ಶನಿವಾರ, ಜನವರಿ 18, 2020
23 °C
ಸಮೀಕ್ಷೆಗೆ ಸಹಕರಿಸಲು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚನೆ

ಜ.6ಕ್ಕೆ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜ.6ರಿಂದ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಆರಂಭವಾಗಲಿದ್ದು, ಅಧಿಕಾರಿಗಳು ಲೋಪವೆಸಗದಂತೆ ಎಚ್ಚರವಹಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆದ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಕುರಿತು ನಡೆದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಸ್ಥಳೀಯ ನಗರಸಭೆ, ಗ್ರಾ.ಪಂ ಸದಸ್ಯರು ಭಾಗವಹಿಸುವಿಕ್ಕೆ ಇರಬೇಕು. ಮಕ್ಕಳ ವಲಸೆ, ಕಳ್ಳವ್ಯಾಪಾರ ತಡೆಯಲು ಸ್ಥಳೀಯ ಮಟ್ಟದಲ್ಲಿ ಮಕ್ಕಳ ರಕ್ಷಣೆ, ನಿಗಾ ಸಮಿತಿ, ಕಾವಲು ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲಾ, ತಾಲ್ಲೂಕು, ಕ್ಲಸ್ಟರ್, ಶಾಲೆ ಹಾಗೂ ಜನವಸತಿ ಪ್ರದೇಶಗಳಲ್ಲಿ ಮಕ್ಕಳ ಸಮೀಕ್ಷೆ ನಡೆಸಬೇಕು. ಪ್ರತಿ ಶಾಲಾ ಹಂತದಲ್ಲೂ ತರಗತಿವಾರು ಕಳೆದ ಶೈಕ್ಷಣಿಕ ವರ್ಷದ ಏಪ್ರಿಲ್ ೧೦ ರಲ್ಲಿದ್ದಂತೆ ಮಕ್ಕಳ ದಾಖಲಾತಿಗೂ ಈ ಶೈಕ್ಷಣಿಕ ಸಾಲಿನ ಅಕ್ಟೋಬರ್ ೩೦ರಲ್ಲಿ ಇರುವ ದಾಖಲಾಗಿರುವ ಮಕ್ಕಳ ಸಂಖ್ಯೆಗೂ ವಿದ್ಯಾರ್ಥಿವಾರು ವ್ಯತ್ಯಾಸ ಗಮನಿಸಬೇಕು’ ಎಂದು ಹೇಳಿದರು.

‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ನ್ಯಾಯಾಲಯದ ನಿರ್ದೇಶನದಂತೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಜ.೬ ರಿಂದ ಜ.೨೦ ರೊಳಗೆ ನಡೆಸಲು ತೀರ್ಮಾನಿಸಲಾಗಿದ್ದು, ಅಧಿಕಾರಿಗಳು ಸಹಕರಿಸಬೇಕು’ ಎಂದು ತಿಳಿಸಿದರು.

‘ಗ್ರಾಮ ಸಭೆ, ವಾರ್ಡ್‌ಸಭೆ, ಮಕ್ಕಳ ಗ್ರಾಮ ಸಭೆಗಳನ್ನು ನಡೆಸಿ ಶಾಲೆಯಿಂದ ಹೊರಗುಳಿದ, ವಲಸೆ ಮಕ್ಕಳ ಮಾಹಿತಿಗಳ ಕುರಿತು ನಡಾವಳಿ ಮಾಡಬೇಕು. ಸಮೀಕ್ಷೆ ನಡೆಸುವ ಉದ್ದೇಶವನ್ನು ಗ್ರಾ.ಪಂ ನಗರಸಭಾ ಸದಸ್ಯರ ಭಾಗವಹಿಸುವಿಕೆ ಇರಬೇಕು’ ಎಂದು ಹೇಳಿದರು.

‘ಸಮೀಕ್ಷೆ ಸಂದರ್ಭದಲ್ಲಿ ಬೀದಿಬದಿ ಮಕ್ಕಳು, ಅನಾಥ, ಭಿಕ್ಷೆ ಬೇಡುವ ಮಕ್ಕಳು, ಬಾಲಾಪರಾಧಿಗಳು ಕಂಡು ಬಂದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಬೇಕು. ಪೋಷಕರು ಶಾಲೆಗೆ ಕಳುಹಿಸಲು ಒಪ್ಪದಿದ್ದರೆ ಅವರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕು’ ಎಂದರು.

‘ಕಾರ್ಮಿಕ ಶಿಬಿರಗಳ ನಕ್ಷೆ ತಯಾರಿಸಿ ಅದನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ, ಕಂದಾಯ ನಿರೀಕ್ಷಕರಿಗೆ, ಶಿಕ್ಷಣ ಇಲಾಖೆಯ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಪೋಷಕರನ್ನು ಮನವೊಲಿಸಬೇಕು’ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮಾತನಾಡಿ, ‘ಶಿಕ್ಷಣ ಇಲಾಖೆ ಸಮೀಕ್ಷೆಗೆ ಎಲ್ಲಾ ರೀತಿಯ ನೆರವು ನೀಡಲಿದ್ದು, ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಡಯೆಟ್ ಪ್ರಾಂಶುಪಾಲ ಶ್ರೀಕಂಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್.ನಾಗರಾಜಗೌಡ, ಸಿ.ಆರ್.ಅಶೋಕ್, ಉಮಾದೇವಿ, ಸೋಮೇಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು