ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ | ರಾಗಿ ಬೆಲೆ ಹೆಚ್ಚಿಸಿದರೂ; ಮಾರಾಟಕ್ಕೆ ಮುಂದಾಗದ ರೈತರು

ಕಾಂತರಾಜ್
Published 1 ಜನವರಿ 2024, 7:38 IST
Last Updated 1 ಜನವರಿ 2024, 7:38 IST
ಅಕ್ಷರ ಗಾತ್ರ

ಬಂಗಾರಪೇಟೆ: ಸರ್ಕಾರ ಈ ವರ್ಷ ರಾಗಿ ಖರೀದಿ ಬೆಂಬಲ ಬೆಲೆಯನ್ನು ಏರಿಸಿದೆ. ಆದರೆ ಮಳೆ ಕೊರತೆಯಿಂದಾಗಿ ರಾಗಿ ಬೆಳೆ ಹಾಗೂ ಇಳುವರಿ ಕ್ಷೀಣಿಸಿದ್ದು, ಬೆಳೆದಿರುವ ಅಲ್ಪ ಸ್ವಲ್ಪ ಬೆಳೆಯನ್ನು ಮನೆಗೆ ಇಟ್ಟುಕೊಳ್ಳುವುದೋ ಅಥವಾ ಮಾರುವುದೋ ಎನ್ನುವ ದ್ವಂದ್ವಕ್ಕೆ ಬೆಳೆಗಾರ ಸಿಲುಕಿದ್ದೇನೆ.

ಸರ್ಕಾರ ರಾಗಿ ಖರೀದಿ ಕೇಂದ್ರಗಳನ್ನು ಡಿಸೆಂಬರ್ 1 ರಿಂದ ತೆರೆದಿದ್ದು, ರೈತರ ನೋಂದಣಿಗೆ ಡಿ.31 ಕೊನೆ ದಿನವಾಗಿತ್ತು. ಆರಂಭದ 20 ದಿನದಲ್ಲಿ ಕೇವಲ 120 ರೈತರು ಮಾತ್ರ ತಮ್ಮ ಹೆಸರನ್ನು ನೋಂದಾಯಿಸಿದ್ದರು. ತಿಂಗಳ ಕೊನೆಗೆ ಆ ಸಂಖ್ಯೆ ಸುಮಾರು 800ಕ್ಕೆ ಏರಿದೆಯಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30ರಷ್ಟು ಕೂಡ ಇಲ್ಲ.

ಕಳೆದ ವರ್ಷ ಸುಮಾರು 3 ಸಾವಿರ ರೈತರು ರಾಗಿ ಮಾರಾಟ ಮಾಡಲು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದರು. ಆದರೆ ಈ ಬಾರಿ ಸುಮಾರು 800 ರೈತರು ಮಾತ್ರ ಹೆಸರು ನೋಂದಣಿ ಮಾಡಿಸಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ರಾಗಿ ಬೆಳೆ ಸಮೃದ್ಧಿಯಾಗಿ ಬೆಳೆದಿತ್ತು. ಆ ಬೆಳೆಯನ್ನು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡಿ ರೈತರು ಸ್ವಲ್ಪ ಮಟ್ಟಿಗೆ ಹಣ ಮಾಡಿಕೊಂಡಿದ್ದರು. ಆದರೆ ಈ ವರ್ಷ ಮಳೆಯಾಗದೆ ರಾಗಿ ಸೇರಿದಂತೆ ಬಹುತೇಕ ಬೆಳೆಗಳು ನೆಲ ಕಚ್ಚಿವೆ.

ಪ್ರತಿ ವರ್ಷ ಸರ್ಕಾರ ರಾಗಿ ಖರೀದಿ ಬೆಲೆಯನ್ನು ಹೆಚ್ಚಿಸುತ್ತಾ ಬಂದಿದೆ. ಅದರಂತೆ ಈ ವರ್ಷ ಕೂಡ ಕ್ವಿಂಟಲ್ ರಾಗಿ ಖರೀದಿಗೆ ₹ 3,846 ನಿಗದಿ ಮಾಡಿದೆ. ಕಳೆದ ವರ್ಷ ಕ್ವಿಂಟಲ್ ₹ 3,570ಕ್ಕೆ ನಿಗದಿಯಾಗಿತ್ತು. ಈ ಬಾರಿ ಕ್ವಿಂಟಲ್‌ಗೆ ₹276 ಹೆಚ್ಚಿಸಲಾಗಿದೆ. ಬಿತ್ತನೆ ಸಮಯದಲ್ಲೆ ಮಳೆ ಕೈಕೊಟ್ಟ ಕಾರಣ ಈ ಬಾರಿ ಬೆಳೆಯಾಗಿಲ್ಲ. ಅಲ್ಪಸ್ಪಲ್ಪ ಬೆಳೆ ಆಗಿದ್ದರೂ, ಅದನ್ನು ಕಟಾವು ಮಾಡಲು ಕೂಲಿ ಕಾರ್ಮಿಕರು ಇಲ್ಲದೆ ಕೆಲವೆಡೆ ಹೊಲದಲ್ಲೆ ಬಾಡುತ್ತಿದೆ.

ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕ್ವಿಂಟಲ್‌ಗೆ ₹ 2,500ರಿಂದ 3 ಸಾವಿರದಷ್ಟಿದೆ. ಆದರೆ ಸರ್ಕಾರ ₹3,846ಕ್ಕೆ ಖರೀದಿಸುವುದರಿಂದ ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡದೆ ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ ಬೆಳೆ ಇಲ್ಲದ ಕಾರಣ ರೈತರು ಚಿಂತೆಗೆ ಸಿಲುಕಿದ್ದಾರೆ. ಇರುವ ರಾಗಿಯನ್ನು ಮಾರಿದರೆ ವರ್ಷ ಪೂರ್ತಿ ತಿನ್ನುವುದಾದರೂ ಏನು ಎಂದು ಮಾರಾಟ ಮಾಡಲು ಹಿಂದೆ ಸರಿದಿದ್ದಾರೆ. ಹಾಗಾಗಿ ರಾಗಿ ಖರೀದಿ ಕೇಂದ್ರಗಳು ಭಣಗುಡುತ್ತಿವೆ.

ಮಳೆ ಇಲ್ಲದ ಕಾರಣ ರಾಗಿ ಬೆಳೆ ಕೈಕೊಟ್ಟಿದೆ. ಬೆಳೆದಿರುವ ಅಲ್ಪಸ್ವಲ್ಪ ರಾಗಿಯನ್ನು ಮಾರಾಟ ಮಾಡಿದರೆ ವರ್ಷ ಪೂರ್ತಿ ತಿನ್ನಲು ಏನು ಮಾಡುವುದು. ಕಳೆದ ಬಾರಿ 9 ಕ್ವಿಂಟಲ್ ಮಾರಿದ್ದೆ. ಈ ವರ್ಷ ಇನ್ನೂ ಹೆಸರು ನೋಂದಾಯಿಸಿಲ್ಲ
ವೆಂಕಟೇಶ್ ರೈತ ಬತ್ತಲಹಳ್ಳಿ
ಬಂಗಾರಪೇಟೆ ತಾಲ್ಲೂಕಿನಲ್ಲಿ ರಾಗಿ ಬೆಳೆ ಹಾಗೂ ಇಳುವರಿ ಕಡಿಮೆಯಾಗಿರುವ ಕಾರಣ ನಿರೀಕ್ಷೆಗಿಂತ ಕಡಿಮೆ ರೈತರು ಹೆಸರು ನೋಂದಣಿ ಮಾಡಿಸಿರಬಹುದು. ಡಿ.31 ಕೊನೆ ದಿನವಾಗಿದ್ದು ದಿನಾಂಕ ವಿಸ್ತರಿಸುವ ಸಾಧ್ಯತೆಯಿದೆ
ಮನೋಗರನ್ ಪಿಡಿಎಸ್ ಗೋದಾಮು ವ್ಯವಸ್ಥಾಪಕ  ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT