ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಷಯ ತೃತೀಯ: ಕೋಲಾರದಲ್ಲಿ ಚಿನ್ನ ಖರೀದಿ ಭರ್ಜರಿ

Last Updated 3 ಮೇ 2022, 14:36 IST
ಅಕ್ಷರ ಗಾತ್ರ

ಕೋಲಾರ: ಅಕ್ಷಯ ತೃತೀಯ ಪ್ರಯುಕ್ತ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಮಂಗಳವಾರ ಚಿನ್ನ, ಬೆಳ್ಳಿ ಹಾಗೂ ವಜ್ರಾದ ಆಭರಣಗಳ ಖರೀದಿ ಭರಾಟೆ ಜೋರಾಗಿತ್ತು.

ಅಕ್ಷಯ ತೃತೀಯ ದಿನದಂದು ಬಂಗಾರ ಕೊಂಡರೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಜನ ಚಿನ್ನಾಭರಣ ಮಳಿಗೆಗಳಿಗೆ ಮುಗಿಬಿದ್ದು ಆಭರಣ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಚಿನ್ನದ ಉಂಗುರ, ಸರ, ನಕ್ಲೆಸ್‌, ಬಂಗಾರದ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆ ಇತ್ತು.

ನಗರದ ಸತ್ಯನಾರಾಯಣ, ಸುಶೀಲ್, ರಾಜೇಶ್, ಅನಂತ್, ರಿತಿ, ಬಾಲಕೃಷ್ಣ ಚಿನ್ನಾಭರಣ ಮಳಿಗೆಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಚಿನ್ನಾಭರಣ ಮಳಿಗೆಗಳ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

‘ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಶಾಶ್ವತವಾಗಿ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಜೋರಾಗಿದೆ. ಗ್ರಾಹಕರು ಅವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಆಭರಣ ಖರೀದಿಸುತ್ತಿದ್ದಾರೆ’ ಎಂದು ಚಿನ್ನಾಭರಣ ಮಳಿಗೆಗಳ ಮಾಲೀಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ 2 ವರ್ಷಗಳಲ್ಲಿ ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ವಹಿವಾಟು ಕುಸಿದಿತ್ತು. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಗ್ರಾಹಕರ ಸ್ಪಂದನೆ ಉತ್ತಮವಾಗಿದೆ. ಗ್ರಾಹಕರು ಮೂರ್ನಾಲ್ಕು ದಿನಗಳ ಹಿಂದೆಯೇ ಮುಂಗಡ ಬುಕ್ಕಿಂಗ್‌ ಮಾಡಿ ಆಭರಣ ಖರೀದಿಸಿದ್ದಾರೆ’ ಎಂದು ಮಾಲೀಕರು ಹೇಳಿದರು.

ಮಂಗಳಕರ ದಿನ: ‘‌ಹಿಂದೂ ಧರ್ಮದ ಪ್ರಕಾರ, ಅಕ್ಷಯ ತೃತೀಯ ದಿನವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ ಖರೀದಿಸುವುದು ಒಳ್ಳೆಯದು ಎಂಬ ನಂಬಿಕೆಯಿದೆ. ಈ ದಿನದಂದು ಖರೀದಿಸಿದ ಚಿನ್ನದಿಂದ ಮನೆಗಳಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಚಿನ್ನ ಖರೀದಿಗೆ ಬಂದಿದ್ದೇವೆ. ಬೆಲೆ ಕೇಳಿದರೆ ತುಂಬಾ ಕಷ್ಟವೇನಿಸುತ್ತಿದೆ. ಚಿನ್ನದ ಬದಲಿಗೆ ಬೆಳ್ಳಿ ಖರೀದಿ ಮಾಡಿದ್ದೇವೆ ಎಂದು ಗ್ರಾಹಕಿ ರೂಪಾ ಹೇಳಿದರು.

ಸುಶೀಲ್, ಸತ್ಯನಾರಾಯಣ ಹಾಗೂ ಅನಂತ್‌ ಚಿನ್ನಾಭರಣ ಮಳಿಗೆಗಳಿರುವ ದೊಡ್ಡಪೇಟೆ ರಸ್ತೆಗಳಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಮಳಿಗೆಗಳ ಬಳಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT