ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆ ಮೂಲಸೌಕರ್ಯಕ್ಕೆ ₹7 ಕೋಟಿ ಬಿಡುಗಡೆ- ಗೋವಿಂದರಾಜು ಹೇಳಿಕೆ

7ಕ್ಕೆ ಕಾಮಗಾರಿಗೆ ಚಾಲನೆ
Last Updated 4 ಜನವರಿ 2022, 13:39 IST
ಅಕ್ಷರ ಗಾತ್ರ

ಕೋಲಾರ: ‘ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದ ಕಟ್ಟಡವನ್ನು ವಿಸ್ತರಿಸಿ ₹ 7 ಕೋಟಿ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತದೆ. ಕಾಮಗಾರಿಗೆ ಆರೋಗ್ಯ ಸಚಿವ ಡಾ.ಸುಧಾಕರ್ ಜ.7ರಂದು ಚಾಲನೆ ನೀಡುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿದರು.

ಇಲ್ಲಿನ ಎಸ್‌ಎನ್‌ಆರ್‌ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ತಾಯಿ ಮತ್ತು ಮಕ್ಕಳ ವಿಭಾಗದ ಕಟ್ಟಡ ಕಾಮಗಾರಿ ಪರಿಶೀಲಿಸಿ ಮಾತನಾಡಿ, ‘ಕೋವಿಡ್ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಉದ್ದೇಶಕ್ಕೆ ಆರೋಗ್ಯ ಸಚಿವರು ಜಿಲ್ಲೆಗೆ ಬರುತ್ತಿದ್ದು, ಆ ದಿನ ಕಾಮಗಾರಿ ಆರಂಭಿಸಲು ಕೋರಲಾಗಿದೆ’ ಎಂದರು.

‘ವಿಧಾನ ಪರಿಷತ್ ಅಧಿವೇಶನದಲ್ಲಿ ಎಸ್‌ಎನ್‌ಆರ್‌ ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಸದನದ ಶೂನ್ಯವೇಳೆಯಲ್ಲಿ ಗಮನ ಸೆಳೆದಿದ್ದೆ. ಆಗ ಸಚಿವ ಸುಧಾಕರ್ ₹ 7 ಕೋಟಿ ಬಿಡುಗಡೆ ಮಾಡುವ ಭರವಸೆ ನೀಡಿದ್ದು, ಅದರಂತೆ ಹಣ ಬಿಡುಗಡೆಯಾಗಿದೆ’ ಎಂದು ವಿವರಿಸಿದರು.

‘ಬಿಡುಗಡೆಯಾಗಿರುವ ಅನುದಾನದಲ್ಲಿ 12 ವಿಶೇಷ ಕೊಠಡಿ, 3 ವಿಐಪಿ ಕೊಠಡಿ ನಿರ್ಮಾಣ, ಕ್ಯಾಂಟೀನ್‌, ವಾಹನ ನಿಲುಗಡೆ ಸ್ಥಳ, ಆಸ್ಪತೆಯೊಳಗಿನ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘ಅನುದಾನ ಸಾಲದಿದ್ದರೆ ಶಾಸಕರ ನಿಧಿಯಿಂದ ಭರಿಸಲಾಗುತ್ತದೆ. ಈ ಕಾರ್ಯಕ್ಕೆ ಶಾಸಕರು, ಸಂಸದರು ಕೈಜೋಡಿಸುತ್ತಾರೆ. ಎಸ್‌ಎನ್‌ಆರ್‌ ಆಸ್ಪತ್ರೆಗೆ ಸುತ್ತಮುತ್ತಲಿನ ತಾಲ್ಲೂಕಿನ ಹಾಗೂ ಅಕ್ಕಪಕ್ಕದ ರಾಜ್ಯಗಳ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ದಿನೇದಿನೇ ಜನಸಂಖ್ಯೆ ಹೆಚ್ಚುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕರಿಗೆ ಸೌಕರ್ಯ ನೀಡಬೇಕು’ ಎಂದು ತಿಳಿಸಿದರು.

ಅಂಗಡಿ ತೆರವು: ‘ಆಸ್ಪತ್ರೆ ಅವರಣದಲ್ಲಿ ಅನಧಿಕೃತವಾಗಿ ತಲೆಎತ್ತಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಿಸುತ್ತೇವೆ. ಆಸ್ಪತ್ರೆಯಲ್ಲಿ ಎಸ್‌ಟಿಪಿ ನಿರ್ಮಿಸಿ ಕಲುಷಿತ ನೀರನ್ನು ಸಂಸ್ಕರಿಸಿ ಹೊರಗೆ ಹರಿಸಲಾಗುತ್ತದೆ. ವೈದ್ಯರ ವಸತಿಗೃಹ ನವೀಕರಣಕ್ಕೆ ಒತ್ತು ನೀಡುವ ಮೂಲಕ ವೈದ್ಯರು ಅಲ್ಲಿ ವಾಸವಿರುವ ವಾತಾವರಣ ಸೃಷ್ಟಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯ 23 ಎಕರೆ ಜಾಗದಲ್ಲಿ 12.5 ಎಕರೆ ನೀಡಿದರೆ ಸುಸಜ್ಜಿತ ಆಸ್ಪತ್ರೆ ಕಟ್ಟಡದ ಜತೆಗೆ ವೈದ್ಯಕೀಯ ಕಾಲೇಜು ನಿರ್ಮಿಸಬಹುದು. ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಹುದ್ದೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಕೊರತೆಯಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡುತ್ತೇವೆ’ ಎಂದು ಹೇಳಿದರು.

‘ಆಸ್ಪತ್ರೆ ಅವರಣದ ಜನತಾ ಬಜಾರ್ ಮತ್ತು ಜನೌಷಧ ಕೇಂದ್ರದಲ್ಲಿ ಔಷಧ ಮಾತ್ರೆಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು. ಆಸ್ಪತ್ರೆ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಲೋಕೋಪಯೋಗಿ ಇಲಾಖೆ, ಜಿಲ್ಲಾ ನಿರ್ಮಿತಿ ಕೇಂದ್ರ ಹಾಗೂ ಆರೋಗ್ಯ ಇಲಾಖೆ ಸೇರಿ ಅಂದಾಜು ಪಟ್ಟಿ ರೂಪಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ನಿರ್ಮಿತಿ ಕೇಂದ್ರದ ನಿರ್ದೇಶಕ ನಾರಾಯಣಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ (ಪ್ರಭಾರ) ಡಾ.ರಘುರಾಮರೆಡ್ಡಿ, ಮಕ್ಕಳ ತಜ್ಞ ಡಾ.ಬಾಲಸುಂದರ್, ಆಸ್ಪತ್ರೆ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT