ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾವೇರಿಯಲ್ಲಿ ತೀರ್ಥೋದ್ಭವ ಸಂಭ್ರಮ: ತೀರ್ಥರೂಪದಲ್ಲಿ ಒಲಿದ ಜೀವನದಿ ‘ಕಾವೇರಿ’

ಕಾವೇರಿ ಮಾತೆಗೆ ಜಯವಾಗಲಿ
Last Updated 17 ಅಕ್ಟೋಬರ್ 2020, 1:55 IST
ಅಕ್ಷರ ಗಾತ್ರ

ತಲಕಾವೇರಿ (ಮಡಿಕೇರಿ ತಾಲ್ಲೂಕು): ಜೀವನದಿ ‘ಕಾವೇರಿ’ಗೆ ಶನಿವಾರ ಬೆಳಿಗ್ಗೆಯೇ ತೀರ್ಥೋದ್ಭವ ಸಂಭ್ರಮ. ಕ್ಷೇತ್ರದಲ್ಲಿ ಚಳಿಯ ವಾತಾವರಣದ ನಡುವೆ ನಿಗದಿತ ಸಮಯವಾದ ಕನ್ಯಾ ಲಗ್ನದಲ್ಲಿ ಬೆಳಿಗ್ಗೆ 7.03ಕ್ಕೆ ಸರಿಯಾಗಿ, ಕಾವೇರಿಯು ತೀರ್ಥರೂಪದಲ್ಲಿ ಒಲಿದಳು.

ತೀರ್ಥೋದ್ಭವ ಆಗುತ್ತಿದ್ದಂತೆಯೇ ನೆರೆದಿದ್ದ ಭಕ್ತರು ‘ಜೈ ಜೈ ಮಾತಾ ಕಾವೇರಿ ಮಾತಾ...’, ‘ಕಾವೇರಿ ಮಾತಾಕೀ ಜೈ...’ ಎನ್ನುವ ಜಯಘೋಷಗಳು ಮೊಳಗಿಸಿದರು.

ಗೋಪಾಲಕೃಷ್ಣ ಆಚಾರ್ಯ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ತೀರ್ಥೋದ್ಭವಕ್ಕೂ ಮುನ್ನ ಮಹಾಸಂಕಲ್ಪ ಪೂಜೆ, ಕುಂಕುಮಾರ್ಚನೆ ನೆರವೇರಿಸಿದರು.

ಭಕ್ತರ ನಂಬಿಕೆಯ ತೀರ್ಥೋದ್ಭವ ವರ್ಷಕ್ಕೊಮ್ಮೆ ನಡೆಯುತ್ತದೆ. ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ಕಾವೇರಿಯು ತೀರ್ಥರೂಪದಲ್ಲಿ ಉಕ್ಕೇರುತ್ತಾಳೆ. ಅದನ್ನು ಪ್ರೋಕ್ಷಣೆ ಮಾಡಿಕೊಳ್ಳುವ ಭಕ್ತರು, ಧನ್ಯತಾಭಾವ ತೋರುತ್ತಾರೆ. ಈ ವರ್ಷ ಕೋವಿಡ್‌ ಕಾರಣದಿಂದ ಯಾರನ್ನೂ ಸ್ನಾನದ ಕೊಳಕ್ಕೆ ಇಳಿಯಲು ಬಿಡಲಿಲ್ಲ. ನೆರೆದಿದ್ದ ಕೆಲವರಿಗೆ ಮಾತ್ರ, ಅರ್ಚಕರು ತೀರ್ಥ ಪ್ರೋಕ್ಷಣೆ ಮಾಡಿದರು.

ಭಕ್ತರ ಸಂಖ್ಯೆ:ಜಿಲ್ಲಾಡಳಿತದ ಬಿಗಿಯಾದ ಕ್ರಮ ಹಾಗೂ ಕೋವಿಡ್‌ ಭೀತಿಯಿಂದ ಭಕ್ತರ ಸಂಖ್ಯೆ ಈ ವರ್ಷ ಕ್ಷೀಣಿಸಿತ್ತು. ಪ್ರತಿ ವರ್ಷವೂ ಯಾವುದೇ ಸಮಯದಲ್ಲಿ ತೀರ್ಥೋದ್ಭವ ನಡೆದರೂ ತಮಿಳುನಾಡು ಹಾಗೂ ಕೇರಳ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಿದ್ದರು. ಅವರೂ ಈ ವರ್ಷ ಇರಲಿಲ್ಲ. ಪ್ರತಿ ವರ್ಷದ ತೀರ್ಥೋದ್ಭವ ಸಂಭ್ರಮ ಹೆಚ್ಚೇ ಇರುತ್ತಿತ್ತು. ಆದರೆ, ಈ ಬಾರಿ ಕಳೆಗುಂದಿತ್ತು.

ಭಾಗಮಂಡಲದಲ್ಲೂ ಪೂಜೆ:ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲೂ ವಿಶೇಷ ಪೂಜೆ ನೆರವೇರಿತು. ಅಲ್ಲಿಯೂ ಭಕ್ತರ ಸಂಖ್ಯೆ ಕಡಿಮೆಯಿತ್ತು. ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಕೋವಿಡ್‌ ನಮ್ಮ ಸಂಭ್ರಮವನ್ನು ಕಸಿದಿದೆ. ಸಂಪ್ರದಾಯಕ್ಕೆ ಅಡ್ಡಿಯಾಗದಂತೆ ಎಲ್ಲ ಧಾರ್ಮಿಕ ಕಾರ್ಯ ನೆರವೇರಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ಅರ್ಚಕರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಭಾಗಮಂಡಲ – ತಲಕಾವೇರಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಪಂಚಾಯಿತಿ ಸಿಇಒ ಭನ್ವರ್‌ ಸಿಂಗ್‌ ಮೀನಾ ಹಾಜರಿದ್ದರು.

ಅಪ್ಪಚ್ಚು ರಂಜನ್, ವೀಣಾ ಆಕ್ರೋಶ: ಕೊಡವ ಯುವ ಸಂಘಟನೆಗೆ ಅವಕಾಶ

ಕೋವಿಡ್ ಹಿನ್ನೆಲೆ ತೀರ್ಥೋದ್ಭವಕ್ಕೆ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ. ಆದರೆ ಶಾಸಕ ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಪ್ರವೇಶ ನೀಡಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಶಾಸಕರ ಒತ್ತಡಕ್ಕೆ ಮಣಿದ ಪೊಲೀಸರು ಕೊಡವ ಯುವ ಸಂಘಟನೆಯ ಯುವಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದರು.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರು ಕೋವಿಡ್‌–19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿ ತಂದರೆ ಮಾತ್ರ ಅಂದು ಕ್ಷೇತ್ರಕ್ಕೆ ಅವಕಾಶ ನೀಡಲು ಸ್ಥಳೀಯ ಆಡಳಿತ ನಿರ್ಧರಿಸಿತ್ತು.

‘ಜಿಲ್ಲೆಯಲ್ಲೂ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿವೆ. ಸ್ಥಳೀಯರು ತೀರ್ಥೋದ್ಭವದ ವೇಳೆ ಮುನ್ನೆಚ್ಚರಿಕೆ ವಹಿಸಬೇಕು. ಅಂತರ ಕಾಯ್ದುಕೊಂಡು ಕಾವೇರಿಯ ದರ್ಶನ ಮಾಡಬೇಕು. ಈ ವರ್ಷ ಜನದಟ್ಟಣೆಗೆ ಅವಕಾಶ ಇರುವುದಿಲ್ಲ. ಆದರೆ, ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಕೆ.ಜಿ.ಬೋಪಯ್ಯ ಹೇಳಿದ್ದರು.

'ಹಿಂದಿನ ವರ್ಷಗಳಿಗಿಂತ ಈ ಬಾರಿ ಪರಿಸ್ಥಿತಿ ಭಿನ್ನ. ಹೆಚ್ಚು ಜನ ಸೇರಿದರೆ ಸೋಂಕು ಹರಡುವ ಸಾಧ್ಯತೆಯಿದೆ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಿ.ಜಿಲ್ಲೆಯ ಜನರು ಪ್ರಸ್ತುತ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು.ಪ್ರವಾಸಿಗರು, ಹಿರಿಯರು, ಮಕ್ಕಳು, ಗರ್ಭಿಣಿ ಮಹಿಳೆಯರು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆ ಇರುವವರು ಮನೆಯಲ್ಲೇ ಇರಬೇಕು' ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT