ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೃಹತ್ ಭೂಪರಿವರ್ತನೆ ತಡೆದು ಪರಿಸರ, ಕೊಡವರನ್ನು ರಕ್ಷಿಸಲು ಒತ್ತಾಯ

ಮುಂದುವರಿದ ಸಿಎನ್‌ಸಿ ಪ್ರತಿಭಟನೆ; ಕಕ್ಕಬ್ಬೆಯಲ್ಲಿ ಸಿಎನ್‍ಸಿಯಿಂದ ಮಾನವ ಸರಪಳಿ
Published 2 ಜುಲೈ 2024, 4:55 IST
Last Updated 2 ಜುಲೈ 2024, 4:55 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಬೃಹತ್ ಕಾಫಿ ತೋಟಗಳ ಭೂಪರಿವರ್ತನೆ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಹೋರಾಟ ಮುಂದುವರಿದಿದೆ. ಸಂಘಟನೆಯ ಮುಖಂಡರು ಸೋಮವಾರ ಕಕ್ಕಬ್ಬೆಯಲ್ಲಿ ಮಾನವ ಸರಪಳಿ ರಚಿಸಿ, ಬೃಹತ್ ಪ್ರಮಾಣದಲ್ಲಿ ಕಾಫಿತೋಟಗಳನ್ನು ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಮಾಡುವುದರಿಂದಾಗುವ ಪರಿಣಾಮಗಳನ್ನು ಕುರಿತು ಜನರಲ್ಲಿ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು.

ಈ ವೇಳೆ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ, ‘ದೊಡ್ಡ ಪ್ರಮಾಣದ ಭೂಪರಿವರ್ತನೆಯಿಂದ ಕೊಡಗಿನ ಪರಿಸರ ಹಾಗೂ ಇಲ್ಲಿನ ಮೂಲನಿವಾಸಿಗಳ ಮೇಲೆ ಬಹುದೊಡ್ಡ ಮಾರಕ ಪರಿಣಾಮಗಳನ್ನು ಬೀರಲಿದೆ’ ಎಂದು ಎಚ್ಚರಿಸಿದರು.

ಈ ಬಗೆಯ ದೊಡ್ಡಮಟ್ಟದ ಭೂಪರಿವರ್ತನೆಯಿಂದ ಕಾಫಿತೋಟಗಳು ನಾಶವಾಗಿ, ಅಲ್ಲಿ ಕಟ್ಟಡಗಳು, ರೆಸಾರ್ಟ್‌ಗಳು ತಲೆ ಎತ್ತುತ್ತವೆ. ಅಲ್ಲಿರುವ ಮರಗಳು ನಾಶವಾಗಿ ಪರಿಸರದ ವ್ಯವಸ್ಥೆ ಸಮತೋಲನ ತಪ್ಪುತ್ತದೆ. ದೊಡ್ಡ ದೊಡ್ಡ ಗೋಡೆಗಳು ನಿರ್ಮಾಣವಾಗುವುದರಿಂದ ದೊಡ್ಡ ಕಾಫಿತೋಟಗಳಲ್ಲಿ ಹುಟ್ಟುವ ಮತ್ತು ಹರಿಯುವ ನೀರು ನಾಶವಾಗುತ್ತದೆ. ಇದು ಪರಿಸರದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಎಚ್ಚರಿಸಿದರು.

ಇನ್ನು ಜನಾಂಗೀಯವಾಗಿ ನೋಡುವುದಾದರೆ, ಇಲ್ಲಿನ ಕೊಡವರು ನೆಲೆ ಕಳೆದುಕೊಳ್ಳುತ್ತಾರೆ. ಪವಿತ್ರ ಕೊಡವ ಲ್ಯಾಂಡ್ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಡಗಿನ ರಿಯಲ್‌ ಎಸ್ಟೇಟ್ ವಲಯದಲ್ಲಿ ಕೊಡವರಿಗಿಂತ ಹೆಚ್ಚಾಗಿ ಹೊರಗಿನ ರಾಜ್ಯದವರ ಹೂಡಿಕೆಯೇ ಹೆಚ್ಚಾಗಿದೆ. ವಿಶೇಷವಾಗಿ, ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದ ಹಣ ಹೂಡಿಕೆಯಾಗುತ್ತಿದೆ ಎಂದು ಆರೋಪಿಸಿದರು.

ಪವಿತ್ರ ಕೊಡವ ಲ್ಯಾಂಡ್‌ನಲ್ಲಿ ಸ್ಥಳೀಯರ ಮೇಲೆ ಪ್ರವಾಸಿಗರ ದೌರ್ಜನ್ಯ ಮುಂದುವರಿಯುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯರ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ ಘಟನೆಗಳು ಕಂಡು ಬಂದಿವೆ. ಸಂಬಂಧಪಟ್ಟ ಇಲಾಖೆಗಳು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ‘ಕೊಡವ ಲ್ಯಾಂಡ್’ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವೆಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 6ರಂದು ಚೆಟ್ಟಳ್ಳಿಯಲ್ಲಿ ಮತ್ತು ಜುಲೈ 15ರಂದು ಪೊನ್ನಂಪೇಟೆಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಅಪ್ಪಾರಂಡ ನಂದಿನಿ ನಂಜಪ್ಪ, ನಾಟೋಳಂಡ ಕಮಲಾ, ಅರೆಯಡ ಸವಿತಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಾಂಡಂಡ ನರೇಶ್, ಕೆಟೋಳಿರ ಸನ್ನಿ ಸೊಮಣ್ಣ, ಬಾಚಮಂಡ ರಾಜಾ ಪೂವಣ್ಣ, ಚೇನಂಡ ಸುರೇಶ್, ಅಪ್ಪಾರಂಡ ಶ್ರೀನಿವಾಸ್, ಉದಿಯಂಡ ಸುಭಾಷ್, ಅಪ್ಪಾರಂಡ ಪ್ರಕಾಶ್, ಕಲ್ಯಾಟಂಡ ರಘು, ಅರೆಯಡ ಗಿರೀಶ್ ಭಾಗವಹಿಸಿದ್ದರು.

ಜುಲೈ 6ರಂದು ಚೆಟ್ಟಳ್ಳಿಯಲ್ಲಿ ಜನಜಾಗೃತಿ ಜುಲೈ 15ರಂದು ಪೊನ್ನಂಪೇಟೆಯಲ್ಲಿ ಮಾನವ ಸರಪ‍ಳಿ ಹೋರಾಟ ಮುಂದುವರಿಯುತ್ತದೆ ಎಂದ ಹೋರಾಟಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT