ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಯೋಜನೆ ಪ್ರಸ್ತಾವ, ಸಲಹೆ, ಮನವಿ ಮಹಾಪೂರ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ
Published 31 ಜನವರಿ 2024, 3:01 IST
Last Updated 31 ಜನವರಿ 2024, 3:01 IST
ಅಕ್ಷರ ಗಾತ್ರ

ಮಡಿಕೇರಿ: ಒಂದೆಡೆ ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಸ್ಥಳಗಳ ಅಭಿವೃದ್ಧಿಗೆ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಒಂದರ ಮೇಲೊಂದರಂತೆ ಯೋಜನೆಗಳನ್ನು, ಪ್ರಸ್ತಾವಗಳನ್ನು ಸಭೆಯ ಮುಂದಿಟ್ಟರೆ, ಮತ್ತೊಂದೆಡೆ ವಿವಿಧ ವಲಯಗಳ ತಜ್ಞರು ಸಾಲು ಸಾಲು ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸಲಹೆಗಳನ್ನು ನೀಡಿದರು.

ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಡೆಸಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಬಗೆಯ ದೃಶ್ಯಗಳು ಕಂಡು ಬಂದವು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿಯಾಗಿ ಈಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಅನಿತಾ ಭಾಸ್ಕರ್ ಅವರು ಸಭೆಯ ಆರಂಭದಲ್ಲೇ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆಂದು ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

‘ಪ್ರವಾಸಿ ತಾಣಗಳಾದ ರಾಜಾಸೀಟು, ಚೇಲಾವರ ಜಲಪಾತ, ದುಬಾರೆ ಆನೆ ಶಿಬಿರ ಮತ್ತು ನಿಸರ್ಗಧಾಮ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ‘ಮಾಸ್ಟರ್ ಪ್ಲಾನ್’ ಹಾಗೂ ಯೋಜನಾ ವರದಿಯನ್ನು ತಯಾರಿಸಲು ಮುಂದಾಗಲಾಗಿದೆ. ಹಾಗೆಯೇ, ಕುಂಬೂರು ಗ್ರಾಮದ ಬಳಿ ಇರುವ ಮಕ್ಕಳ ಗುಡಿಬೆಟ್ಟ ಅಭಿವೃದ್ಧಿ ಪಡಿಸಲು ಯೋಜನಾ ವರದಿ ತಯಾರಿಸಲಾಗಿದೆ’ ಎಂದು ಹೇಳಿದರು.

ಕೊಡಗು ಹೋಂ ಸ್ಟೇಗಳ ದರ ಸೇರಿದಂತೆ ಅಗತ್ಯ ಮೂಲಸೌಕರ್ಯ ಮತ್ತಿತರ ಮಾಹಿತಿ ಒಳಗೊಂಡ ‘ವೆಬ್‍ಸೈಟ್’ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದ್ದು, ಅನುಮತಿ ದೊರೆಯಬೇಕಿದೆ ಎಂದರು.

ಹೋಂ ಸ್ಟೇ ಮಾಲೀಕರು ಹಾಗೂ ಟ್ಯಾಕ್ಸಿ ಮಾಲೀಕರಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲು, ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಹೆದ್ದಾರಿ ಫಲಕ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾಲು ಸಾಲು ಮನವಿಗಳು, ಸಲಹೆಗಳ ಮಹಾ‍ಪೂರ

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ದೇವಯ್ಯ, ‘ಟ್ಯಾಕ್ಸಿ ಹಾಗೂ ಜೀಪುಗಳಿಗೆ ವೇಗ ನಿಯಂತ್ರಣ ಅಳವಡಿಸಬೇಕು ಹಾಗೂ ತಲಕಾವೇರಿ ಭಾಗಮಂಡಲ ಕ್ಷೇತ್ರವನ್ನು ಪವಿತ್ರ ಧಾರ್ಮಿಕ ಕ್ಷೇತ್ರವೆಂದು ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

ಹೋಂ ಸ್ಟೇ ಅಸೋಷಿಯೇಷನ್‍ನ ಮೋಂತಿ ಗಣೇಶ್ ಮಾತನಾಡಿ, ‘ಮಾಂದಲ್‍ಪಟ್ಟಿಯಲ್ಲಿ ಅರಣ್ಯ ಇಲಾಖೆಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಜೊತೆಗೆ, ಪ್ರವಾಸಿಗರನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು’ ಎಂದು ಕೋರಿದರು.

ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ‘ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ಸ್ಥಳಗಳನ್ನು ಪ್ರತ್ಯೇಕವಾಗಿ ಗುರುತಿಸಿ ವೆಬ್‍ಸೈಟ್‍ನಲ್ಲಿ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್‍ನ ಅಧ್ಯಕ್ಷ ಬೆನ್ ಗಣಪತಿ ಮಾತನಾಡಿ, ‘ಹೋಂ ಸ್ಟೇ ಆರಂಭಿಸುವಾಗ ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಿಂಬರಹ ಪಡೆಯಬೇಕಿದೆ. ಜೊತೆಗೆ ಪೊಲೀಸ್ ಇಲಾಖೆಯಿಂದ ಮತ್ತು ಸ್ಥಳೀಯ ಸಂಸ್ಥೆಗಳಿಂದ ಎನ್‍ಒಸಿ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಸಕಾಲದಲ್ಲಿ ಪ್ರಕ್ರಿಯೆಗಳು ಆಗಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷರಾದ ಕುಪ್ಪಂಡ ವಸಂತ, ‘ಟ್ಯಾಕ್ಸಿ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಹಾಗೂ ಬ್ಯಾಡ್ಜ್ ಹೊಂದಿರಬೇಕು. ಟ್ಯಾಕ್ಸಿ ನಿಲುಗಡೆ ಸ್ಥಳದಲ್ಲಿ ದರ ನಿಗದಿಪಡಿಸಿ ದರಪಟ್ಟಿಯ ನಾಮಫಲಕ ಅಳವಡಿಸಲಾಗುವುದು ಎಂದು ತಿಳಿಸಿದರು.

ಕೂರ್ಗ್ ಹೋಂ ಸ್ಟೇ ಅಸೋಷಿಯೇಷನ್‍ನ ಕೆ.ಎಂ.ಕರುಂಬಯ್ಯ, ಹೋಟೆಲ್ ಅಸೋಷಿಯೇಷನ್‍ನ ಉಪಾಧ್ಯಕ್ಷ ಜಾಹೀರ್ ಅಹಮದ್, ಕಾರ್ಯದರ್ಶಿ ನಾಸೀರ್ ಅಹಮ್ಮದ್, ಖಜಾಂಜಿ ಅಥಿತಿ ಭಾಸ್ಕರ್, ಸೋಮವಾರಪೇಟೆ ತಾಲ್ಲೂಕು ಹೋಂ ಸ್ಟೇ ಅಧ್ಯಕ್ಷ ರೋಹಿತ್ ಹಲವು ವಿಚಾರ ಕುರಿತು ಪ್ರಸ್ತಾಪಿಸಿದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯಾ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ನೇತ್ರಾವತಿ ಸಭೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ವಲಯದ ಪರಿಣತರು ಹಾಗೂ ಅಧಿಕಾರಿಗಳು
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ವಲಯದ ಪರಿಣತರು ಹಾಗೂ ಅಧಿಕಾರಿಗಳು

ಹಲವು ವಲಯದ ತಜ್ಞರು ಸಭೆಯಲ್ಲಿ ಭಾಗಿ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಸಲಹೆ ವೆಬ್‌ಸೈಟ್ ರೂಪಿಸುವ ಚಿಂತನೆ

ಗಾಜಿನ ಸೇತುವೆಗೆ ನಿಯಮಗಳು ಅನ್ವಯ

ಜಿಲ್ಲೆಯಲ್ಲಿ ಗಾಜಿನ ಸೇತುವೆ ನಿರ್ಮಿಸಲು ಅನುಮತಿ ಕೋರಿ ಸಾಕಷ್ಟು ಅರ್ಜಿಗಳು ಬರುತ್ತಿವೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಅವರು ಸಭೆಯ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ‘ಗಾಜಿನ ಸೇತುವೆ ನಿರ್ಮಿಸಲು ಸ್ವಂತ ಜಾಗ ಹೊಂದಿರಬೇಕು. ವಾಹನ ನಿಲುಗಡೆಗೆ ವ್ಯವಸ್ಥೆ ಇರಬೇಕು. ಅರಣ್ಯ ಇಲಾಖೆ ಅಥವಾ ‘ಇಕೋ ಟೂರಿಸಂ’ ವ್ಯಾಪ್ತಿಗೆ ಬರಬಾರದು. ಈ ಎಲ್ಲಾ ಮಾನದಂಡ ಪಾಲಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿಯಿಂದ ಹಲವು ಸೂಚನೆ

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ‘ಟ್ಯಾಕ್ಸಿ ಸೇವೆ ಒದಗಿಸುತ್ತಿರುವವರು ಶಿಸ್ತು ಕಾಪಾಡಿಕೊಳ್ಳಬೇಕು. ಪ್ರತೀ 6 ತಿಂಗಳಿಗೊಮ್ಮೆ ಒಂದು ದಿನಕ್ಕೆ ಎಷ್ಟು ದರ ಎಂಬ ಬಗ್ಗೆ ದರಪಟ್ಟಿಯ ಮಾಹಿತಿಯನ್ನು ಒದಗಿಸಬೇಕು. ಜಿಲ್ಲೆಯಲ್ಲಿ 4 ಸಾವಿರ ಹೋಂ ಸ್ಟೇಗಳಿದ್ದು ಸುಮಾರು 1900 ರಷ್ಟು ಹೋಂ ಸ್ಟೇಗಳು ನೋಂದಣಿಯಾಗಿವೆ. ಉಳಿದ ಹೋಂ ಸ್ಟೇಗಳನ್ನು ನೋಂದಣಿ ಮಾಡಿಸಬೇಕು’ ಎಂದು ಎಂದು ಸೂಚಿಸಿದರು. ‘ಮಾಂದಲ್‍ಪಟ್ಟಿ ಮತ್ತು ಅಬ್ಬಿಪಾಲ್ಸ್ ಮತ್ತಿತರ ಕಡೆಗಳಲ್ಲಿ ‘ಯೆಲ್ಲೋ ಬೋರ್ಡ್’ ಹೊರತುಪಡಿಸಿ ‘ವೈಟ್‍ಬೋರ್ಡ್’ ವಾಹನಗಳು ಸಹ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬಗ್ಗೆ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ಹೇಳಿದರು. ‘ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಒಂದು ದರ ನಿಗದಿ ಮಾಡಿ ದರಪಟ್ಟಿಯ ನಾಮಫಲಕ ಅಳವಡಿಸಬೇಕು’ ಎಂದು ತಿಳಿಸಿದರು. ಕೊಡವ ಹೆರಿಟೇಜ್ ಕೇಂದ್ರದ ಕೆಲಸ ಪೂರ್ಣಗೊಳ್ಳದೆ ಹಸ್ತಾಂತರ ಮಾಡಿಕೊಳ್ಳಬಾರದು ಎಂದೂ ಅವರು ಇದೇ ವೇಳೆ ಅನಿತಾ ಭಾಸ್ಕರ್ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT