ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ 229 ಎಚ್‍ಐವಿ ಸೋಂಕಿತರು

Published 29 ನವೆಂಬರ್ 2023, 16:37 IST
Last Updated 29 ನವೆಂಬರ್ 2023, 16:37 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಸಾಮಾನ್ಯ ಪ್ರಕರಣಗಳಲ್ಲಿ ಈ ವರೆಗೆ 60,333 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಿದ್ದು, ಅದರಲ್ಲಿ 229 ಜನರಿಗೆ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ಪಾಸಿಟಿವಿಟಿ ರೇಟ್ 0.38 ಇದೆ. 139 ಪುರುಷ ಹಾಗೂ 90 ಮಹಿಳಾ ಸೋಂಕಿತರಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಜಗದೀಶ್‌ ತಿಳಿಸಿದರು.

ಡಿಎಚ್‌ಒ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘16,296 ಗರ್ಭಿಣಿಯರನ್ನು ಪರೀಕ್ಷಿಸಿದ್ದು, 13 ಸೋಂಕಿತರನ್ನು ಪತ್ತೆ ಮಾಡಲಾಗಿದೆ. ಇದರ ಪಾಸಿಟಿವಿಟಿ ರೇಟ್ ಶೇ 0.079 ರಷ್ಟಿದೆ. 18 ತಿಂಗಳ ಅವಧಿಯ 17 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಒಂದು ಮಗುವಿನಲ್ಲಿ ಸೋಂಕು ಇರುವುದು ದೃಢಪಟ್ಟಿದೆ’ ಎಂದರು.

‘ಎಚ್‍ಐವಿ ಸೋಂಕು, ತಾಯಿಯಿಂದ ಮಗುವಿಗೆ ಬರದಂತೆ ತಡೆಯಲು ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾದ ತಕ್ಷಣವೇ ಎಆರ್‌ಟಿ ಚಿಕಿತ್ಸೆ ನೀಡಬೇಕು. ಹೆರಿಗೆ ನಂತರ ಮಗುವಿಗೆ 6 ವಾರ ಅಥವಾ 12 ವಾರ ನೆವರೆಪಿನ್ ದ್ರಾವಣ ನೀಡುವ ಮೂಲಕ ತಾಯಿಯಿಂದ ಮಗುವಿಗೆ ಬರುವ ಎಚ್‍ಐವಿ ಸೋಂಕನ್ನು ನಿಯಂತ್ರಿಸಲಾಗುವುದು. ಈ ಸೌಲಭ್ಯವು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ’ ಎಂದು ವಿವರಿಸಿದರು.

‘ಎಚ್‍ಐವಿ ಸೋಂಕು ತಡೆಗಟ್ಟಲು ಸಾರ್ವಜನಿಕರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿ.1 ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟು 35 ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌ ಸ್ಥಾಪಿಸಲಾಗಿದೆ. ಕಾರ್ಖಾನೆಗಳಲ್ಲಿ ಕಾರ್ಮಿಕರಲ್ಲೂ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

‘ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆ-2, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಇಟಿಸಿಎಂ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮುಳಬಾಗಿಲು, ಸಾರ್ವಜನಿಕ ಆಸ್ಪತ್ರೆ ಶ್ರೀನಿವಾಸಪುರ, ಸಾರ್ವಜನಿಕ ಆಸ್ಪತ್ರೆ ಬಂಗಾರಪೇಟೆ, ಸಾರ್ವಜನಿಕ ಆಸ್ಪತ್ರೆ ಮಾಲೂರು, ಸಾರ್ವಜನಿಕ ಆಸ್ಪತ್ರೆ ಕೆ.ಜಿ.ಎಫ್, ಬೆಮಲ್ ಮೆಡಿಕಲ್ ಸೆಂಟರ್‌ನಲ್ಲಿ ಐ.ಸಿ.ಟಿ.ಸಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಶಾಲಾ ತಂತ್ರಜ್ಞರು ಸಾಮಾನ್ಯ ಪ್ರಕರಣಗಳಿಗೆ ಹಾಗೂ ಎಲ್ಲಾ ಗರ್ಭಿಣಿಯರಿಗೆ ಆಪ್ತ ಸಮಾಲೋಚನೆ ನೀಡುತ್ತಾರೆ. ಎಚ್‍ಐವಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಜಿ.ಪ್ರಸನ್ನಕುಮಾರ್, ಐ.ಸಿ.ಟಿ.ಸಿ ಜಿಲ್ಲಾ ಮೇಲ್ವಿಚಾರಕಿ ಡಿ.ಎಂ.ಹೇಮಲತಾ ಇದ್ದರು.

2023–24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಎಚ್ಐವಿ ಪರೀಕ್ಷೆ ಹಾಗೂ ಸೋಂಕು ಪತ್ತೆ (ಸಾಮಾನ್ಯ ಪ್ರಕರಣ)

ತಾಲ್ಲೂಕು; ಪರೀಕ್ಷೆ; ಸೋಂಕಿತ ಪುರುಷ ಸೋಂಕಿತ ಮಹಿಳೆ; ಒಟ್ಟು

ಕೋಲಾರ; 14996; 73; 50; 123

ಬಂಗಾರಪೇಟೆ; 5808; 13; 11; 24

ಮಾಲೂರು; 4305; 9; 6; 15

ಮುಳಬಾಗಿಲು; 5694; 20; 9; 29

ಶ್ರೀನಿವಾಸಪುರ; 5851; 17; 7; 24

ಕೆಜಿಎಫ್‌; 5965; 7; 7; 14

ಪಿಪಿಪಿ–ಪಲ್ಸ್‌ ಆ್ಯಪ್‌; 17714; 0; 0; 0

ಒಟ್ಟು; 60333; 139; 90; 229 (ಏಪ್ರಿಲ್‌ನಿಂದ ಅಕ್ಟೋಬರ್‌ ಅಂತ್ಯದವರೆಗೆ)

ಡಿ.1 ರಂದು ಏಡ್ಸ್‌ ದಿನಾಚರಣೆ

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಆಶ್ರಯದಲ್ಲಿ ಡಿ.1 ರಂದು ಬೆಳಿಗ್ಗೆ 11.30ಕ್ಕೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ವಿಶ್ವ ಏಡ್ಸ್‌ ದಿನ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30ಕ್ಕೆ ಪ್ರವಾಸಿ ಮಂದಿರದಿಂದ ಜಾಥಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಗಾಂಧಿ ಚೌಕದಿಂದ ಕಾಳಮ್ಮದೇವಿ ವೃತ್ತದವರೆಗೆ ಕ್ಯಾಂಡಲ್‌ ಲೈಟ್‌ ಜಾಥಾ ನಡೆಯಲಿದೆ. ಈ ವರ್ಷದ ಏಡ್ಸ್‌ ದಿನದ ಘೋಷ ವಾಕ್ಯ ‘ಸಮುದಾಯಗಳು ಮುನ್ನಡೆಸಲಿ’ ಎಂಬುದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಉದ್ಘಾಟನೆ ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಕೊತ್ತೂರು ಜಿ.ಮಂಜುನಾಥ್ ವಹಿಸುವರು.

ಎಚ್‌ಐವಿ ಸೋಂಕಿತರಿಗೆ ಸೌಲಭ್ಯ

ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರಿಗೆ ಸರ್ಕಾರದಿಂದ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳಾ ಅಭಿವೃದ್ಧಿ ನಿಗಮದಿಂದ ಧನಶ್ರೀ ಯೋಜನೆ ಅಡಿಯಲ್ಲಿ 2022–23ನೇ ಸಾಲಿನಲ್ಲಿ 125 ಎಚ್‌ಐವಿ ಸೋಂಕಿತ ಮಹಿಳೆಯರಿಗೆ ತಲಾ ₹ 30 ಸಾವಿರ ಸಹಾಯಧನ ನೀಡಲಾಗಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮದಡಿ 22 ಎಚ್‌ಐವಿ ಸೋಂಕಿತರು ಹಾಗೂ 27 ಲೈಂಗಿಕ ಕಾರ್ಯಕರ್ತೆಯರು ಸಹಾಯಧನ–ಸಾಲ ಸೌಲಭ್ಯ ಪಡೆದಿದ್ದಾರೆ. 96 ಎಚ್‌ಐವಿ ಸೋಂಕಿತರಿಗೆ ಅನ್ನ ಅಂತ್ಯೋದಯ ಯೋಜನೆ ಅಡಿಯಲ್ಲಿ ರೇಷನ್ ಸೌಲಭ್ಯ ಒದಗಿಸಲಾಗಿದೆ. ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಸೋಂಕಿತ ಹಾಗೂ ಬಾಧಿತ 382 ಮಕ್ಕಳಿಗೆ ತಿಂಗಳಿಗೆ ₹ 1 ಸಾವಿರ ನೀಡಲಾಗುತ್ತಿದೆ. 20 ಮಂದಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT