ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಜುನ’ನ ಕೊಂದ ಕಾಡಾನೆಗಳು ಕೊಡಗಿಗೂ ಬರುತ್ತಿದ್ದವು!

ಎಚ್.ಎಸ್.ಶರಣ್
Published 5 ಡಿಸೆಂಬರ್ 2023, 6:29 IST
Last Updated 5 ಡಿಸೆಂಬರ್ 2023, 6:29 IST
ಅಕ್ಷರ ಗಾತ್ರ

ಶನಿವಾರಸಂತೆ: ಇಲ್ಲಿಗೆ 8 ಕಿ.ಮೀ ದೂರದ ಹಾಸನ ಜಿಲ್ಲೆಯ ಯಸಳೂರು ಸಮೀಪದ ಬಾಳೆಕೆರೆ ದಬ್ಬಳ್ಳಿಯಲ್ಲಿ ಕಾಡಾನೆಗಳನ್ನು ಹಿಡಿಯಲು ಬಂದಿದ್ದ ದಸರಾ ಆನೆ ‘ಅರ್ಜುನ’ನ ದುರಂತ ಸಾವು ಹೋಬಳಿಯ ರೈತರನ್ನೂ ತಲ್ಲಣಗೊಳಿಸಿದೆ.

ಅರ್ಜುನ ಆನೆಯೊಂದಿಗೆ ಕಾದಾಟ ನಡೆಸಿದ ಕಾಡಾನೆ ಸೇರಿದಂತೆ ಅದರೊಂದಿಗೆ 20ಕ್ಕೂ ಅಧಿಕ ಕಾಡಾನೆಗಳಿರುವ ಹಿಂಡು ಕೇವಲ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗಳಲ್ಲೂ ರೈತರ ಗದ್ದೆ, ತೋಟಗಳನ್ನು ನಿರಂತರವಾಗಿ ನಾಶಗೊಳಿಸುತ್ತಿವೆ.

ಇಲ್ಲಿನ ಮಾದ್ರೆ, ದಂಡಳ್ಳಿ, ಕಿರುಬಿಳಹ, ದೊಡ್ಡಬಿಳಹ, ಕೂಜಗೇರಿ, ಬೆಂಬಲೂರು, ಕ್ಯಾತೆ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲೂ ಈ ಕಾಡಾನೆಗಳು ಭೀತಿ ಮೂಡಿಸಿವೆ. ಇದರಿಂದ ರೈತರಿಗೆ ಅಪಾರ ನಷ್ಟ ಸಂಭವಿಸಿರುವುದು ಮಾತ್ರವಲ್ಲ ಜೀವಕ್ಕೂ ಬೆದರಿಕೆ ಎನಿಸಿವೆ.

ಕೊಡಗು– ಹಾಸನ ಗಡಿಭಾಗದ ಮತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಈ ಕಾಡಾನೆಗಳು ಬೀಡು ಬಿಟ್ಟಿವೆ. ಇವುಗಳು ರಾತ್ರಿ ವೇಳೆ ನಿರಂತರವಾಗಿ ರೈತರ ಬೆಳೆಗಳನ್ನು ನಾಶಗೊಳಿಸುತ್ತಿವೆ. ಇಲ್ಲಿಂದ ಶನಿವಾರಸಂತೆ ಪಟ್ಟಣ ದಾಟಿ ಕೊಡಗಿನ ಮಾಲಂಬಿ ಮೀಸಲು ಅರಣ್ಯಕ್ಕೂ ಈ ಕಾಡಾನೆಗಳು ಸಂಚರಿಸುತ್ತಿವೆ. ಇದರಿಂದ ಕಾಫಿತೋಟಗಳಲ್ಲಿ ಕಾಫಿ ಫಸಲು ತೆಗೆಯಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.

ಕಾರ್ಯಾಚರಣೆ ಸ್ಥಗಿತ

ಕಾಡಾನೆಯೊಂದಿಗೆ ಸೆಣಸಾಟ ನಡೆಸಿ ಸಿಬ್ಬಂದಿ ಪ್ರಾಣ ಉಳಿಸಿದ ‘ಅರ್ಜುನ’ ಆನೆಯ ಸಾವಿನ ನಂತರ ಕಾಡಾನೆಗಳು ಮತ್ತೆ ದಾಳಿ ನಡೆಸುವ ಸಾಧ್ಯತೆಯನ್ನು ಮನಗಂಡು ಕಾರ್ಯಾಚರಣೆಯನ್ನು ಮೊಟಕುಗೊಳಿಸಿ ಇನ್ನಿತರ ಸಾಕಾನೆಗಳನ್ನು ವಾಪಸ್ ಶಿಬಿರಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅರ್ಜುನ ಆನೆ ಮೃತಪಟ್ಟ ಜಾಗದಲ್ಲಿ ನೀರವ ಮೌನ ಆವರಿಸಿದೆ. ಮಾವುತ ಕುಸಿದು ಬಿದ್ದು ಪರಿತಪಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

ಸೋಮವಾರಪೇಟೆ ತಾಲ್ಲೂಕಿನ ಸಜ್ಜಳ್ಳಿ ಗ್ರಾಮದ ಶ್ಯಾಮ್ ಎಂಬುವವರ ಕೃಷಿ ಜಮೀನಿನಲ್ಲಿ ಬೀಡುಬಿಟ್ಟಿರುವ ಕಣ್ಣು ಕಾಣದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುತ್ತಿರುವ ಸ್ಥಳೀಯರು. 
ಸೋಮವಾರಪೇಟೆ ತಾಲ್ಲೂಕಿನ ಸಜ್ಜಳ್ಳಿ ಗ್ರಾಮದ ಶ್ಯಾಮ್ ಎಂಬುವವರ ಕೃಷಿ ಜಮೀನಿನಲ್ಲಿ ಬೀಡುಬಿಟ್ಟಿರುವ ಕಣ್ಣು ಕಾಣದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುತ್ತಿರುವ ಸ್ಥಳೀಯರು. 
ಕೊಡಗಿನ ಗಡಿ ಭಾಗದಲ್ಲಿ ಆತಂಕದ ಛಾಯೆ ‘ಅರ್ಜುನ’ ಆನೆಯ ಸಾವಿಗೆ ಕೊಡಗಿನಲ್ಲಿ ಕಂಬನಿ ಕಾಡಾನೆಗಳ ಭೀತಿಯಲ್ಲೇ ಸಾಗಿದೆ ಜನರ ಬದುಕು
ಪರಿಹಾರ ಕಾಣದ ಕರುಡು ಆನೆ ಸಮಸ್ಯೆ ಡಿ.ಪಿ.ಲೋಕೇಶ್
ಸೋಮವಾರಪೇಟೆ: ಇಲ್ಲಿಗೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಮೀಸಲು ಅರಣ್ಯದಂಚಿನಲ್ಲಿ ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಕಣ್ಣು ಕಾಣದ ಒಂಟಿ ಕಾಡಾನೆ ಇಂದಿಗೂ ಅದೇ ರೀತಿಯಲ್ಲಿ ಅಲೆದಾಡುತ್ತಿದ್ದು ಜನರ ಆತಂಕ ಮುಂದುವರಿದಿದೆ. ಹಗಲಿನಲ್ಲಿ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿಗಳು ಕಾಡಿಗೆ ಓಡಿಸುತ್ತಾರೆ. ನಂತರ ರಾತ್ರಿ ಅದು ಕೃಷಿ ಭೂಮಿಗೆ ಬರುತ್ತಿದೆ. ಕಣ್ಣು ಕಾಣದ ಹಿನ್ನೆಲೆ ಸಜ್ಜಳ್ಳಿ ಹಾಡಿಯ ಲೋಕೇಶ್ ಎಂಬುವವರ ಕೃಷಿ ಜಮೀನಿನಲ್ಲಿ ಬೆಳೆದು ನಿಂತಿರುವ ಕಾಡು ಹುಲ್ಲನ್ನು ತಿಂದು ಅಲ್ಲಿಯೇ ವಿಶ್ರಮಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ‘ಆನೆ ಕಳೆದ ಮೂರು ದಿನಗಳಿಂದ ಇಲ್ಲಿಗೆ ಬಂದಿರಲಿಲ್ಲ. ಮತ್ತೆ ಭಾನುವಾರ ರಾತ್ರಿಯಿಂದ ಕಾಣಿಸಿಕೊಂಡಿದೆ. ಸಜ್ಜಳ್ಳಿ ಗ್ರಾಮದ ಆಸುಪಾಸಿನಲ್ಲಿಯೇ ಇರುತ್ತದೆ. ಜಮೀನಿನಲ್ಲಿ ಬೆಳೆದಿರುವ ಹುಲ್ಲನ್ನು ತಿಂದ ನಂತರ ಅಲ್ಲಿಯೇ ಇರುವ ಆನೆಯನ್ನು ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ದನಗಳನ್ನು ಓಡಿಸುವಂತೆ ಓಡಿಸಿಕೊಂಡು ಕಾಡಿಗೆ ಬಿಡಲಾಗುತ್ತಿದೆ. ಆನೆ ನಿಂತಿರುವುದು ಕಾಡಾನೆಯೋ ಕುರುಡು ಆನೆಯೋ ತಿಳಿಯುವುದಿಲ್ಲ. ಈ ಭಾಗದಲ್ಲಿ ಜನರು ಭಯಭೀತರಾಗಿದ್ದಾರೆ. ಕೂಡಲೇ ಆನೆಯನ್ನು ಹಿಡಿದು ಸಾಗಿಸಬೇಕು’ ಎಂದು ಸ್ಥಳೀಯ ನಿವಾಸಿ ಶ್ಯಾಮ್ ತಿಳಿಸಿದರು. ಸೋಮವಾರಪೇಟೆ ಅರಣ್ಯ ಇಲಾಖೆಯ ರೇಂಜರ್ ಚೇತನ್ ಮಾತನಾಡಿ ‘ಆನೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಇಂದಿಗೂ ಅದನ್ನು ಹಿಡಿಯುವುದು ಮತ್ತು ಚಿಕಿತ್ಸೆಯ ಬಗ್ಗೆ ಯಾವುದೇ ಆದೇಶವಾಗಿಲ್ಲ. ಆನೆಗೆ ಒಂದು ಕಣ್ಣು ಸ್ವಲ್ಪ ಕಾಣುತ್ತಿರಬೇಕು. ಅದನ್ನು ಹಿಡಿದ ನಂತರವೇ ಸರಿಯಾದ ಮಾಹಿತಿ ಸಿಗುವುದು. ಮೇಲಧಿಕಾರಿಗಳು ಆನೆಯ ಚಲನವಲನವನ್ನು ಅಭ್ಯಸಿಸಲು ತಿಳಿಸಿದ್ದು ನೋಡಿಕೊಳ್ಳುತ್ತಿದ್ದೇವೆ. ಹಾರಂಗಿ ಹಿನ್ನೀರಿನ ಬಳಿಯ ಅರಣ್ಯಕ್ಕೆ ಓಡಿಸಲಾಗಿತ್ತು. ಮತ್ತೆ ಸಜ್ಜಳ್ಳಿ ಹಾಡಿ ಬದಿಯ ಅರಣ್ಯಕ್ಕೆ ಬಂದು ಸೇರಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT