ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಭಯದಲ್ಲಿ ಬರುವ ಕಾರ್ಮಿಕರು

ಬಂದ್ ಆಗುವ ನಾಗರಹೊಳೆ ಅರಣ್ಯದ ಗೇಟ್‌, ಶರವೇಗದಲ್ಲಿ ಬರುವ ವಾಹನಗಳು
Last Updated 24 ಜನವರಿ 2023, 11:38 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಫಿ ಕೊಯ್ಲು ಆರಂಭವಾಯಿತೆಂದರೆ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ಹಾಗೂ ಎಚ್.ಡಿ.ಕೋಟೆ ತಾಲ್ಲೂಕುಗಳಿಂದ ನಿತ್ಯ ನೂರಾರು ಮಂದಿ ಕಾರ್ಮಿಕರು ಇಲ್ಲಿಗೆ ಬರುತ್ತಾರೆ. ಕಾಫಿ ಕೊಯ್ದು ಕೂಲಿ ಪಡೆದು ವಾಪಸ್ ತೆರಳುತ್ತಾರೆ. ಇದಕ್ಕಾಗಿ ಅವರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣ ಮಾಡಬೇಕಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಭಾನುವಾರಷ್ಟೇ ಕೈಕೇರಿ ಸಮೀಪ 12 ಮಂದಿ ಕಾರ್ಮಿಕರಿದ್ದ ‘ತೂಫಾನ್’ ವಾಹನವೊಂದು 3 ಬಾರಿ ಉರುಳಿ ಬಿದ್ದಿತು. ಅದರಲ್ಲಿದ್ದವರೆಲ್ಲ ಅದೃಷ್ಟವಶಾತ್ ಅಪಾಯದಿಂದ ಪಾರಾ ದರು. ಆದರೆ, ಗಾಯಗೊಂಡು ಆಸ್ಪತ್ರೆ ಸೇರಿ, ಸದ್ಯಕ್ಕೆ ಕೆಲಸ ಮಾಡಲಾಗದಂತಹ ಸ್ಥಿತಿಯಲ್ಲಿದ್ದಾರೆ.

ನಾಗರಹೊಳೆಯ ಅರಣ್ಯದಲ್ಲಿದ್ದ ಹಾಡಿಜನರು ರಾಷ್ಟ್ರೀಯ ಉದ್ಯಾನ ಘೋಷಣೆಯಾದ ನಂತರ ಕಾಡಿನಿಂದ ಹೊರ ಬಂದಿದ್ದಾರೆ. ಅವರಿಗೆ ಸೂಕ್ತ ಉದ್ಯೋಗ ಇಲ್ಲದೇ, ಜಮೀನಿನ ಹಕ್ಕುಪತ್ರ ಗಳು ಸಮರ್ಪಕವಾಗಿ ವಿತರಣೆಯಾಗದೆ, ಇಂದಿಗೂ ಹುಣಸೂರು ತಾಲ್ಲೂಕಿನ ಬರೋಬರಿ 54 ಹಾಡಿಗಳ ನಿವಾಸಿಗಳು ವರ್ಷದಲ್ಲಿ 4 ತಿಂಗಳು ಕಾಲ ಕೊಡಗಿನ ಕಾಫಿ ತೋಟದಲ್ಲಿ ಕೆಲಸಕ್ಕೆಂದು ನಿತ್ಯ ಬರುತ್ತಾರೆ.

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಸುಮಾರು 110 ಹಾಡಿಗಳಲ್ಲಿ ಶೇ 70ರಷ್ಟು ಮಂದಿ ಇದೇ ವಲಸೆ ಉದ್ಯೋಗವನ್ನೇ ತಮ್ಮ ಜೀವನೋಪಾಯಕ್ಕೆ ನೆಚ್ಚಿಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ರಾಣಿ ಗೇಟ್, ಮುತ್ತೂರು ರಾಜು ಗ್ರಾಮ, ಮರಳು ಕಟ್ಟೆ ಹಾಡಿ, ಹೊಸಕೆರೆ ಹಾಡಿ, ಬೆಮ್ಮತ್ತಿ ಹಾಡಿ ಸೇರಿದಂತೆ ಕೆಲವು ಹಾಡಿಗಳ ಗಿರಿಜನರು ಕಾಫಿ ಹಣ್ಣಿನ ಕೋಯ್ಲಿಗಾಗಿ ಇಲ್ಲಿಗೆ ಬರುತ್ತಾರೆ.

ಸಾಮರ್ಥ್ಯಕ್ಕೆ ತಕ್ಕ ಕೂಲಿ

ಹೊಲ, ಗದ್ದೆ, ಕಟ್ಟಡ ಸೇರಿದಂತೆ ಎಲ್ಲ ಉದ್ಯೋಗಗಳಿಗೂ ದಿನಗೂಲಿಯನ್ನು ನಿಗದಿ ಮಾಡಲಾಗಿದೆ. ಎಷ್ಟೇ ಹೆಚ್ಚು ಕೆಲಸ ಮಾಡಿದರೂ ನಿಗದಿಯಾಗಿರುವ ಕೂಲಿಗಿಂತ ಹೆಚ್ಚಿಗೆ ಸಿಗುವುದಿಲ್ಲ. ಆದರೆ, ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ನಿರ್ದಿಷ್ಟ ಕೂಲಿಗೆ ಬದಲಾಗಿ, ಸಾಮರ್ಥ್ಯಕ್ಕೆ ತಕ್ಕ ಕೂಲಿ ನೀಡಲಾಗುತ್ತಿದೆ. ಕಾಫಿ ಹಣ್ಣನ್ನು ಎಷ್ಟು ಕೆ.ಜಿ ಬಿಡಿಸಿದ್ದಾರೆ ಎನ್ನುವುದನ್ನು ತೂಕ ಮಾಡಿ ಅದರಂತೆ ಕೆ.ಜಿಗೆ ಇಂತಿಷ್ಟು ಪ್ರಮಾಣದಲ್ಲಿ ಕೂಲಿ ನೀಡಲಾಗುತ್ತಿದೆ. ಹೀಗಾಗಿ, ಹೆಚ್ಚು ಕೆಲಸ ಮಾಡಿದರೆ ಅತಿ ಹೆಚ್ಚು ಕೂಲಿ ಎನ್ನುವ ಕಾರಣಕ್ಕೆ ಕಾರ್ಮಿಕರು ವಲಸೆ ಬರುತ್ತಿದ್ದಾರೆ ಎಂದು ಹುಣಸೂರಿನ ಗಿರಿಜನ ಮುಖಂಡ ಮಣಿ ‘ಪ‍್ರಜಾವಾಣಿ’ಗೆ ತಿಳಿಸಿದರು.

ನಾಗರಹೊಳೆ ಅರಣ್ಯದ ಗೇಟ್‌ನ್ನು ನಿತ್ಯ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ರವರೆಗೆ ಬಂದ್ ಮಾಡುತ್ತಾರೆ. ಹಾಗಾಗಿ, ಸಂಜೆಯಾಗುತ್ತಲೇ ಬಿಡಿಸಿರುವ ಕಾಫಿಯನ್ನು ತೂಕ ಮಾಡಿ ಕೂಲಿ ಪಡೆದು, ಇಲ್ಲವೇ ಪುಸ್ತಕದಲ್ಲಿ ಬರೆಸಿ ಕಾರ್ಮಿಕರು ‘ತೂಫಾನ್’ ಜೀಪಿನಲ್ಲಿ ಬರುತ್ತಾರೆ. ಗೇಟ್ ಬಂದ್ ಆಗುತ್ತದೆ ಎಂಬ ಕಾರಣಕ್ಕೆ ವಾಹನ ಚಾಲಕರು ಸಹಜವಾಗಿಯೇ ಅತಿ ವೇಗದಲ್ಲಿ ಚಾಲನೆ ಮಾಡುತ್ತಾರೆ. ಬೆಳಿಗ್ಗೆಯೂ ಗೇಟ್ ತೆರೆಯುತ್ತಲೇ ಅತಿ ವೇಗದಲ್ಲಿ ಬರುತ್ತಾರೆ. ಈ ಕಾರಣಕ್ಕೆ ಬಹಳಷ್ಟು ಅಪಘಾತಗಳು ನಡೆಯುತ್ತಿವೆ ಎಂದು ಅವರು ಹೇಳುತ್ತಾರೆ.

ಇದರ ಮಧ್ಯೆ ಮೂರ್ಕಲ್ಲಿನಿಂದ ವೀರನಹೊಸಹಳ್ಳಿಯವರೆಗಿನ ರಸ್ತೆಯಂತೂ ತೀರಾ ಹದಗೆಟ್ಟಿದೆ. ಇನ್ನುಳಿದ ರಸ್ತೆಗಳಲ್ಲೂ ಗುಂಡಿಗಳು ಹೆಚ್ಚಾಗಿವೆ. ಇವುಗಳಿಂದಲೂ ಅಪಘಾತಗಳು ಸಂಭವಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT