ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲೀಕಾರರ ಬರಹ ಪಠ್ಯದಲ್ಲಿ ಸೇರಿಸಿ

ಶ್ರದ್ಧಾಂಜಲಿ ಸಭೆಯಲ್ಲಿ ಕವಿ ಶರಣಪ್ಪ ಗಬ್ಬೂರ್‌ ಸಲಹೆ
Last Updated 27 ನವೆಂಬರ್ 2019, 13:59 IST
ಅಕ್ಷರ ಗಾತ್ರ

ಕೋಲಾರ: ‘ಸಾಹಿತಿ ಚನ್ನಣ್ಣ ವಾಲೀಕಾರ ಅವರು ಪ್ರತಿರೋಧಗಳ ನಡುವೆಯೂ ಬಹುದೊಡ್ಡ ಪರಂಪರೆಯ ಬಂಡಾಯ ಸಾಹಿತ್ಯವನ್ನು ಮುಂಚೂಣಿಯಲ್ಲಿ ತಂದು ನಿಲ್ಲಿಸಿದರು’ ಎಂದು ಕವಿ ಶರಣಪ್ಪ ಗಬ್ಬೂರ್‌ ಸ್ಮರಿಸಿದರು.

ಚನ್ನಣ್ಣ ವಾಲೀಕಾರ ಅವರ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ‘ವಾಲೀಕಾರ ಅವರು ದಲಿತ ಬಂಡಾಯ ಕಾವ್ಯದ ನೆರಳಲ್ಲಿ ಸಮತೆಯೊಳಗೆ ಜನರ ಬದುಕಿನ ಸೂರಿನಾಶ್ರಯಕ್ಕಾಗಿ ಹೋರಾಟಕ್ಕಿಳಿದ ಸಾಹಿತಿ’ ಎಂದು ಬಣ್ಣಿಸಿದರು.

‘ವಾಲೀಕಾರ ಅವರು ರಾಜ್ಯದ ಜನಕ್ಕೆ ರೋಮಾಂಚನ ಉಂಟು ಮಾಡಿದ ಹೋರಾಟಗಾರರಾಗಿದ್ದರು. ಶ್ರಮಿಕ ವರ್ಗದ ಜನರಿಗಾಗಿ ಸರ್ವತ್ವವನ್ನು ತೊರೆದ ಸಾಹಿತಿ. ಮೂಲೆಗುಂಪಾದ ಜನರ ನೋವುಗಳಿಗೆ ಪ್ರತಿಸ್ಪಂದಿಸುವ ಗುಣ ಹೊಂದಿರುವ ಅವರ ಬದುಕು ಬರಹವನ್ನು ವಿಶ್ವವಿದ್ಯಾಲಯದ ಪಠ್ಯಕ್ರಮವಾಗಿ ಅಳವಡಿಸಬೇಕು’ ಎಂದು ಸಲಹೆ ನೀಡಿದರು.

‘ಚನ್ನಣ್ಣ ವಾಲೀಕಾರರು ನೆಲದ ಚಿಂತನೆಯ ನೆಲೆಯಲ್ಲಿ ದಲಿತ ಬಂಡಾಯದ ಆದಿಮದ ಜೀವಕಾರುಣ್ಯಗಳ ಕರುಳಿನ ಕಥೆಗಳನ್ನು, ಸಂಸ್ಕೃತಿಯ ಚಿಂತನೆಗಳನ್ನು ಕಥೆ, ಕಾವ್ಯ, ಕಾದಂಬರಿ, ಮಹಾಕಾವ್ಯದ ಮೂಲಕ ಇಡೀ ಸಾಹಿತ್ಯವನ್ನು ಎಚ್ಚರಗೊಳಿಸಿದ ಮಹಾಕಾವ್ಯದ ಕವಿ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ ಅಭಿಪ್ರಾಯಪಟ್ಟರು.

ದೈತ್ಯ ಧೂಮಕೇತು: ‘ಸಾಮ್ರಾಜ್ಯಶಾಹಿ ಧೋರಣೆ ದಿಕ್ಕರಿಸಿ ಪೆರಿಯಾರ್‌ರ ಜಾತ್ಯತೀತ ಜಾಯಮಾನದಲ್ಲಿ ಸಮಾನತೆಗಾಗಿ ಜೀವಪರವಾದ ಕಾಳಜಿಯೊಂದಿಗೆ ಬದುಕಿನ ಹೋರಾಟ ಮಾಡಿದ ದೈತ್ಯ ಧೂಮಕೇತು ಚನ್ನಣ್ಣ ವಾಲೀಕಾರ. ಸರ್ವೋದ್ಧಾರದ ಶ್ರದ್ಧೆಯೊಳಗೆ ಬೌದ್ಧಿಕತೆಯನ್ನು ಕ್ರಿಯೆ ಪ್ರಕ್ರಿಯೆಯಲ್ಲಿ ಸಂಘರ್ಷದ ಮುಖಾಂತರ ಚರ್ಚೆಗೆ ಒಳಪಡಿಸಿ ಗೆದ್ದವರು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಹೇಳಿದರು.

ಕನ್ನಡ ಸಾಂಸ್ಕೃತಿಕ ಪರಿಷತ್‌ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣಪ್ಪ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಸದಸ್ಯರಾದ ಟಿ.ಸುಬ್ಬರಾಮಯ್ಯ, ಕೆ.ಎನ್.ಪರಮೇಶ್ವರನ್, ಡ್ಯಾನಿಡಾ ಕೃಷ್ಣಮೂರ್ತಿ, ಬಿ.ಶಿವಕುಮಾರ್ ಹಾಜರಿದ್ದರು.

ಪುಷ್ಪನಮನ: ಜನಜಾಗೃತಿ ಮತದಾರರ ವೇದಿಕೆ ಸದಸ್ಯರು ಚನ್ನಣ್ಣ ವಾಲೀಕರ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

‘ದಲಿತರು, ಮಹಿಳೆಯರು ಹಾಗೂ ಶೋಷಿತರ ಧ್ವನಿಯಾಗಿ ಸಾಹಿತ್ಯ ರಚನೆ ಮಾಡಿದ ಚನ್ನಣ್ಣ ಮಾಲೀಕರ ಅವರು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ’ ಎಂದು ವೇದಿಕೆ ಅಧ್ಯಕ್ಷ ಮಂಜು ಹೇಳಿದರು.

‘ವಾಲೀಕರ ಅವರು ಯುವಕರಲ್ಲಿ ಜಾಗೃತಿ ಮೂಡಿಸಿದರು. ಜನರ ಆರ್ಥಿಕತೆ, ಸಮಾನತೆ, ಜಾತೀಯತೆ ಕುರಿತು ಸಾಹಿತ್ಯದಲ್ಲಿ ಬೆಳಕು ಚೆಲ್ಲಿದ್ದಾರೆ’ ಎಂದು ಶಿಕ್ಷಕ ವೇಣುಗೋಪಾಲಕೃಷ್ಣ ಅಭಿಪ್ರಾಯಪಟ್ಟರು.

ಜನಶಕ್ತಿ ಸೇನೆ ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಕಾಂಗ್ರೆಸ್ ಘಟಕದ ಸಂಘಟನಾ ಕಾರ್ಯದರ್ಶಿ ಆರೀಫ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT