ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ‘ಸ್ಯಾಮ್’ ಮಕ್ಕಳ ದತ್ತು ಸ್ವೀಕಾರ

ಆರೋಗ್ಯ ಸುಧಾರಣೆಗೆ ಮಹಿಳಾ–ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವದ ಹೆಜ್ಜೆ
Last Updated 6 ಅಕ್ಟೋಬರ್ 2021, 12:22 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 167 ಮಕ್ಕಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಮಕ್ಕಳನ್ನು ಕೆಲ ತಿಂಗಳು ದತ್ತು ಪಡೆಯಲು ಮುಂದಾಗಿದೆ.

ಆರು ವರ್ಷದೊಳಗಿನ ಮಕ್ಕಳ ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಅಪೌಷ್ಟಿಕತೆಯು ಪ್ರಮುಖವಾಗಿದೆ. ತೀವ್ರ ಅಪೌಷ್ಟಿಕತೆಗೆ (ಸಿವಿಯರ್‌ ಅಕ್ಯೂಟ್‌ ಮಾಲ್‌ನ್ಯೂಟ್ರಿಷನ್‌–ಸ್ಯಾಮ್‌) ತುತ್ತಾಗಿರುವ ಮಕ್ಕಳನ್ನು ವೈದ್ಯಕೀಯವಾಗಿ ಆರೋಗ್ಯ ಕಾರ್ಯಕರ್ತರ ಪರಿಭಾಷೆಯಲ್ಲಿ ಸಾವಿನತ್ತ ಹೆಜ್ಜೆ ಹಾಕಿರುವ ಮಕ್ಕಳೆಂದೇ ಪರಿಗಣಿಸಲಾಗುತ್ತದೆ.

ಜಿಲ್ಲೆಯಲ್ಲಿ 2,080 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಿಗೆ ಬರುವ ಹುಟ್ಟಿನಿಂದ 6 ವರ್ಷ ವಯೋಮಾನದವರೆಗಿನ 97,317 ಮಕ್ಕಳ ತೂಕ, ಬೆಳವಣಿಗೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಮಾರ್ಗಸೂಚಿ ಪ್ರಕಾರ ಮಕ್ಕಳ ವಯಸ್ಸು ಮತ್ತು ತೂಕದ ಆಧಾರದ ಮೇಲೆ ಬೆಳವಣಿಗೆಯನ್ನು ಗ್ರೇಡ್ ಆಧಾರದಲ್ಲಿ ಗುರುತಿಸಲಾಗುತ್ತದೆ. ಅದರ ಪ್ರಕಾರ ಸಾಮಾನ್ಯ, ಸಾಧಾರಣ ಮತ್ತು ತೀವ್ರ ಕಡಿಮೆ ತೂಕ ಹೊಂದಿರುವ ಮಕ್ಕಳೆಂದು ನಿರ್ಧರಿಸಲಾಗುತ್ತದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಸದ್ಯ ಸಾಧಾರಣ ಅಪೌಷ್ಟಿಕತೆ (ಮಾಡರೇಟ್‌ ಅಕ್ಯೂಟ್‌ ಮಾಲ್‌ನ್ಯೂಟ್ರಿಷನ್‌– ಮ್ಯಾಮ್‌) ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 3,714 ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ (ಸ್ಯಾಮ್‌) ಮಕ್ಕಳ ಸಂಖ್ಯೆ 167 ಇದೆ. ಸ್ಯಾಮ್‌ ಮಕ್ಕಳಲ್ಲಿ 107 ಹೆಣ್ಣು ಹಾಗೂ 60 ಗಂಡು ಮಕ್ಕಳಿವೆ.

ಬಡ, ಮಧ್ಯಮ ಮತ್ತು ಮೇಲ್ವರ್ಗ, ಗಂಡು ಹಾಗೂ ಹೆಣ್ಣು ಹೀಗೆ ಎಲ್ಲಾ ವರ್ಗದ ಮಕ್ಕಳಲ್ಲೂ ಅಪೌಷ್ಟಿಕತೆ ಕಾಣಿಸಿಕೊಂಡಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಈ ಮಕ್ಕಳಲ್ಲಿ ಅಂಗವೈಕಲ್ಯ, ಕಡಿಮೆ ಬುದ್ಧಿಶಕ್ತಿ, ಕುರುಡುತನ, ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ.

ಹಣಕಾಸು ನೆರವು: ಇಲಾಖೆ ಅಧಿಕಾರಿಗಳು ಸ್ಯಾಮ್‌್ ಮಕ್ಕಳನ್ನು ದತ್ತು ಪಡೆದು ಕೈಗಾರಿಕೆಗಳು, ಖಾಸಗಿ ಕಂಪನಿಗಳು ಮತ್ತು ಸಂಘ- ಸಂಸ್ಥೆಗಳ ಹಣಕಾಸು ನೆರವಿನೊಂದಿಗೆ ಅವರಿಗೆ ಪೌಷ್ಟಿಕ ಆಹಾರ ಮತ್ತು ಔಷಧಗಳನ್ನು ಒದಗಿಸುತ್ತಿದ್ದಾರೆ.ಸ್ಯಾಮ್‌ ಮಕ್ಕಳಿಗೆ ಅಗತ್ಯವಿರುವ ಪೌಷ್ಟಿಕ ಆಹಾರ ಪೂರೈಕೆಗೆ ಅಧಿಕಾರಿಗಳು ಕೈಗಾರಿಕೆಗಳು ಹಾಗೂ ಸಂಘ-ಸಂಸ್ಥೆಗಳ ಸಹಾಯ ಕೋರಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನವಿಗೆ ಸ್ಪಂದಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದು ಸ್ಯಾಮ್‌ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುತ್ತಿದೆ.

ಕೆಲ ಕೈಗಾರಿಕೆಗಳು ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ಕಾರ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆಡಳಿತ ಮಂಡಳಿಯ ಅನುಮತಿ ಸಿಕ್ಕಿದ ನಂತರ ಪೌಷ್ಟಿಕ ಆಹಾರ ಒದಗಿಸಲು ಸಮ್ಮತಿಸಿವೆ. ಕೋಲಾರ ತಾಲ್ಲೂಕಿನ ನರಸಾಪುರದ ಸ್ವಸಹಾಯ ಸಂಘವೊಂದು ಮೈಕ್ರೋ ನ್ಯೂಟ್ರಿಯೆಂಟ್ಸ್‌ ಅಂಶ ಹೆಚ್ಚಿರುವ ‘ಸ್ಪಿರುಲಿನಾ ಚಿಕ್ಕಿ’ ತಯಾರಿಸಿ ಕೊಡುತ್ತಿದೆ. ಈ ಚಿಕ್ಕಿಗಳನ್ನು ಸ್ಯಾಮ್‌ ಮಕ್ಕಳಿಗೆ ನೀಡುವ ಸಂಬಂಧ ಇಲಾಖೆಯು ಹಣಕಾಸು ನೆರವು ಕೋರಿ ಕಂಪನಿಗಳಿಗೆ ಪ್ರಸ್ತಾವ ಸಲ್ಲಿಸಿದೆ.

ಅಲ್ಲದೇ, ಸ್ಯಾಮ್‌ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಯಲ್ಲಿನ ಪೌಷ್ಟಿಕ ಆಹಾರ ಪುನರ್ವಸತಿ ಕೇಂದ್ರಕ್ಕೆ ಕರೆತಂದು ಆರೈಕೆ ಮಾಡಲಾಗುತ್ತಿದೆ. 15 ದಿನಗಳ ಕಾಲ ಮಕ್ಕಳನ್ನು ಕೇಂದ್ರದಲ್ಲೇ ಇರಿಸಿಕೊಂಡು ತೂಕ ಮತ್ತು ಬೆಳವಣಿಗೆ ವೃದ್ಧಿಗೆ ಪೂರಕವಾದ ಪೌಷ್ಟಿಕ ಆಹಾರ ಪದಾರ್ಥ ಕೊಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT