ಮಡಿಕೇರಿ: ಉತ್ತಮವಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಅಳವಡಿ ಸಿಕೊಳ್ಳುವುದರಿಂದ ಕ್ಯಾನ್ಸರ್‌ನ್ನು ಆದಷ್ಟು ದೂರ ಇಡಬಹುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ನಡೆದ ‘ವಿಶ್ವ ಕ್ಯಾನ್ಸರ್ ದಿನಾಚರಣೆ’ ಯಲ್ಲಿ ಅವರು ಮಾತನಾಡಿದರು.
‘ವಿಶ್ವದಲ್ಲಿ ಸಂಭವಿಸುವ ಸಾವುಗಳ ಪೈಕಿ ಅಪಘಾತ ಮೊದಲ ಸ್ಥಾನದಲ್ಲಿದ್ದರೆ, ಕ್ಯಾನ್ಸರ್ 2ನೇ ಸ್ಥಾನದಲ್ಲಿದೆ. ಹಾಗಾಗಿ, ಈ ರೋಗ ಬರದಂತೆ ತಡೆಯುವುದು ಇಂದಿನ ತುರ್ತು ಅಗತ್ಯ’ ಎಂದರು.
ಆರೋಗ್ಯಕರ ‘ಜೀವನ ಶೈಲಿ’ ಮತ್ತು ವಯಸ್ಸಿಗೆ ತಕ್ಕಂತೆ ‘ಆಹಾರ ಪದ್ಧತಿ’ ರೂಢಿಸಿಕೊಳ್ಳುವುದು, ಪ್ರತಿನಿತ್ಯ ವ್ಯಾಯಾಮ, ಯೋಗ ಮಾಡುವುದು, ದೇಹಕ್ಕೆ ಆಯಾಸ ಆಗುವ ರೀತಿ ಕೆಲಸ ಮಾಡುವುದರಿಂದ ಕ್ಯಾನ್ಸರ್‌ನಿಂದ ದೂರ ಇರಬಹುದು ಎಂದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ವಿಭಾ ಗದ ಮುಖ್ಯಸ್ಥ ಡಾ.ನಂಜುಂಡಯ್ಯ ಮಾತ ನಾಡಿ, ‘ಕ್ಯಾನ್ಸರ್ ಎಂದ ಕೂಡಲೇ ಭಯಪಡಬಾರದು. ಯಾವುದೇ ರೋಗಕ್ಕೂ ಸಹ ಔಷಧ ಇರುತ್ತದೆ. ಆದರೆ, ಆರಂಭದಲ್ಲಿಯೇ ಗುಣಪಡಿಸಿ ಕೊಳ್ಳಲು ಮುಂದಾಗಬೇಕು’ ಎಂದರು.
‘ಕಲುಷಿತ ನೀರು, ಕಲುಷಿತ ಆಹಾರ, ಕಲುಷಿತ ಪರಿಸರದಿಂದ ನಾನಾ ರೋಗಗಳು ಬರಲಿದ್ದು, ಈ ಬಗ್ಗೆ ತುಂಬಾ ಎಚ್ಚರವಹಿಸಬೇಕು ಎಂದೂ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಮಾತನಾಡಿ, ‘ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿತ ಹಾಗೂ ಪಾರ್ಶ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದರು.
ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಆವರಣದಿಂದ ‘ನಮ್ಮ ದನಿಗಳನ್ನು ಕೂಡಿಸೋಣ, ಮತ್ತು ಕ್ರಮ ಕೈಗೊಳ್ಳೋಣ’ ಎಂಬ ಘೋಷ ವಾಕ್ಯದೊಂದಿಗೆ ‘ವಿಶ್ವ ಕ್ಯಾನ್ಸರ್ ಜಾಗೃತಿ ದಿನ’ದ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ ನೀಡಿದರು.
ಜಾಥವು ಜಿಲ್ಲಾಡಳಿತ ಭವನದಿಂದ ಮಂಗೇರಿರ ಮುತ್ತಣ್ಣ, ಜನರಲ್ ತಿಮ್ಮಯ್ಯ ವೃತ್ತ ಮಾರ್ಗವಾಗಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಗೊಂಡಿತು. ಜಾಥಾದಲ್ಲಿ ಕ್ಯಾನ್ಸರ್ ಕುರಿತು ಘೋಷಣೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ, ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.