ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ₹10 ಸಾವಿರ ಕೋಟಿ ಪರಿಹಾರಕ್ಕೆ ಆಗ್ರಹಿಸಿದ ಸಂಸದ ವೀರಪ್ಪ ಮೊಯ್ಲಿ

Last Updated 10 ಅಕ್ಟೋಬರ್ 2018, 10:04 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಮರು ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ₹ 10 ಸಾವಿರ ಕೋಟಿಯ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಸಂಸದ ವೀರಪ್ಪ ಮೊಯ್ಲಿ ಆಗ್ರಹಿಸಿದರು.

ಭೂಕುಸಿತ ಪ್ರದೇಶಗಳಾದ ಹಟ್ಟಿಹೊಳೆ, ತಂತಿಪಾಲ, ಇಗ್ಗೋಡ್ಲು, ಮಕ್ಕಂದೂರು, ಮಾದಾಪುರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಕೇಂದ್ರವು ತಕ್ಷಣವೇ ಪರಿಹಾರ ಘೋಷಣೆ ಮಾಡಬೇಕಿತ್ತು. ಆದರೆ, ಯಾವ ಕಾರಣಕ್ಕೆ ವಿಳಂಬ ಮಾಡಿದೆಯೊ ತಿಳಿದಿಲ್ಲ. ರಾಜ್ಯ ಸರ್ಕಾರವೊಂದೇ ಇಷ್ಟೊಂದು ದೊಡ್ಡ ಪ್ರಮಾಣದ ಪರಿಹಾರ ನೀಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೂ ಕೈಜೋಡಿಸಿದರೆ ಸಂತ್ರಸ್ತರಿಗೆ ನೆರವು ನೀಡಲು ಸಾಧ್ಯ’ ಎಂದು ಹೇಳಿದರು.

‘ಕೆಲವು ಗ್ರಾಮಗಳಲ್ಲಿ ವಾಸದ ಮನೆಗಳು ಕುಸಿದಿವೆ. ಜೀವನಕ್ಕೆ ಆಧಾರವಾಗಿದ್ದ ಕಾಫಿ ತೋಟಗಳು ಸರ್ವನಾಶವಾಗಿವೆ. ಕೊಡಗಿನಲ್ಲಿ ಹಿಂದೆಂದೂ ಇಂತಹ ದುರ್ಘಟನೆ ನಡೆದಿರಲಿಲ್ಲ. ಇದು ಸ್ಥಳೀಯರು ಸೃಷ್ಟಿಸಿದ ಅನಾಹುತ ಅಲ್ಲ. ಪ್ರಕೃತಿ ವಿಕೋಪದಿಂದ ಆಗಿರುವ ದುರಂತ. ಭೂಗರ್ಭ ಶಾಸ್ತ್ರಜ್ಞರಿಂದ ಮತ್ತೊಮ್ಮೆ ಅಧ್ಯಯನ ನಡೆಸುವುದು ಅಗತ್ಯ’ ಎಂದು ಹೇಳಿದರು.

7,804 ಹೆಕ್ಟೇರ್‌ ಭತ್ತದ ಗದ್ದೆ ನಾಶವಾಗಿದೆ. 11,838 ಹೆಕ್ಟೇರ್‌ ಕಾಫಿ ತೋಟ ನಾಶವಾಗಿದೆ. ಹಾಳಾಗಿರುವ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ₹ 500 ಕೋಟಿ, ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ ₹ 605 ಕೋಟಿ ಅಗತ್ಯವಿದೆ ಎಂದು ಹೇಳಿದರು.

ಕೇರಳಕ್ಕೆ ಭೇಟಿ: ಕೊಡಗಿನಂತೆಯೇ ಕೇರಳ ರಾಜ್ಯವೂ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು ಅಲ್ಲಿಗೆ ನ. 2ರಂದು ತೆರಳಿ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ: ಇಂತಹ ಪ್ರತಿಕೂಲ ಸಂದರ್ಭದಲ್ಲೂ ಕೊಡಗು ಜಿಲ್ಲಾಡಳಿತವು ಉತ್ತಮ ಕೆಲಸ ಮಾಡಿದೆ. ರಸ್ತೆಗಳ ಸುಧಾರಣೆಗೆ ನಾಲ್ಕೈದು ತಿಂಗಳು ಬೇಕು ಎನ್ನುವ ಪರಿಸ್ಥಿತಿಯಿತ್ತು. ಆದರೆ, ಒಂದೇ ತಿಂಗಳಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದ್ದು ಮೆಚ್ಚುವ ಕಾರ್ಯ ಎಂದು ವೀರಪ್ಪ ಮೊಯ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT