ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಕೋರ್ಟ್‌ ಆದೇಶ ಉಲ್ಲಂಘನೆ ಆರೋಪ

ರೈತರ ಜಮೀನಿಗೆ ಸೋಲಾರ್‌ ಬೇಲಿ ಅಳವಡಿಕೆಗೆ ಅರಣ್ಯ ಇಲಾಖೆ ಯತ್ನ
Last Updated 26 ಜುಲೈ 2021, 4:34 IST
ಅಕ್ಷರ ಗಾತ್ರ

ಬಂಗಾರಪೇಟೆ: ಅರಣ್ಯ ಇಲಾಖೆ ಅಧಿಕಾರಿಗಳು ಅವೈಜ್ಞಾನಿಕವಾಗಿ ನಮ್ಮ ಜಮೀನಿನಲ್ಲಿ ಸೋಲಾರ್ ಬೇಲಿ ಅಳವಡಿಸಲು ಮುಂದಾಗಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆ ಧಿಕ್ಕರಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದಿನ್ನೂರು ಗ್ರಾಮದ ರೈತ ಮುರುಗೇಶ ಆರೋಪಿಸಿದ್ದಾರೆ.

ಮಾಲೂರು ತಾಲ್ಲೂಕಿನ ವಲಯ ಅರಣ್ಯಾಧಿಕಾರಿ ಹಾಗೂ ಡಿಆರ್‌ಎಫ್ಒ ಅವರು ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ವಿನಾಕಾರಣ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

ಪಲಮಡಗು ಗ್ರಾಮಕ್ಕೆ ಸೇರಿದ ಸರ್ವೆ ನಂ. 20ಪಿ 27ರಲ್ಲಿ 3 ಎಕರೆ ಜಮೀನು ನನ್ನ ಹೆಸರಲ್ಲಿದೆ. ಹಲವು ವರ್ಷದಿಂದ ಈ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಅರಣ್ಯ ಇಲಾಖೆ ಅಧಿಕಾರಿಗಳು ನನ್ನ ಜೀವನಾಧಾರಕ್ಕೆ ಇದ್ದ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸರ್ವೆ ನಂಬರ್‌ನಲ್ಲಿ ನೂರಾರು ಎಕರೆ ಗೋಮಾಳ ಜಮೀನಿದೆ. ಅದನ್ನು ಬಿಟ್ಟು ನಮ್ಮ ಭೂಮಿಯಲ್ಲೇ ಸೋಲಾರ ಬೇಲಿ ಅಳವಡಿಕೆಗೆ ಭೂಮಿಯನ್ನು ಸಮತಟ್ಟು ಮಾಡಿದ್ದಾರೆ. ಜಮೀನು ವಿಚಾರವಾಗಿ ಅರಣ್ಯ ಅಧಿಕಾರಿಗಳು ಪದೇ ಪದೇ ತೊಂದರೆ ನೀಡುತ್ತಿರುವ ಬಗ್ಗೆ ಬಂಗಾರಪೇಟೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೆ. ನ್ಯಾಯಾಲಯವು ಜಮೀನಿನಿಂದ ಒಂದು ಕಿ.ಮೀ ವ್ಯಾಪ್ತಿಯವರೆಗೂ ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಆದೇಶಿಸಿದೆ ಎಂದು ತಿಳಿಸಿದ್ದಾರೆ.

ಕೋರ್ಟ್‌ ಆದೇಶ ಪ್ರಶ್ನಿಸಿದ ಅಧಿಕಾರಿಗಳು ಕೆಜಿಎಫ್ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅಲ್ಲಿಯೂ ಹಿಂದಿನ ಆದೇಶವನ್ನೇ ಎತ್ತಿ ಹಿಡಿಯಲಾಗಿದೆ. ಆದರೂ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ.

‘ನಮ್ಮ ಜಮೀನಿನಿಂದ ಮೂರ್ನಾಲ್ಕು ಎಕರೆ ಕೆಳಭಾಗದಲ್ಲಿ ಕಾಡುಪ್ರಾಣಿಗಳು ಬರದಂತೆ ಗುಂಡಿ ತೋಡುತ್ತಿದ್ದ ಇಲಾಖೆಯು ಈಗ ಏಕಾಏಕಿ ಜಮೀನಿನಲ್ಲಿ ಸೋಲಾರ್ ಬೇಲಿ ಅಳವಡಿಕೆಗೆ ಮುಂದಾಗಿದೆ. ನಮ್ಮ ಭೂಮಿ ಬಿಟ್ಟು ಪಕ್ಕದ ಗೋಮಾಳದ ಅಂಚಿನಲ್ಲಿ ಬೇಲಿ ಅಳವಡಿಸಬೇಕು. ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ಕೈ ಬಿಡಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅರಣ್ಯ ಅಧಿಕಾರಿಗಳು ಕೇಳುತ್ತಿಲ್ಲ ಎಂದಿದ್ದಾರೆ.

‘ರೈತರ ದಾಖಲೆ ಪರಿಶೀಲಿಸಲಾಗುವುದು. ಅದು ಅವರ ಸ್ವಂತ ಜಮೀನಾಗಿದ್ದರೆ ಸೋಲಾರ್‌ ಬೇಲಿ ಅಳವಡಿಸುವುದಿಲ್ಲ. ಇಲ್ಲವಾದರೆ ಅರಣ್ಯ ಕಾಯ್ದೆ ಅನ್ವಯ ಕ್ರಮವಹಿಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT