ಸೋಮವಾರ, ಫೆಬ್ರವರಿ 17, 2020
16 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ಎನ್‌ಪಿಎ ಕಡಿಮೆ ಮಾಡದಿದ್ದರೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಾಲದ ಕಂತು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಫಲಾನುಭವಿ ಮನೆ ಬಾಗಿಲಿಗೆ ಹೋಗಿ ವಸೂಲಿ ಮಾಡಬೇಕು, ಎನ್‌ಪಿಎ ಪ್ರಮಾಣ ಕಡಿಮೆ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಎಚ್ಚರಿಕೆ ನೀಡಿದರು.

ನಗರದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಗುರಿ ಮೀರಿ ಬ್ಯಾಂಕಿನಿಂದ ವಿವಿಧ ರೀತಿಯ ಸಾಲ ನೀಡಲಾಗಿದೆ. ಕೆಲವರು ಕಂತುಗಳನ್ನು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ. ಮಾರ್ಚ್ ಅಂತ್ಯದೊಳಗೆ ವಸೂಲಿಯಾಗಿರಬೇಕು’ ಎಂದು ತಾಕೀತು ಮಾಡಿದರು.

‘ಎನ್‌ಪಿಎ ಶೇ.3.2ರಷ್ಟಿದ್ದು, ಕಳೆದ ವಾರ ಜಿಲ್ಲೆಗೆ ಬೇಟಿ ನೀಡಿದ್ದ ನಬಾರ್ಡ್ ಅಧಿಕಾರಿಗಳು ಇನ್ನು ಕಡಿಮೆ ಮಾಡಲು ತಿಳಿಸಿದ್ದಾರೆ. ₨ 400 ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ಎನ್‌ಪಿಎ ಶೇ.2ಕ್ಕೆ ಇಳಿಸಬೇಕು. ಎರಡೂ ಜಿಲ್ಲೆಯಲ್ಲಿ ಈ ಭಾಗಿ ₨ 1 ಸಾವಿರ ಕೋಟಿ ಸಾಲ ವಿತರಣೆಗೆ ಯೋಜನೆ ರೂಪಿಸಲಾಗಿದೆ. ಅಧಿಕಾರಿಗಳು, ಆಡಳಿತ ಮಂಡಳಿಯವರು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದರೆ ಗುರಿ ಸಾಧನೆಗೆ ಖಚಿತ’ ಎಂದು ಹೇಳಿದರು.

‘ಅಧಿಕಾರಿಗಳು ಠೇವಣಿ ಸಂಗ್ರಹದ ಗುರಿ ಸಾಧನೆ ಮಾಡುವುದಾಗಿ ತಿಳಿಸಿದ್ದೀರಿ, ಈಗ ಈ ಸಾಧನೆಗೆ ಹಿನ್ನಡೆಯಾದರೆ ಹೇಗೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅನ್ನ ನೀಡಿ ಪೋಷಿಸುತ್ತಿರುವ ಬ್ಯಾಂಕ್‌ಗೆ ದ್ರೋಹ ಮಾಡಿದರೆ ಹೇಗೆ ಎಂದು ಆತ್ಮಾವಲೋಕನ ಮಾಡಿಕೊಳ್ಳಿ, ಒಪ್ಪಿಕೊಂಡ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡಿ ತೋರಿಸಿ’ ಎಂದು ಸಲಹೆ ನೀಡಿದರು.

‘ಹುದುಕುಳ ಸೊಸೈಟಿಯಲ್ಲಿ ಯಾವೂದೇ ಅವ್ಯವಹಾರಗಳು ನಡೆದಿಲ್ಲ. ಕಾರ್ಯದರ್ಶಿಯ ಕರ್ತವ್ಯ ಲೋಪದಿಂದ ಉಂಟಾಗಿದ್ದ ವ್ಯತ್ಯಾಸಗಳನ್ನು ಸರಿಪಡಿಸಲಾಗಿದೆ. ಆ ಸಂಘದ ನಿರ್ದೇಶಕನ ಕುಟುಂಬದ ಸದಸ್ಯರು ಬ್ಯಾಂಕಿಗೆ ಕೆಟ್ಟ ಹೆಸರು ತರಲು ಸಭೆಯಲ್ಲಿ ಗಲಭೆ ಸೃಷ್ಟಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಠೇವಣಿ ಸಂಗ್ರಹ ಮತ್ತು ಬಾಕಿ ಕಂತುಗಳ ವಸೂಲಾತಿಯಲ್ಲಿ ಅಧಿಕಾರಿಗಳು ರಾಜಿಯಾಗಬಾರದು. ಬ್ಯಾಂಕ್ ಈಗ ಸವಾಲಿನ ದಿಕ್ಕಿನಲ್ಲಿ ನಡೆಯುತ್ತಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೊಂಡು ಕೆಲಸ ನಿರ್ವಹಿಸಬೇಕು’ ಎಂದು ತಿಳಿಸಿದರು.

‘ಈ ಭಾರಿ ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿನ ಮಹಿಳಾ ಸಂಘಗಳಿಗೆ ಸಾಲ ವಿತರಿಸಲು ಆದ್ಯತೆ ನೀಡಲಾಗುವುದು. ಕೆಸಿಸಿ ಸಾಲ ವಸೂಲಿ ಮಾ.10ರೊಳಗೆ ಆಗಬೇಕು. ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಪ್ರಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಕವಿಮಾತು ಹೇಳಿದರು.

ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್ ಕುಮಾರ್, ಕೆ.ವಿ.ದಯಾನಂದ್, ಹನುಮಂತರೆಡ್ಡಿ, ಮೋಹನ್‌ರೆಡ್ಡಿ, ಸೊಣ್ಣೇಗೌಡ, ನಾಗೀರೆಡ್ಡಿ, ಬಿ.ವಿ.ವೆಂಕಟರೆಡ್ಡಿ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಶಿವಕುಮಾರ್, ಬೈರೇಗೌಡ, ಕಲಿಂಮುಲ್ಲಾ, ನಾಗೇಶ್, ಚೌಡಪ್ಪ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು