ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: 55 ಕಿ.ಮೀ ಉದ್ದದ ಸೌರ ಬೇಲಿ ನಿರ್ಮಾಣಕ್ಕೆ ನಿರ್ಧಾರ

Last Updated 5 ಆಗಸ್ಟ್ 2021, 2:23 IST
ಅಕ್ಷರ ಗಾತ್ರ

ಕೆಜಿಎಫ್: ಒಂದು ದಶಕದಿಂದ ತಮಿಳುನಾಡಿನ ಅರಣ್ಯದ ಅಂಚಿನಿಂದ ಕಾಡಾನೆಗಳು ತಾಲ್ಲೂಕಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದು, ರೈತರಿಗೆ ದುಸ್ವಪ್ನವಾಗಿ ಪರಿಣಮಿಸಿವೆ.

ಪಲಮನೇರು ಕಾಡು, ಕೌಂಡಿನ್ಯ ಅಭಯಾರಣ್ಯ, ಕೃಷ್ಣಗಿರಿ ಕಾಡಿನ ಸುತ್ತಮುತ್ತ ವಿಹರಿಸುತ್ತಿದ್ದ ಆನೆಗಳು ಮೊದಲು ಕಾಮಸಮುದ್ರ ಬಳಿಯ ಕಾಡಿಗೆ ಬರಲು ಶುರು ಮಾಡಿದಾಗ ಗ್ರಾಮಸ್ಥರಲ್ಲಿ ಕುತೂಹಲ ಮೂಡಿತ್ತು. ಆನೆಗಳನ್ನು ನೋಡಲು ಜನರುಹಿಂಡು ಹಿಂಡಾಗಿ ಹೋಗಲು ಶುರು ಮಾಡಿದ್ದರು. ಬರುಬರುತ್ತಾ ಅವು ಕಾಮಸಮುದ್ರ ಪ್ರದೇಶದ ವೃಷಭಾವತಿ ಕೆರೆಯ ಅಂಚಿನಲ್ಲಿರುವ ಹಸಿರು ವಲಯವನ್ನು ತನ್ನ ಕಾಯಂ ಸ್ಥಳವನ್ನಾಗಿ ಮಾಡಿಕೊಂಡಾಗ ಅವುಗಳ ಬಗೆಗಿನ ಕುತೂಹಲ ಮಾಯವಾಗಿ ಭೀತಿಯ ವಾತಾವರಣ ನಿರ್ಮಾಣವಾಯಿತು.

ತಮಿಳುನಾಡು ಕಾಡಿನಿಂದ ಕೀರುಮಂದೆ, ಯರಗೋಳ್, ಭೀಮಗಾನಹಳ್ಳಿ, ಗುಲ್ಲಹಳ್ಳಿ, ವೃಷಭಾವತಿ ಕಣಿವೆ ಸುತ್ತಮುತ್ತ ಇರುತ್ತಿದ್ದ ಆನೆಗಳು 2013ರ ನಂತರ ತಾಲ್ಲೂಕಿನ ಗ್ರಾಮಗಳಿಗೂ ಭೇಟಿ ನೀಡಲು ಶುರು ಮಾಡಿದವು. ನಗರ ಪ್ರದೇಶದ ಮಾರಿಕುಪ್ಪ ಬಡಾವಣೆಗೆ ಸಹ ಬಂದಿದ್ದವು.

ಆದರೆ, ಇತ್ತೀಚಿನ ದಿನಗಳಲ್ಲಿ ಆನೆಗಳು ಇಡೀ ತಾಲ್ಲೂಕಿನಲ್ಲಿ ಸಂಚಾರ ಶುರು ಮಾಡಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ರೈತರು ಕಷ್ಟಪಟ್ಟು ಬೆಳೆದ ಫಸಲನ್ನು ಹಾಳು ಮಾಡುವುದರ ಜೊತೆಗೆ ರಾತ್ರಿಹೊತ್ತು ರೈತರು ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸುವ ಮಟ್ಟಿಗೆ ಪ್ರಭಾವ ಬೀರಿವೆ. ಅವುಗಳ ಕಾಟದಿಂದ ವ್ಯವಸಾಯ ಮಾಡುವುದೇ ಬೇಡ ಎನ್ನುವ ಪರಿಸ್ಥಿತಿಗೆ ರೈತರು ತಲುಪಿದ್ದಾರೆ.

‘ಕೃಷ್ಣಗಿರಿ ಕಾಡಿನಿಂದ ಪಲಮನೇರು ಕಾಡಿನವರೆವಿಗೂ ಆನೆ ಪಥ ಇದೆ. ಹಿಂದಿನಿಂದಲೂ ಆನೆಗಳು ಈ ಮಾರ್ಗವಾಗಿ ಸಂಚರಿಸುತ್ತಿದ್ದವು. ಈ ಪಥದಲ್ಲಿ ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಅವುಗಳು ಬರುವುದನ್ನು ಕಡಿಮೆ ಮಾಡಿದ್ದವು. ಒಮ್ಮೆ ಪಥದಲ್ಲಿ ಬಂದರೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಪಥವನ್ನು ನೆನಪಿನಲ್ಲಿಟ್ಟುಕೊಳ್ಳುತ್ತವೆ. ಜೊತೆಯಲ್ಲಿ ಬರುವ ಮರಿಯಾನೆಗಳಿಗೆ ಪಥದ ಪರಿಚಯ ಮಾಡಿಕೊಡುತ್ತವೆ’ ಎಂದು ಅರಣ್ಯ ಅಧಿಕಾರಿಗಳು ವಿಶ್ಲೇಷಿಸುತ್ತಾರೆ.

ತಾಲ್ಲೂಕಿನ ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿ ಅತ್ಯಂತ ಹೆಚ್ಚಿಗೆ ಆನೆ ದಾಳಿಯಿಂದ ನಷ್ಟ ಅನುಭವಿಸುತ್ತಿದೆ. ಉಳಿದಂತೆ ಮಾರಿಕುಪ್ಪ, ಕ್ಯಾಸಂಬಳ್ಳಿ ಮಾರ್ಗಕ್ಕೆ ಆಗಾಗ್ಗೆ ಹೋಗುತ್ತಿದ್ದರೂ ನಷ್ಟದ ಪ್ರಮಾಣ ಕಡಿಮೆಯಾಗಿದೆ.

ಕಾಮಸಮುದ್ರ ಮಾರ್ಗವಾಗಿ ಬರುವ ಆನೆಗಳನ್ನು ತಡೆಗಟ್ಟಲು ಸೋಲಾರ್ ಬೇಲಿ ಅಳವಡಿಕೆಗೆ ಶುರು ಮಾಡಲಾಗಿದೆ. 55 ಕಿ.ಮೀ ಉದ್ದದ ಪೈಕಿ ಇದುವರೆವಿಗೂ ಕೇವಲ 5 ಕಿ.ಮೀ ಮಾತ್ರ ಬೇಲಿ ಅಳವಡಿಸಲಾಗಿದೆ.

‘ದಾಳಿಯಿಂದ ರೈತರು ಅನುಭವಿಸುವ ನಷ್ಟವನ್ನು ಸಮರ್ಪಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಮೀನಿನಲ್ಲಿ ಒಂದು ಭಾಗದಲ್ಲಿ ಆನೆಗಳು ಸಂಚರಿಸಿ ಹಾನಿ ಮಾಡಿದ್ದರೆ, ಆ ಭಾಗದಲ್ಲಿ ಹಾನಿಯಾಗಿರುವ ನಷ್ಟವನ್ನು ಮಾತ್ರ ತುಂಬಿಕೊಡಲಾಗುತ್ತಿದೆ. ಒಮ್ಮೆ ಆನೆ ಜಮೀನಿಗೆ ಕಾಲಿಟ್ಟರೆ ಬೇಲಿ ಸಮೇತ ಅನೇಕ ರೀತಿಯ ನಷ್ಟ ಉಂಟಾಗುತ್ತದೆ. ಅದನ್ನು ಲೆಕ್ಕ ಹಾಕುವುದಿಲ್ಲ’ ಎಂದು ತಿರುಮಲಾಹಳ್ಳಿಯ ಗೋಪಾಲಕೃಷ್ಣ ಹೇಳುತ್ತಾರೆ.

‘ಕೆಜಿಎಫ್ ತಾಲ್ಲೂಕಿಗೆ ಆನೆಗಳು ಬರುವುದನ್ನು ತಡೆಗಟ್ಟುವ ಸಂಬಂಧ ಯೋಜನೆ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಿಕೊಡಲಾಗಿದೆ. ಪ್ರಾಯೋಗಿಕವಾಗಿ ಈ ಆರ್ಥಿಕ ವರ್ಷದೊಳಗೆ ಸೋಲಾರ್ ಬೇಲಿ ಅಳವಡಿಸಲು ಕಾಮಗಾರಿ ಶುರು ಮಾಡುತ್ತೇವೆ. ರೈತರು ಸೋಲಾರ್ ಬೇಲಿ ಹಾಕಿಕೊಂಡರೆ ಅವರಿಗೆ ಸಬ್ಸಿಡಿ ನೀಡುತ್ತೇವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT