ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: 4 ವರ್ಷಗಳಲ್ಲಿ 372 ಬಾಲ್ಯವಿವಾಹ ದೂರು

2023–24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯವಿವಾಹ–77 ಎಫ್‌ಐಆರ್‌
Published : 12 ಸೆಪ್ಟೆಂಬರ್ 2024, 5:55 IST
Last Updated : 12 ಸೆಪ್ಟೆಂಬರ್ 2024, 5:55 IST
ಫಾಲೋ ಮಾಡಿ
Comments

ಕೋಲಾರ: ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಅತಿ ಹೆಚ್ಚು ಬಾಲ್ಯವಿವಾಹ ನಡೆದಿದ್ದು, ಆತಂಕ ತಂದೊಡ್ಡಿದೆ‌. ಈ ಅವಧಿಯಲ್ಲಿ ಬಾಲ್ಯವಿವಾಹ ಸಂಬಂಧ ದಾಖಲಾದ 129 ದೂರುಗಳಲ್ಲಿ ಕೇವಲ 52 ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದು, ಇನ್ನುಳಿದ 77 ಪ್ರಕರಣಗಳಲ್ಲಿ ಮದುವೆ ನಡೆದು ಎಫ್‌ಐಆರ್‌ ದಾಖಲಾಗಿದೆ.

ಅದರಲ್ಲೂ 2023ರ ಡಿಸೆಂಬರ್‌ ತಿಂಗಳಲ್ಲೇ 66 ಪ್ರಕರಣ ವರದಿಯಾಗಿರುವುದು ಆಘಾತಕಾರಿ ವಿಚಾರ. ಕೋಲಾರ ಹಾಗೂ ಮಾಲೂರು ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪೋಷಕರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದರು. ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರು ಹೆಚ್ಚಿನ ನಿಗಾ ಇಡಬೇಕೆಂದು ನಿರ್ದೇಶಿಸಿದ್ದರು.

2020ರ ಮಾರ್ಚ್‌ನಿಂದ ಹಿಡಿದು 2024ರ ಮಾರ್ಚ್‌ ಅಂತ್ಯದವರೆಗೆ ಅಂದರೆ ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 372 ಬಾಲ್ಯವಿವಾಹ ದೂರುಗಳು ಬಂದಿದ್ದು, ಅವುಗಳಲ್ಲಿ 279 ಪ್ರಕರಣಗಳನ್ನು ತಡೆಯಲಾಗಿದೆ. ಇನ್ನುಳಿದ 93 ಪ್ರಕರಣಗಳಲ್ಲಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕಳೆದ ಐದು ತಿಂಗಳಲ್ಲಿ ಬಾಲ್ಯ ವಿವಾಹ ಪ್ರಕರಣ ತಗ್ಗಿವೆ. ಇದಕ್ಕೆ ಕಾರಣ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾ ಮಕ್ಕಳ ಸಹಾಯವಾಣಿ ಸಿಬ್ಬಂದಿ ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳು.

ಪತ್ತೆಯಾಗಿರುವ ಬಹುತೇಕ ಪ್ರಕರಣಗಳು ಸಾರ್ವಜನಿಕರಿಂದ ಮಕ್ಕಳ (1098)ಸಹಾಯವಾಣಿಗೆ ಮಾಹಿತಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸರಿಗೆ ಗೊತ್ತಾಗಿರುವವು.

‘ದೂರು ಬಂದಾಗ ಅಥವಾ ಬೇರೆ ಮೂಲಗಳಿಂದ ತಮ್ಮ ಗಮನ ಬಂದಾಗ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಬಾಲ್ಯ ವಿವಾಹ ನಿಲ್ಲಿಸಲು ಪ್ರಯತ್ನ ನಡೆಸಿದ್ದಾರೆ. ಈಚೆಗೆ ಪ್ರಕರಣ ಕಡಿಮೆ ಆಗಿವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಗಳ ಮುಖ್ಯಶಿಕ್ಷಕರು, ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು, ವೈದ್ಯಾಧಿಕಾರಿಗಳು, ಪೊಲೀಸರು ಮೊದಲಾದವರು ಬಾಲ್ಯವಿವಾಹ ನಿಷೇಧಾಧಿಕಾರಿಗಳ ಪಟ್ಟಿಯಲ್ಲಿದ್ದಾರೆ.

ಬಾಲಕಿಗೆ 18 ವರ್ಷ ಮತ್ತು ಬಾಲಕನಿಗೆ 21 ವರ್ಷ ತುಂಬುವ ಮುನ್ನ ವಿವಾಹ ಮಾಡಬಾರದು. ಯಾವುದೇ ಸಮಯದಲ್ಲಿ ಬಾಲ್ಯವಿವಾಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ 1098 ಕ್ಕೆ ಕರೆ ಮಾಡುವಂತೆ ವಿವಿಧ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

‘ಬಾಲ್ಯ ವಿವಾಹ ಮಾಡಿದರೆ ಅವರಿಗೆ ಹುಟ್ಟುವಂತಹ ಮಕ್ಕಳು ಸರಿಯಾಗಿ ಬೆಳವಣಿಗೆ ಆಗಿರುವುದಿಲ್ಲ. ಅಪೌಷ್ಠಿಕತೆ ಹೊಂದಿರುತ್ತಾರೆ. ಜೊತೆಗೆ ಸಮಾಜಕ್ಕೂ ಹೊರೆಯಾಗುತ್ತಾರೆ. ಅದರಿಂದ ಇವುಗಳನ್ನು ತಡೆಯಬೇಕು’ ಎಂದು ಅರಿವು ಉಂಟು ಮಾಡುತ್ತಿದ್ದಾರೆ.

ಒಂದು ವೇಳೆ ಸಾರ್ವಜನಿಕರು ಕಣ್ಣುತಪ್ಪಿಸಿ ಬಾಲ್ಯವಿವಾಹ ಮಾಡಿದಲ್ಲಿ ಬಾಲಕಿಯ ಪತಿ, ಬಾಲಕಿ ಹಾಗೂ ಬಾಲಕನ ಪೋಷಕರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸುತ್ತಿದ್ದಾರೆ.

ಈಗಾಗಲೇ ಬಾಲ್ಯ ವಿವಾಹದಿಂದ ರಕ್ಷಣೆ ಮಾಡಲಾಗಿರುವ ಹಲವು ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಶಾಲೆಗೆ ಹೋಗದೆ ಹೊರಗುಳಿದಿದ್ದಾರೆ. ಇನ್ನು ಕೆಲವರು ಬಾಲಮಂದಿರದಲ್ಲಿರುವುದು ಗೊತ್ತಾಗಿದೆ. ಮತ್ತೆ ಬಾಲ್ಯ ವಿವಾಹ ಮಾಡುವುದಿಲ್ಲವೆಂದು ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ.

ಬಾಲ್ಯವಿವಾಹ ಕಂಡುಬಂದಲ್ಲಿ 1098 ಕ್ಕೆ ಕರೆ ಮಾಡಲು ಸಲಹೆ 4 ವರ್ಷಗಳಲ್ಲಿ ಜಿಲ್ಲೆಯಲ್ಲಿ 372 ಬಾಲ್ಯವಿವಾಹ ದೂರು; 93 ಎಫ್ಐಆರ್‌ 2023–24ನೇ ಸಾಲಿನಲ್ಲಿ ಬಾಲ್ಯವಿವಾಹ ಸಂಬಂಧ 129 ದೂರು 
ತಡೆಗೆ ಜಾಗೃತಿ ಕಾರ್ಯಾಗಾರ
ಬಾಲ್ಯವಿವಾಹ ತಡೆಯಲು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಕಾರ್ಯಾಗಾರ ನಡೆಸಿ ಇಲಾಖೆ ಸಿಬ್ಬಂದಿಗೂ ತರಬೇತಿ‌ ನೀಡಲಾಗಿದೆ. 2023-24ನೇ ಸಾಲಿನಲ್ಲಿ ಹೆಚ್ಚು ಪ್ರಕರಣ ಇದ್ದವು. ಆದರೆ ಶಾಲಾ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಕಳೆದ ಐದು ತಿಂಗಳಲ್ಲಿ ನಿಯಂತ್ರಣಕ್ಕೆ ತರಲಾಗಿದೆ ನಾರಾಯಣಸ್ವಾಮಿ‌ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ
ಎರಡು ವರ್ಷ ಶಿಕ್ಷೆ
ಬಾಲ್ಯ ವಿವಾಹ ಮಾಡಿಸಿದರೆ ಪ್ರೋತ್ಸಾಹಿಸಿದರೆ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಪ್ರಕಾರ ಶಿಕ್ಷಾರ್ಹ ಕ್ರಮ ಕೈಗೊಂಡು ₹1 ಲಕ್ಷ ದಂಡ ಹಾಗೂ ಎರಡು ವರ್ಷ ಜೈಲುವಾಸ ಅಥವಾ ಎರಡನ್ನು ವಿಧಿಸಬಹುದಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT