ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಶೇ 50 ಮೀಸಲಾತಿಗೆ ಅನಿತಾ ಪೂವಯ್ಯ ಒತ್ತಾಯ

Published 29 ಫೆಬ್ರುವರಿ 2024, 7:45 IST
Last Updated 29 ಫೆಬ್ರುವರಿ 2024, 7:45 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ 40ಕ್ಕೂ ಅಧಿಕ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗಿಯಾಗಿದ್ದರು.

ಇಲ್ಲಿನ ಹೆರಿಟೇಜ್ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ವತಿಯಿಂದ ನಡೆದ ‘ಮೈಸೂರು ವಿಭಾಗದ ಆಯ್ದ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ’ದಲ್ಲಿ ಸರ್ಕಾರದ ಯೋಜನೆಗಳು, ಕಾನೂನಿನ ತಿದ್ದುಪಡಿಗಳು ಸೇರಿದಂತೆ ಹಲವು ವಿಷಯಗಳನ್ನು ವಿಷಯ ತಜ್ಞರು ತರಬೇತಿ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ‘ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇದ್ದು, ಇದನ್ನು ಶೇ 50ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಸ್ತ್ರೀಶಕ್ತಿ ಗುಂಪುಗಳು, ಮಹಿಳಾ ಸಂಘಟನೆಗಳು ಸಹಕಾರ ಸಂಘದ ಮೂಲಕ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಲವರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಕಾರಿಯಾಗಿದೆ. ಇದರಿಂದ ಸ್ವಾವಲಂಬಿ ಬದುಕಿಗೆ ಅನುಕೂಲ ಆಗಿದೆ’ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ.ಆರ್.ಎಚ್.ಪವಿತ್ರಾ ಮಾತನಾಡಿ, ‘ಮಹಿಳೆಯರು ತಾವು ದುಡಿದ ಹಣವನ್ನು ಸ್ವಲ್ಪವನ್ನಾದರೂ ಉಳಿತಾಯ ಮಾಡಿ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ಉಳಿತಾಯದಿಂದ ಆದಾಯ ಹೆಚ್ಚಳವಾಗುತ್ತದೆ, ಜೀವನಮಟ್ಟ ಸುಧಾರಿಸುತ್ತದೆ. ಜೊತೆಗೆ ಕೌಶಲ್ಯಾಭಿವೃದ್ಧಿ ಪಡೆದು, ಸ್ವ ಉದ್ಯೋಗ ಕೈಗೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು’ ಎಂದರು.

ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಎಚ್.ಎಸ್.ನಾಗರಾಜಯ್ಯ ಅವರು, ‘ಮಹಿಳಾ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಪೋಷಕವಾಗುವ ಸಹಕಾರ ಸಂಘಗಳ ಕಾಯ್ದೆಯ ಅಂಶಗಳ’ ಕುರಿತು ಮಾತನಾಡಿದರು.

ನಬಾರ್ಡ್‌ನ ನಿವೃತ್ತ ಅಧಿಕಾರಿ ಹಾಗೂ ತರಬೇತಿದಾರ ವೈ.ವಿ.ಗುಂಡೂರಾವ್ ಅವರು ಸಹಕಾರ ಸಂಘಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಸಮಯ ಮತ್ತು ಒತ್ತಡ ನಿರ್ವಹಣೆ ಕುರಿತು ಮಾತನಾಡಿದರು.

ಸಹಕಾರ ಇಲಾಖೆಯ ತರಬೇತಿ ವಿಭಾಗದ ಪ್ರಾಂಶುಪಾಲರಾದ ಆರ್.ಎಸ್.ರೇಣುಕಾ ಅವರು ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯಕ್ರಮ ಸಂಚಾಲಕಿ ಎಸ್.ಸುಕನ್ಯಾ, ಜಿಲ್ಲಾ ಸಹಕಾರ ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ, ಮಂಜುಳಾ, ಎಚ್.ಪಿ.ಭಾನುಮತಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 8 ಜಿಲ್ಲೆಗಳ 40ಕ್ಕೂ ಹೆಚ್ಚು ಸಹಕಾರ ಸಂಘಗಳ ಪ್ರತಿನಿಧಿಗಳು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 8 ಜಿಲ್ಲೆಗಳ 40ಕ್ಕೂ ಹೆಚ್ಚು ಸಹಕಾರ ಸಂಘಗಳ ಪ್ರತಿನಿಧಿಗಳು
40ಕ್ಕೂ ಅಧಿಕ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒ ಭಾಗಿ 8 ಜಿಲ್ಲೆಗಳಿಂದ ಬಂದಿದ್ದ ಪ್ರತಿನಿಧಿಗಳು ಮಡಿಕೇರಿಯಲ್ಲಿ 3 ವಿಷಯಗಳ ಬಗ್ಗೆ ತರಬೇತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT