ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯ ಐದು ತಾಲ್ಲೂಕಿನಲ್ಲಿ ತೀವ್ರ ಬರ!

Published 15 ಸೆಪ್ಟೆಂಬರ್ 2023, 6:54 IST
Last Updated 15 ಸೆಪ್ಟೆಂಬರ್ 2023, 6:54 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ತೀವ್ರ ಬರ ಹಾಗೂ ಒಂದು ತಾಲ್ಲೂಕಿನಲ್ಲಿ ಸಾಧಾರಣ ಬರ ಪರಿಸ್ಥಿತಿ ಇರುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ಜಿಲ್ಲೆಯ ಕೋಲಾರ, ಬಂಗಾರಪೇಟೆ, ಕೆಜಿಎಫ್‌, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕು ತೀವ್ರ ಬರಪೀಡಿತ ತಾಲ್ಲೂಕುಗಳು. ಮಾಲೂರನ್ನು ಸಾಧಾರಣ ಬರ ಪರಿಸ್ಥಿತಿ ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ರಾಜ್ಯದಲ್ಲಿ 17 ಜಿಲ್ಲೆಗಳಲ್ಲಿ ವಾಡಿಕೆಯ ಮಳೆ ಆಗಿದ್ದರೆ 14 ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿತ್ತು. ಹೀಗೆ, ಮಳೆ ಕೊರತೆ ಎದುರಾಗಿರುವ ಜಿಲ್ಲೆಗಳಲ್ಲಿ ಕೋಲಾರ ಕೂಡ ಒಂದು.

ಬರ ಘೋಷಣೆ ಬೆನ್ನಲ್ಲೇ ಜಿಲ್ಲಾಧಿಕಾರಿ ಅಕ್ರಂ ಪಾಷ ಗುರುವಾರ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ನಿಭಾಯಿಸಲು ಸಂಪೂರ್ಣ ಸಜ್ಜಾಗಿರುವಂತೆ ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತದ ನೇತೃತ್ವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು 6 ತಾಲ್ಲೂಕುಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಗ್ರೌಂಡ್‌ ಟ್ರೂತಿಂಗ್’(ವಾಸ್ತವ ವರದಿ) ನಡೆಸಿದ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಸ್ಥಳದಲ್ಲೇ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು.

ಶೇ 60ಕ್ಕಿಂತ ಹೆಚ್ಚು ಮಳೆ ಕೊರತೆ ಅಥವಾ ಸತತ ಮೂರು ವಾರಗಳ ಕಾಲ ಶುಷ್ಕ ವಾತಾವರಣ, ತೇವಾಂಶ ಕೊರತೆ, ಬೆಳೆ ಬಿತ್ತನೆ ಪ್ರದೇಶ ಹಾಗೂ ಜಲಸಂಪನ್ಮೂಲ ಸೂಚ್ಯಂಕದಲ್ಲಿನ ತೀವ್ರತೆಯನ್ನು ಆಧಾರಿಸಿ ಕೆಎಸ್‌ಎನ್‌ಡಿಎಂಸಿ ತೀವ್ರ ಬರದ ತಾಲ್ಲೂಕುಗಳು ಎನ್ನುವ ಪಟ್ಟಿ ಮಾಡಿದೆ.

‘ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದ್ದು, ಬೆಳೆಗಳು ಒಣಗುತ್ತಿವೆ. ಈಗಾಗಲೇ ಬಿತ್ತನೆ ಅವಧಿ ಕೊನೆಗೊಂಡಿದೆ. ಬಿತ್ತನೆ ಪ್ರಮಾಣ ತೀರ ಕಡಿಮೆ ಆಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ವಿ.ಡಿ.ರೂಪಾದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ರೂಪಿಸಿದ್ದ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನ ಸಾಧಾರಣ ಬರದ ಪರಿಸ್ಥಿತಿ ಎದುರಿಸುತ್ತಿರುವ ತಾಲ್ಲೂಕುಗಳು ಎಂದು ಪಟ್ಟಿ ಮಾಡಲಾಗಿತ್ತು. 

ಜೂನ್ 1ರಿಂದ ಸೆಪ್ಟೆಂಬರ್ 13ರವರೆಗೆ ಜಿಲ್ಲೆಯಲ್ಲಿ 296 ಮಿ.ಮೀ ವಾಡಿಕೆ ಮಳೆ ಇತ್ತು. 235 ಮಿ.ಮೀ ಮಳೆ ಸುರಿದಿದೆ. -21ರಷ್ಟು ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ಈ ಹಿಂದಿನ ವರ್ಷ ಈ ಸಮಯಕ್ಕೆ ಜಿಲ್ಲೆಯಲ್ಲಿ ಕೆರೆ, ಕಟ್ಟೆಗಳು ತುಂಬಿ ಕೋಡಿ ಹರಿದಿದ್ದವು. ಆದರೆ ಈ ಬಾರಿ ಕೆರೆ, ಕಟ್ಟೆಗಳು ನಿಧಾನವಾಗಿ ಬತ್ತುತ್ತಿವೆ.

ಜಿಲ್ಲಾಧಿಕಾರಿ ಆಯಾ ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳನ್ನು ಒಳಗೊಂದ ತಂಡಗಳನ್ನು ರಚಿಸಿ ಬರದ ಸ್ಥಿತಿ ಕಂಡು ಬಂದ ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಶೇ 50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ತಾಲ್ಲೂಕುಗಳಲ್ಲಿ ತೀವ್ರ ಬರ ಮತ್ತು ಶೇ 33ರಿಂದ 50ರಷ್ಟು ಬೆಳೆ ನಷ್ಟವಾಗಿರುವ ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಪಟ್ಟಿ ಮಾಡಲಾಗಿದೆ.

ಜಿಲ್ಲಾ ಕೃಷಿ ಇಲಾಖೆಯು ಪ್ರಸಕ್ತ ವರ್ಷ 1,02,590 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿತ್ತು. ಆದರೆ, 36,106 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈ ಪ್ರಮಾಣ ಕೇವಲ ಶೇ 35.19ರಷ್ಟು.

ಬರ: ನಿರ್ವಹಣೆಗೆ ಸಿದ್ಧತೆ–ಜಿಲ್ಲಾಧಿಕಾರಿ
‘ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರು ಸಮಸ್ಯೆ ಇಲ್ಲ. ಇರುವ ಕೊಳವೆ ಬಾವಿಗೆ ಮತ್ತಷ್ಟು ಆಳಕ್ಕೆ ಪೈಪ್‌ ಹಾಕಿ ನೀರು ತೆಗೆಯಬಹುದು. ಪ್ಲಶ್‌ ಮಾಡುವುದು ಅಗತ್ಯವಿದ್ದಲ್ಲಿ ಪಂಪ್‌ ಮೋಟಾರ್‌ ಕಲ್ಪಿಸುತ್ತೇವೆ’ ಎಂದರು. ‘ನಗರ ಪ್ರದೇಶದಲ್ಲಿ 1200 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 2ಸಾವಿರ ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಕೊಳವೆಬಾವಿ ಕೊರೆಯುವುದಿಲ್ಲ. ಬದಲಾಗಿ ಇರುವ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು. ‘ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ) ದುರಸ್ತಿ ಮಾಡಿಸಲಾಗುತ್ತಿದೆ’ ಎಂದರು. ‘ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ಕೊರತೆ ಇಲ್ಲ. ಈಚೆಗೆ ಮಳೆಯಾಗಿದೆ. ಅಗತ್ಯವಿದ್ದರೆ ಮೇವು ಬೀಜ ನೀಡಲಾಗುವುದು’ ಎಂದು ಹೇಳಿದರು. ‘ಬರದಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲಾಗುವುದು. ರೈತರು ಫ್ರೂಟ್ಸ್‌ ಆ್ಯಪ್‌ನಲ್ಲಿ ಡೇಟಾ ಅಪ್ಡೇಟ್‌ ಮಾಡಬೇಕು. ಕೆಲವರು ಎರಡು ಎಕರೆ ಮಾತ್ರ ನಮೂದಿಸಿದ್ದಾರೆ. ಎಷ್ಟು ಇದೆಯೋ ಅಷ್ಟನ್ನೂ ನಮೂದಿಸಬೇಕು. ಆಗ ನಷ್ಟಕ್ಕೆ ಸರಿಯಾಗಿ ಪರಿಹಾರ ಪಡೆಯಲು ಅನುಕೂಲವಾಗುತ್ತದೆ’ ಎಂದರು.
ಮಾಲೂರು ಏಕೆ ತೀವ್ರ ಬರಪೀಡಿತ ತಾಲ್ಲೂಕು ಅಲ್ಲ?
ಮಾಲೂರು ತಾಲ್ಲೂಕಿನಲ್ಲಿ ಬಿತ್ತನೆಗೆ ತೀರಾ ಹಿನ್ನಡೆ ಉಂಟಾಗಿದೆ. ಕೇವಲ ಶೇ 11.44 ಬಿತ್ತನೆ ಆಗಿದೆ. ಉಳಿದ ತಾಲ್ಲೂಕುಗಳಿಗಿಂತ ಮಾಲೂರು ತಾಲ್ಲೂಕಿನಲ್ಲಿ ಕಡಿಮೆ ಆಗಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 13ವರೆಗೆ ಶೇ 43ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೂ ಈ ತಾಲ್ಲೂಕನ್ನು ಸಾಧಾರಣ ಬರ ಪರಿಸ್ಥಿತಿ ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ತಾಲ್ಲೂಕು ತೀವ್ರ ಬರ ಪರಿಸ್ಥಿತಿಗೆ ಬೇಕಾದ ಮಾನದಂಡ ತಲುಪಿಲ್ಲ ಎಂಬುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT