ಶನಿವಾರ, ಮೇ 8, 2021
26 °C
ವಿರಾಜಪೇಟೆ: ರೋಮನ್ ಕ್ಯಾಥೋಲಿಕ್ ಫುಟ್‌ಬಾಲ್ ಟೂರ್ನಿಗೆ ಚಾಲನೆ: 19 ತಂಡಗಳು ಭಾಗಿ

ಫುಟ್‌ಬಾಲ್ ಉದ್ಘಾಟನಾ ಪಂದ್ಯ: ಸುಂಟಿಕೊಪ್ಪ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ‘ಕ್ರಿಡೆಗಳು ಸಮಾನ ಮನಸ್ಥಿತಿಯ ವ್ಯಕ್ತಿಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತವೆ’ ಎಂದು ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ. ಮದಲೈ ಮುತ್ತು
ಅಭಿಪ್ರಾಯಪಟ್ಟರು.

ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ ಹಾಗೂ ಚರ್ಚ್‌ ವತಿಯಿಂದ ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಆಯೋಜಿಸಿರುವ 2ನೇ ವರ್ಷದ ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಟೈಗರ್ ಫೈ ಪುಟ್‌ಬಾಲ್ ಟೂರ್ನಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಸಾಮರಸ್ಯದಿಂದ ಕ್ರೀಡಾಸ್ಫೂರ್ತಿ ಹೆಚ್ಚಾಗಬೇಕು. ಕ್ರೀಡೆಗಳು ಆರೋಗ್ಯಕ್ಕೆ ಸಹಕಾರಿ, ಕ್ರೀಡೆ ಪಾರಿತೋಷಕ ಪಡೆಯಲು ಮಾತ್ರ ಸೀಮಿತವಾಗದೆ, ಕುಟುಂಬಕ್ಕೆ ಪ್ರೀತಿ, ಸಹಬಾಳ್ವೆ ಮತ್ತು ಶಾಂತಿಯ ಪಾಠವನ್ನು ಕಲಿಸುವಂತಾಗಬೇಕು’ ಎಂದರು.

ಸಂತ ಅನ್ನಮ್ಮ ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ. ಲಿಯೋನಾರ್ಡ್ ಮಾತನಾಡಿ, ‘ಸಂಘ ಸಂಸ್ಥೆಗಳು ಕ್ರೀಡೆಯತ್ತ ಮಾತ್ರ ಒಲವು ತೊರದೆ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು’
ಎಂದರು.

ವೇದಿಕೆಯಲ್ಲಿ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್, ಉದ್ಯಮಿ ಚೋಪಿ ಜೋಸೆಫ್, ಪಟ್ಟಣ ಪಂಚಾಯಿತಿ ಸದಸ್ಯ ಬೆನ್ನಿ ಆಗಸ್ಟಿನ್, ಪಿ.ಟಿ. ಟ್ರೇಡರ್ಸ್ ಮಾಲೀಕ ಪಿ.ಟಿ. ಜೋಸೆಫ್, ಬಿಜೆಪಿಯ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಜೋಕಿಂ ರಾಡ್ರೀಗಸ್ ಮತ್ತು ಕಾಫಿ ಬೆಳೆಗಾರ ಚಾರ್ಲಿ ಪಿಂಟೋ ವೇದಿಕೆಯಲ್ಲಿ ಇದ್ದರು.

ಟೂರ್ನಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ 19 ತಂಡಗಳು ಭಾಗವಹಿಸಲಿವೆ.

ಉದ್ಘಾಟನಾ ಪಂದ್ಯದಲ್ಲಿ ಸುಂಟಿಕೊಪ್ಪ ತಂಡವು ಆರ್ಜಿ ಎ ತಂಡದ ವಿರುದ್ಧ ಎರಡು ಗೋಲುಗಳಿಂದ ಗೆಲುವು ಸಾಧಿಸಿತು. ಸಂತ ಅನ್ನಮ್ಮ ‘ಡಿ’ ತಂಡವು ಸಿದ್ದಾಪುರ ತಂಡದ ವಿರುದ್ಧ 3-0 ಗೋಲುಗಳಿಂದ ಗೆಲುವು ಪಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.