ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಿ ಸೇರಿ 3 ಮಂದಿಗೆ ಸೋಂಕು

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಮುಖ
Last Updated 2 ಜೂನ್ 2020, 16:04 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ 3 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 17ಕ್ಕೆ ಏರಿದೆ.

ಜಿಲ್ಲಾ ಕೇಂದ್ರದ ಗೌರಿಪೇಟೆಯಲ್ಲಿ ಮೇ 31ರಂದು ಪತ್ತೆಯಾಗಿದ್ದ ಕೊರೊನಾ ಸೋಂಕಿತ (ಸೋಂಕಿತನ ಸಂಖ್ಯೆ 3007) ತರಕಾರಿ ವ್ಯಾಪಾರಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಅವರ ಪತ್ನಿ ಹಾಗೂ ಕೋಟೆ ಬಡಾವಣೆಯಲ್ಲಿನ ಸ್ನೇಹಿತರೊಬ್ಬರಿಗೆ ಇದೀಗ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕಿತ ತರಕಾರಿ ವ್ಯಾಪಾರಿಯ ಸಂಪರ್ಕಕ್ಕೆ ಬಂದಿದ್ದ ಪತ್ನಿ, ಮೂವರು ಮಕ್ಕಳು, ಇಬ್ಬರು ಸ್ನೇಹಿತರು ಹಾಗೂ ಒಬ್ಬರು ಕಾರು ಚಾಲಕರನ್ನು ಮೇ 31ರಿಂದ ಕ್ವಾರಂಟೈನ್‌ ಮಾಡಲಾಗಿತ್ತು. ಅಲ್ಲದೇ, ಅವರೆಲ್ಲರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಪತ್ನಿ ಮತ್ತು ಬ್ಯಾಗ್‌ ವ್ಯಾಪಾರ ಮಾಡುವ ಸ್ನೇಹಿತರೊಬ್ಬರಿಗೆ ಸೋಂಕು ಇರುವುದಾಗಿ ಮಂಗಳವಾರ ವರದಿ ಬಂದಿದೆ. 3 ಮಕ್ಕಳು, ಮತ್ತೊಬ್ಬ ಸ್ನೇಹಿತ ಮತ್ತು ಕಾರು ಚಾಲಕರ ವರದಿ ಬರಬೇಕಿದ್ದು, ಆತಂಕ ಹೆಚ್ಚಿದೆ.

ಕೋಲಾರ ತಾಲ್ಲೂಕಿನ ಗ್ರಾಮೀಣ ಭಾಗ ಹೊರತುಪಡಿಸಿ ನಗರವೊಂದರಲ್ಲೇ 5 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ನಗರವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯು ನಗರದಲ್ಲಿ ಮಂಗಳವಾರ ಪತ್ತೆಯಾಗಿರುವ ಸೋಂಕಿತರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಮಹಿಳೆಗೆ ಸೋಂಕು: ಮಾಲೂರು ತಾಲ್ಲೂಕಿನಲ್ಲಿ ಗ್ರಾಮೀಣ ಭಾಗಕ್ಕೂ ಸೋಂಕು ಕಾಲಿಟ್ಟಿದ್ದು, ಚಂಬೆ ಗ್ರಾಮದ ಮಹಿಳೆಗೆ ಸೋಂಕು ಇರುವುದು ಖಚಿತವಾಗಿದೆ. ಇವರು ಬೆಂಗಳೂರಿನ ವಾಣಿಜ್ಯ ಸಮುಚ್ಚಯವೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

ಲಾಕ್‌ಡೌನ್‌ ಸಡಿಲಿಕೆ ಬಳಿಕ ಇವರು ಕೆಲಸಕ್ಕಾಗಿ ಪ್ರತಿನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಹಿಂದಿನ ವಾರ ಇವರಿಗೆ ಜ್ವರ, ತಲೆ ನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯು ತಪಾಸಣೆ ಮಾಡಿ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಮಹಿಳೆಗೆ ಕೊರೊನಾ ಸೋಂಕು ಇರುವುದಾಗಿ ಪ್ರಯೋಗಾಲಯ ತಜ್ಞರು ಮಂಗಳವಾರ ವರದಿ ನೀಡಿದ್ದಾರೆ.

ಈ ಮಹಿಳೆಯ ಜತೆ ಪತಿ, ಇಬ್ಬರು ಮಕ್ಕಳು ಸೇರಿದಂತೆ 8ಕ್ಕೂ ಹೆಚ್ಚು ಮಂದಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಅವರೆಲ್ಲರನ್ನೂ ಮಾಲೂರು ತಾಲ್ಲೂಕಿನ ರಾಜೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಜತೆಗೆ ಅವರ ಕಫಾ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಕಂಟೈನ್‌ಮೆಂಟ್‌: ಕೋಲಾರದ ಗೌರಿಪೇಟೆ, ಕೋಟೆ ಬಡಾವಣೆ ಮತ್ತು ಮಾಲೂರು ತಾಲ್ಲೂಕಿನ ಚಂಬೆ ಗ್ರಾಮವನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌) ಘೋಷಿಸಿ ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಈ ಬಡಾವಣೆಗಳು ಮತ್ತು ಗ್ರಾಮದ ಜನರು ಹೊರಗೆ ಹೋಗಬಾರದು ಹಾಗೂ ಹೊರಗಿನ ಜನರು ಇಲ್ಲಿಗೆ ಬರದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT