ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಖುಷಿ | ಕೈಹಿಡಿದ ವೀಳ್ಯದೆಲೆ ಕೃಷಿ

ಗ್ರಾಮೀಣ ಭಾಗದ ರೈತರ ಆದಾಯದ ಮೂಲ
ಮಂಜುನಾಥ ಎಸ್.
Published 10 ಜುಲೈ 2024, 7:25 IST
Last Updated 10 ಜುಲೈ 2024, 7:25 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಗ್ರಾಮೀಣ ಭಾಗದಲ್ಲಿನ ರೈತರು ಆದಾಯದ ಮೂಲವಾಗಿ ವೀಳ್ಯದೆಲೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ಈ ಭಾಗದ ರೈತರು ಹೈನೋದ್ಯಮ ಮತ್ತು ವೀಳ್ಯದೆಲೆ ಕೃಷಿಯನ್ನೇ ಆದಾಯದ ಮೂಲವಾಗಿ ಮಾಡಿಕೊಂಡಿದ್ದು, ಸುಮಾರು 800 ರಿಂದ 1000 ವೀಳ್ಯದೆಲೆ ತೋಟವನ್ನು ಈ ಹೋಬಳಿಯಲ್ಲಿ ಕಾಣಬಹುದಾಗಿದೆ.

ವೀಳ್ಯದೆಲೆ ಕೃಷಿಗೆ ಅನುಭವ ಮತ್ತು ಕಾರ್ಮಿಕರ ಅವಶ್ಯಕತೆ ಇಲ್ಲದ ಕಾರಣ ಈ ಭಾಗದ ರೈತರನ್ನು ಕೈಹಿಡಿದಿದೆ. ಎಲೆ, ಅಡಿಕೆಗೆ ಎಲ್ಲಾ ಕಾಲಮಾನದಲ್ಲೂ ಬೇಡಿಕೆ ಇದ್ದು, ಉತ್ತಮ ಬೆಲೆಯೂ ಸಿಗುತ್ತದೆ.

ಬಹುಪಯೋಗಿ ವೀಳ್ಯದೆಲೆ: ಎಲ್ಲಾ ಶುಭ ಕಾರ್ಯಗಳಿಗೆ ವೀಳ್ಯದೆಲೆ ಪ್ರಥಮ ಸ್ಥಾನದಲ್ಲಿದೆ. ಶೀತ, ಅಜೀರ್ಣ ಸಮಸ್ಯೆಗೆ ವೀಳ್ಯದೆಲೆ ಮನೆಮದ್ದು. ಪೂಜೆ, ಆರೋಗ್ಯ ಸೇರಿದಂತೆ ಎಲ್ಲೆಡೆ ವೀಳ್ಯದೆಲೆ ಬಳಸುತ್ತಾರೆ. ಇದು ಜೀರ್ಣಕ್ರಿಯೆಗೆ ಹೆಚ್ಚು ಉಪಯುಕ್ತವಾಗಿದ್ದು, ಊಟದ ಬಳಿಕ ತಾಂಬೂಲವಾಗಿ ಸೇವಿಸುತ್ತಾರೆ.

ವೀಳ್ಯದೆಲೆಯನ್ನು ಸಾಮಾನ್ಯವಾಗಿ ತಿಂಗಳಿಗೆ ಒಂದು ಬಾರಿ ಕಟಾವು ಮಾಡುತ್ತಾರೆ. ಒಂದು ಕಟ್ಟಿಗೆ ನೂರು ಎಲೆ ಇರುತ್ತವೆ. ಗುಣಮಟ್ಟದ ವೀಳ್ಯದೆಲೆ ಪೂರೈಕೆಯಾಗದ ಕಾರಣ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದ್ದು, ಒಂದು ಕಟ್ಟಿಗೆ ಸರಾಸರಿ ₹100 ರಿಂದ ₹150ಕ್ಕೆ ಮಾರಾಟವಾಗುತ್ತವೆ.

ಮಾರುಕಟ್ಟೆ ಸಮಸ್ಯೆ: ಕಾಮಸಮುದ್ರ ಸುತ್ತಮುತ್ತಲಿನ ರೈತರು ವೀಳ್ಯದೆಲೆಯನ್ನು ಕಟಾವು ಮಾಡಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕಾಮಸಮುದ್ರದ ಮುಖ್ಯರಸ್ತೆಯಲ್ಲಿ ಮುಂಜಾನೆ ತಂದು ಮಧ್ಯವರ್ತಿಗಳಿಗೆ ಮಾರಾಟ ಮಾಡಲಾಗುತ್ತದೆ.

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ

ನಮ್ಮ ತೋಟದಲ್ಲಿ ಕನಿಷ್ಠ ತಿಂಗಳಿಗೆ 300 ಕಟ್ಟು ಎಲೆ ದೊರೆಯುತ್ತದೆ. ಯಾವುದೇ ರೀತಿಯ ರಾಸಾಯನಿಕ ಬಳಸದೆ ಕೊಟ್ಟಿಗೆ ಗೊಬ್ಬರ ಬಳಸಿ ಸಾವಯುವ ಕೃಷಿ ಮಾಡುತ್ತೇವೆ. ಹಾಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬೆಲೆ ದೊರೆಯುತ್ತದೆ – ಎಸ್.ಕೆ.ಜಯಣ್ಣ, ವೀಳ್ಯದೆಲೆ ಬೆಳೆಗಾರ

ಈ ಕೆಲಸದಿಂದ ಕುಟುಂಬ ಪೋಷಣೆ

ವೀಳ್ಯದೆಲೆ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದ್ದು, ದಿನಕ್ಕೆ ₹600 ನೀಡುತ್ತಾರೆ. ತಿಂಗಳ ಪೂರ್ತಿ ಕೂಲಿ ದೊರೆಯುತ್ತದೆ. ಸುಮಾರು ಹತ್ತು ವರ್ಷಗಳಿಂದ ಕೆಲಸ ಮಾಡಿ ಕುಟುಂಬ ಪೋಷಿಸುತ್ತಿದ್ದೇನೆ – ಮಂಜುನಾಥ ಆರ್.ವಿ., ವೀಳ್ಯದೆಲೆ ಕೃಷಿ ಕಾರ್ಮಿಕ  

ಮಾರುಕಟ್ಟೆ ಪ್ರಾರಂಭಿಸಿ

ವೀಳ್ಯದೆಲೆ ಬೆಳೆಗಾರರ ಹಿತದೃಷ್ಟಿಯಿಂದ ಈ ಭಾಗದಲ್ಲಿ ವೀಳ್ಯದೆಲೆ ಮಾರುಕಟ್ಟೆ ಪ್ರಾರಂಭಿಸಿ ರೈತರ ಹಿತ ಕಾಪಾಡಬೇಕು – ನಾರಾಯಣ ಗೌಡ, ರಾಜ್ಯ ಉಪಾಧ್ಯಕ್ಷ, ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT