ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ | ನೀರು ಪೂರೈಕೆಯಲ್ಲಿ ವ್ಯತ್ಯಯ: ಪ್ರತಿಭಟನೆ

Published 2 ಮಾರ್ಚ್ 2024, 4:04 IST
Last Updated 2 ಮಾರ್ಚ್ 2024, 4:04 IST
ಅಕ್ಷರ ಗಾತ್ರ

ವಿರಾಜಪೇಟೆ: ಸಮೀಪದ ಆರ್ಜಿ ಗ್ರಾಮದ ಕಲ್ಲುಬಾಣೆಗೆ ಕಳೆದ ಎರಡು– ಮೂರು ದಿನಗಳಿಂದ ಕುಡಿಯುವ ನೀರು ಸರಬರಾಜು ಮಾಡಿಲ್ಲ ಎಂದು ಆರೋಪಿಸಿ ಕಲ್ಲುಬಾಣೆ ಬದ್ರಿಯಾ ಜುಮ್ಮಾ ಮಸೀದಿ ಜಂಕ್ಷನ್ ಬಳಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

‘ಕಳೆದ ನಾಲ್ಕು ದಿನದಿಂದ ಪಂಚಾಯಿತಿಯು ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಿಲ್ಲ. ಇದರಿಂದಾಗಿ ಕುಡಿಯಲು ಕೂಡ ಮನೆಯಲ್ಲಿ ನೀರಿಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಪಂಚಾಯಿತಿಯ ನೀರು ಹೊರತುಪಡಿಸಿ ಗ್ರಾಮದಲ್ಲಿ ಬೇರೆ ಯಾವುದೇ ನೀರಿನ ಮೂಲಗಳು ಇಲ್ಲ’ ಎಂದು ಗ್ರಾಮಸ್ಥರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಕೆಲದಿನಗಳ ಹಿಂದೆ ಪಂಚಾಯಿತಿಯಿಂದ ಕುಡಿಯುವ ನೀರಿಗೆ ಸಂಬಂಧಿಸಿದ ಸಭೆಗೆ ಗ್ರಾಮಸ್ಥರು ಹಾಜರಾಗದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನೀರು ಪೊರೈಕೆ ಮಾಡುತ್ತಿಲ್ಲ ಎಂಬರ್ಥದ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಡಿರುವುದು ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿತ್ತು.

ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಹಾಗೂ ಸದಸ್ಯರು ಪ್ರತಿಭಟನಾ ನಿರತ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಈ ಸಂದರ್ಭ ಕಲ್ಲುಬಾಣೆಯ ರಹಿಂ, ಯಾಹ್ಯ ಸೇರಿ ಸಾಕಷ್ಟು ಗ್ರಾಮಸ್ಥರು ಇದ್ದರು.

ಅಧ್ಯಕ್ಷೆ ಫಾತಿಮಾ ಮಾತನಾಡಿ, ‘ಪಂಚಾಯಿತಿಯಿಂದ ಕಲ್ಲುಬಾಣೆ ವಾರ್ಡ್‌ಗೆ ಸಂಬಂಧಿಸಿದಂತೆ ನೀರು ಮತ್ತು ನೈರ್ಮಲ್ಯ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಬೆರಳೆಣಿಕೆ ಮಂದಿ ಗ್ರಾಮಸ್ಥರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು. ಈ ಬಾರಿಯ ಸಭೆಯಲ್ಲಿ ನೀರಿನ ಸಂಸ್ಕರಣೆ, ನೈರ್ಮಲ್ಯ ಹಾಗೂ ನೀರಿನ ದರ ಏರಿಕೆ ಮಾಡುವ ಕುರಿತ ಚರ್ಚೆಗಳಿದ್ದರಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಬೇಕಾಗಿತ್ತು. ಆದರೆ ಬಹುತೇಕ ಗ್ರಾಮಸ್ಥರು ಸಭೆಗೆ ಹಾಜರಾಗಿಲ್ಲ. ಇದೀಗ ನೀರು ಸರಬರಾಜಿಗೆ ಸಂಬಂಧಿಸಿ ಕಾಮಗಾರಿ ನಡೆಯುತ್ತಿದ್ದು, ಎರಡು ದಿನ ಕಲ್ಲುಬಾಣೆಗೆ ನೀರು ಪೂರೈಕೆ ಮಾಡಲಾಗಿಲ್ಲ’ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಅವರು ಮಾತನಾಡಿ, ‘ಕಲ್ಲುಬಾಣೆಗೆ ನೀರು ಪೂರೈಸುವ ಪೈಪ್‌ಲೈನ್‌ ಕಾಮಗಾರಿ ನಡೆಸುತ್ತಿದ್ದು, ಎರಡು ದಿನದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು’ ಎಂದರು.

ವಿರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಕಲ್ಲುಬಾಣೆಗೆ ಕಳೆದ ಎರಡ್ಮೂರು ದಿನಗಳಿಂದ ಕುಡಿಯುವ ನೀರು ಸರಬರಾಜು ಮಾಡಿಲ್ಲ ಎಂದು ಆರೋಪಿಸಿ ಕಲ್ಲುಬಾಣೆಯ ಜಂಕ್ಷನ್ ಬಳಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ವಿರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಕಲ್ಲುಬಾಣೆಗೆ ಕಳೆದ ಎರಡ್ಮೂರು ದಿನಗಳಿಂದ ಕುಡಿಯುವ ನೀರು ಸರಬರಾಜು ಮಾಡಿಲ್ಲ ಎಂದು ಆರೋಪಿಸಿ ಕಲ್ಲುಬಾಣೆಯ ಜಂಕ್ಷನ್ ಬಳಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT