ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವೂರು, ತಣ್ಣಿಮಾನಿ ಬೆಟ್ಟದಲ್ಲಿ ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ

Last Updated 7 ಮಾರ್ಚ್ 2023, 6:31 IST
ಅಕ್ಷರ ಗಾತ್ರ

ನಾಪೋಕ್ಲು: ತಾವೂರು ಮತ್ತು ತಣ್ಣಿಮಾನಿ ಬೆಟ್ಟದಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡಿದ್ದ ಬೆಂಕಿಯಿಂದ ನೂರಾರು ಎಕರೆ ಪ್ರದೇಶ ಬೆಂಕಿಗೆ ಆಹುತಿ ಆಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಹಬ್ಬಿದ ಬೆಂಕಿ ಸೋಮವಾರ ಕೂಡಾ ವ್ಯಾಪಿಸಿತ್ತು.

ಅಗ್ನಿಶಾಮಕ ದಳ ತೆರಳಲು ಸಾಧ್ಯವಿ ಲ್ಲದ ಹಿನ್ನೆಲೆಯಲ್ಲಿ ಕಾಡು ಸೊಪ್ಪು ಬಳಸಿ ಬೆಂಕಿ ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಡಿಎಫ್‌ಒ ಪೂವಯ್ಯ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ರವೀಂದ್ರ ಹಾಗೂ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದು ಹೆಚ್ಚಿನ ಪ್ರದೇಶಕ್ಕೆ ಬೆಂಕಿ ಹರಡದಂತೆ ತಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಬೆಂಕಿಯ ಜ್ವಾಲೆಗಳು ವ್ಯಾಪಕವಾಗಿ ಹರಡುತ್ತಿದ್ದ೦ತೆ ಪ್ರಾಣಿಗಳು ಕಿರುಚುತ್ತಿದ್ದ ಶಬ್ದ ಕೇಳಿಸಿದ್ದು ಹಲವು ಪ್ರಾಣಿಗಳು ಬೆಂಕಿಗೆ ಆಹುತಿಯಾಗಿರಬಹುದು’ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸಂಜೆ ತಾವೂರು ಗ್ರಾಮದ ಪೈಸಾರಿ 1/1ರಲ್ಲಿ ಬೆಂಕಿ ಹರಡುವುದನ್ನು ತಡೆಗಟ್ಟಲಾಗಿದೆ. ತಾವೂರು ದೇವಾಲಯದ ಪಕ್ಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಐದು ಎಕರೆ ತೋಟ ನಾಶವಾಗಿದೆ. ಗ್ರಾಮದ ಅರ್ಜುನ್, ಚಂದ್ರನ್, ಅಪ್ಪಯ್ಯ ದೇವಯ್ಯ ಅವರ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ.

ಗಾಳಿಯ ವೇಗ ಹೆಚ್ಚಾಗಿದ್ದರಿಂದ ಬೆಂಕಿ ನಂದಿಸಲು ಕಷ್ಟವಾಗಿದೆ.

ತಾವೂರು ಗ್ರಾಮಕ್ಕೆ ಕಾಂಗ್ರೆಸ್ ವಕ್ತಾರ ಪೊನ್ನಣ್ಣ ಭೇಟಿ ನೀಡಿ, ‘ಅಗತ್ಯ ಪರಿಹಾರ ದೊರಕಿಸುವಲ್ಲಿ ಶ್ರಮಿಸಲಾಗುವುದು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೆಪಿಸಿಟಿ ಸದಸ್ಯ ರಮಾ ನಾಥ್, ಕಾಂಗ್ರೆಸ್ ಸದಸ್ಯರಾದ ಸುನಿಲ್ ಪತ್ರಾವೋ, ಕುದುಪಜೆ ಪ್ರಕಾಶ್, ತಿಲಕ ಸುಬ್ರಾಯ, ಬಾರಿಕೆ ಕೃಷ್ಣರಾಜು, ವೆಂಕಟರಮಣ, ಸರೋಜಾ ಇದ್ದರು.

ಗರ್ವಾಲೆ ಕಾಫಿ ತೋಟದಲ್ಲಿ ಬೆಂಕಿ

ಸೋಮವಾರಪೇಟೆ: ತಾಲ್ಲೂಕಿನ ಗರ್ವಾಲೆಯಲ್ಲಿ ಭಾನುವಾರ ರಾತ್ರಿ ಡಿ.ಕೆ. ಬೆಳ್ಳಿಯಪ್ಪ ಅವರ ಕಾಫಿ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ಹಲವು ಕಾಫಿ ಗಿಡಗಳು ಹಾಗೂ ಬೆಲೆ ಬಾಳುವ ಮರಗಳು ಬೆಂಕಿಗಾಹುತಿಯಾಗಿವೆ.

‘ನಮ್ಮ ಕಾಫಿ ತೋಟದ ಪಕ್ಕ ಇದ್ದ ಕುರುಚಲು ಕಾಡಿಗೆ ಮಧುಕುಮಾರ್ ಎಂಬುವವರು ಸಂಜೆ ಬೆಂಕಿ ಹಚ್ಚಿದ್ದರು. ಗಾಳಿಗೆ ಬೆಂಕಿ ಹರಡಿ ನಮ್ಮ ಕಾಫಿ ತೋಟಕ್ಕೂ ವ್ಯಾಪಿಸಿದ್ದರಿಂದ ನೂರಾರು ಕಾಫಿ ಗಿಡಗಳು ಮತ್ತು ಬೆಲೆಬಾಳುವ ಮರಗಳು ಬೆಂಕಿಗಾಹುತಿಯಾಗಿವೆ. ಕೂಡಲೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಧುಕುಮಾರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT