು ಬಿ.ಜಿ.ಗಣಪಯ್ಯ, ಮಂಡೇಪಂಡ ಕಾರ್ಯಪ್ಪ ಮತ್ತು ಮಲೇಂಗಡ ಚಂಗಪ್ಪ ಅವರು ಕೆಳಗಿಳಿಸಿ ರಾಷ್ಟ್ರೀಯ ಧ್ವಜವನ್ನು ಹಾರಿಸಿದ್ದು ದೇಶಾದ್ಯಂತ ಸುದ್ದಿಯಾಯಿತು. ಇದು ಮತ್ತೆ ಮತ್ತೆ ಪುನರಾವರ್ತನೆಯಾದಾಗ ಧ್ವಜದ ಕಾವಲಿಗೆ ಸಿಬ್ಬಂದಿಯನ್ನು ಬ್ರಿಟಿಷ್ ಸರ್ಕಾರ ನೇಮಕ ಮಾಡಿತು. ಈ ತರಹ ವಿವರಗಳನ್ನು ಕೋಟೆಯಲ್ಲಿ ಅಳವಡಿಸುವ ಅಗತ್ಯ ಇದೆ.

1934ರ ಹೊತ್ತಿಗೆ ಗಾಂಧೀಜಿ ಕೊಡಗಿಗೆ ಬಂದು, ಸ್ವಾತಂತ್ರ್ಯ ಚಳವಳಿಗೆ ಇನ್ನಷ್ಟು ಹುರುಪು ತುಂಬಿದರು. ಈ ಭೇಟಿಯ ನೆನಪುಗಳನ್ನು ಉಳಿಸುವ ಕಾರ್ಯಕ್ಕೆ ವೇಗ ದೊರಕಿಲ್ಲ.

ಇನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಹೆಸರಿಸುತ್ತಾ ಹೋದರೆ ನೂರಾರು ಮಂದಿ ಸಿಗುತ್ತಾರೆ. ಪಂದ್ಯಂಡ ಬೆಳ್ಯಪ್ಪ, ಕೆ.ಮಲ್ಲಪ್ಪ, ಎನ್.ಸೋಮಣ್ಣ, ನಂಜುಂಡೇಶ್ವರ, ಕೆ.ಸಿ.ಕರುಂಬಯ್ಯ, ವೆಂಕಪಯ್ಯ, ಕೆ.ಪದ್ಮನಾಭಯ್ಯ, ಕಾವೇರಿ ಹೀಗೆ ಅನೇಕ ಮಂದಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಇವರ ಹೆಸರುಗಳನ್ನು ಕನಿಷ್ಠ ಹೊಸದಾಗಿ ನಿರ್ಮಾಣವಾಗಿರುವ ಗಾಂಧಿ ಭವನದಲ್ಲಿ
ಅಳವಡಿಸಬೇಕಿದೆ.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಡಿಕೇರಿಯ ಕೋಟೆ ಆವರಣದಲ್ಲಿ ಸಿದ್ಧತಾ ಕಾರ್ಯಗಳು ಸೋಮವಾರ ನಡೆದವು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಡಿಕೇರಿಯ ಕೋಟೆ ಆವರಣದಲ್ಲಿ ಸಿದ್ಧತಾ ಕಾರ್ಯಗಳು ಸೋಮವಾರ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT