ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಾ ತಿದ್ದುಪಡಿಗೆ ಅನುಮೋದನೆ

Last Updated 24 ಸೆಪ್ಟೆಂಬರ್ 2011, 9:15 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ತನ್ನ ಸದಸ್ಯರಿಗೆ ಬೆಳೆ ಸಾಲವೂ ಸೇರಿದಂತೆ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಹಾಗೂ ಇತರೆ ಉದ್ದೇಶಗಳಿಗೆ ನೀಡುತ್ತಿರುವ  ಸಾಲವನ್ನು ಅಧಿಕೃತವಾಗಿ ಬೈಲಾದಲ್ಲಿ ಸೇರ್ಪಡೆ ಮಾಡಲು ನಿರ್ಧರಿಸಲಾಯಿತು.

ಕೊಡವ ಸಮಾಜದಲ್ಲಿ ಶುಕ್ರವಾರ ನಡೆದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೈಲಾವನ್ನು ತಿದ್ದುಪಡಿ ಮಾಡಲು ಅನುಮೋದನೆ ಪಡೆದು ಈ ಅಂಶಗಳನ್ನು ಸೇರ್ಪಡೆ ಮಾಡಲು ನಿರ್ಣಯ ಅಂಗೀಕರಿಸಿದರು.

ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಮಾತನಾಡಿ, ಸಂಘದಿಂದ ಈ ಸಾಲಗಳನ್ನು ನೀಡುವ ಬಗ್ಗೆ ಬೈಲಾದಲ್ಲಿ ಸ್ಪಷ್ಟ ಉಲ್ಲೆೀಖವಿರಲಿಲ್ಲ. ಬೆಳೆಗಾರ ಸದಸ್ಯರಿಗೆ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು. ಅಲ್ಲದೆ, ಇದುವರೆಗೆ ಇಂಗ್ಲಿಷ್‌ನಲ್ಲಿದ್ದ ಬೈಲಾವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಸದಸ್ಯರಿಗೆ ಒದಗಿಸಲಾಗಿದೆ ಎಂದು ಅವರು ಹೇಳಿದರು. 

 ಸಂಘವನ್ನು ವೈದ್ಯನಾಥನ್ ಸಮಿತಿಯ ವ್ಯಾಪ್ತಿಗೆ ತಂದಲ್ಲಿ ಹಲವು ಸಾಲಗಳಿಂದ ಮುಕ್ತಿ ದೊರೆಯಲಿದ್ದು, ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಇಲಾಖಾಧಿಕಾರಿಗಳ ಪ್ರಯತ್ನ ಮುಂದುವರಿದಿದೆ ಎಂದರು.
ಸಂಘವನ್ನು ಪುನಶ್ಚೇತನಗೊಳಿಸುವ ಸಲುವಾಗಿ ಬೆಂಗಳೂರಿನಲ್ಲಿ ಕಾಫಿ ಮಾರಾಟ ಕೇಂದ್ರವೊಂದನ್ನು ಆರಂಭಿಸುವ ಉದ್ದೇಶವಿದ್ದು, ವಿಧಾನಸಭಾಧ್ಯಕ್ಷರ ಮೂಲಕ ಪ್ರಯತ್ನ ನಡೆದಿದೆಯಲ್ಲದೆ, ಮಹಾನಗರಪಾಲಿಕೆಯ ಆಯುಕ್ತರು ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.

ಅಮ್ಮತ್ತಿಯಲ್ಲಿರುವ ಸಂಘದ 10 ಸೆಂಟ್‌ಗಳ ನಿವೇಶನವನ್ನು ಮಾರಾಟ ಮಾಡುವ ಉದ್ದೇಶವಿದ್ದು, ಕೆಡಿಸಿಸಿ ಬ್ಯಾಂಕ್ ಇದನ್ನು ಪಡೆಯುವ ಉತ್ಸುಕತೆಯಲ್ಲಿದೆ. ಸಹಕಾರಿ ನಿಯಮಗಳ ಪ್ರಕಾರ ಟೆಂಡರ್ ಮೂಲಕ ವಿಲೇವಾರಿ ಮಾಡುವ ಚಿಂತನೆಯೂ ಇದೆ. ಹಾಗೆಯೇ ಹುಣಸೂರಿನಲ್ಲಿರುವ ಐದು ಎಕರೆ ಜಾಗವನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಸಹಕಾರ ಇಲಾಖೆಯ ಅನುಮತಿ ನಿರೀಕ್ಷಿಸಲಾಗುತ್ತಿದೆ ಎಂದರು.

ಹುಣಸೂರಿನ ಸಂಘದ ಸ್ವಂತ ಜಮೀನಿನಲ್ಲಿ ಆರು ಮಳಿಗೆಗಳ ಕಟ್ಟಡವೊಂದನ್ನು ನಿರ್ಮಿಸಲು ಕೂಡ ಸಂಘದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಕಾಯಪಂಡ ಬಿ.ಚಂಗಪ್ಪ, ನಿರ್ದೇಶಕರಾದ ಕೊಳುವಂಡ ಪಿ.ಸುಬ್ರಮಣಿ, ತಳೂರು ಕಿಶೋರ್ ಕುಮಾರ್, ಲೀಲಾಮೇದಪ್ಪ, ವ್ಯವಸ್ಥಾಪಕ ನಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT