ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಮಾರಿ: ನಿಯಂತ್ರಣ ಕ್ರಮಕ್ಕೆ ಸೂಚನೆ

ಧಾರಾಕಾರ ಮಳೆಗೆ ಶಿಲೀಂಧ್ರ ರೋಗ–ಕೀಟ ಬಾಧೆ ಹೆಚ್ಚಿದೆ
Last Updated 12 ಅಕ್ಟೋಬರ್ 2021, 16:00 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಟೊಮೆಟೊ ಬೆಳೆಯಲ್ಲಿ ಕೊನೆಯ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ರೋಗ ತಡೆಗೆ ರೈತರು ನಿಯಂತ್ರಣ ಕ್ರಮ ಅನುಸರಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸತತ ತುಂತುರು ಮಳೆ, ಹೆಚ್ಚು ಆರ್ದ್ರತೆಯುಳ್ಳ ಹವಾಗುಣ ಮತ್ತು ಮೋಡ ಕವಿದ ವಾತಾವರಣದಿಂದ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ರೋಗ ಹಾಗೂ ಕೀಟ ಬಾಧೆ ಹೆಚ್ಚಾಗಿದೆ. ಮಳೆ ಮುಂದುವರಿದರೆ ಆಲೂಗಡ್ಡೆ ಮತ್ತು ಟೊಮೆಟೊ ಬೆಳೆಯಲ್ಲಿ ಶಿಲೀಂಧ್ರದಿಂದ ಬರುವ ಅಂಗಮಾರಿ ರೋಗ ಉಲ್ಬಣವಾಗುವ ಸಾಧ್ಯತೆಯಿದೆ. ಕೊನೆಯ ಅಂಗಮಾರಿ ರೋಗವು ಅಪಾಯಕಾರಿ ರೋಗ ಎಂದು ಹೇಳಿದ್ದಾರೆ.

ರೈತರು ಅಂಗಮಾರಿ ರೋಗ ನಿಯಂತ್ರಣಕ್ಕೆ ಹೆಚ್ಚು ಕಾಳಜಿ ವಹಿಸಬೇಕು. ಮಳೆಯಿಂದ ಬಿಡುವು ಸಿಕ್ಕಾಗ 2 ಗ್ರಾಂ ಸೈಮಾಕ್ಸಾನಿಲ್, ಮ್ಯಾಂಕೋಜೆಬ್ ಅಥವಾ 3 ಗ್ರಾಂ ಫೆನಾಮಿಡಾನ್, ಅಜೋಕ್ಸಿಸ್ಟ್ರಾಬಿನ್, ಡೈಫಿನಾ ಕೊನಜೋಲ್, ಮೆಟಿರಾಮ್, 3 ಗ್ರಾಂ ಪೈರಾಕ್ಲೋಸ್ಟ್ರಾಬಿನ್ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಟೊಮೆಟೊ ಬೆಳೆಗೆ ಸಿಂಪಡಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ದಪ್ಪ ಮೆಣಸಿನಕಾಯಿ ಬೆಳೆಯಲ್ಲಿ ಚಿಬ್ಬು ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಹೂವಿನ ಹಂತದಲ್ಲಿ ಪ್ರಥಮ ಸಿಂಪಡಣೆ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಎರಡನೇ ಸಿಂಪಡಣೆ, ನಂತರದ 15 ದಿನದಲ್ಲಿ 3ನೇ ಸಿಂಪರಣೆಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ನೀರಿನಲ್ಲಿ ಕರಗುವ ಗಂಧಕ 2 ಗ್ರಾಂ ಅಥವಾ ಕ್ರಾಪ್ಟನ್ ಅಥವಾ ಜೈರಾಮ್ ಶಿಲೀಂದ್ರ ನಾಶಕಗಳನ್ನು ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಈಗಾಗಲೇ ಕಾಯಿಗಳು ಚಿಬ್ಬು ರೋಗದಿಂದ ಬಾಧಿತವಾಗಿದ್ದರೆ ಟೆಬುಕೊ ನಾಜೋಲ್, ಟ್ರೈಫ್ಲೋಕ್ಸಟ್ರೋಬಿನ್ ಸಂಯುಕ್ತ ಶಿಲೀಂದ್ರ ನಾಶಕಗಳನ್ನು ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸೂಚಿಸಿದ್ದಾರೆ.

ಸೀಬೆಯಲ್ಲಿ ಹಣ್ಣು ಕೊಳೆ ರೋಗದ ನಿಯಂತ್ರಣಕ್ಕೆ ಹೂ ಬಿಡುವ ಸಮಯದಲ್ಲಿ 2 ಗ್ರಾಂ ಕ್ಲೋರೋಥೆಲೋನಿಲ್ ಅಥವಾ 2 ಗ್ರಾಂ ಮ್ಯಾಂಕೋಜೆಬ್ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಣೆ ಮಾಡಬೇಕು ಎಂದು ಹೇಳಿದ್ದಾರೆ.

ಕುಂಬಳ ಜಾತಿ ತರಕಾರಿಗಳಲ್ಲಿ ಹಣ್ಣಿನ ನೊಣಗಳ ನಿಯಂತ್ರಣಕ್ಕೆ 2 ಮಿ.ಲೀ ಮೆಲಾಥಿಯನ್ ಅನ್ನು 10 ಗ್ರಾಂ ಸಕ್ಕರೆ ಅಥವಾ ಬೆಲ್ಲದೊಂದಿಗೆ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕ್ಯೂಲ್ಯೂರ್ ಮೋಹಕ ಬಲೆಗಳನ್ನು ಎಕರೆಗೆ 4-6ರಂತೆ ಕಟ್ಟಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ನೀರು ಹೊರ ಹೊಗಲಿ: ಜಮೀನಿನಲ್ಲಿ ನಿಂತಿರುವ ಮಳೆ ನೀರನ್ನು ಆದಷ್ಟು ಬೇಗನೆ ಹೊರ ಹೋಗುವಂತೆ ಮಾಡಬೇಕು. ಯಾವುದೇ ಗೊಬ್ಬರವನ್ನು ನೀರಾವರಿ ಅಥವಾ ರಸಾವರಿ ಮೂಲಕ ಕೊಡಬಾರದು. ಬೆಳೆಯ ಮೊದಲ ಬೆಳವಣಿಗೆ ಹಂತದಲ್ಲಿ 19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂನಂತೆ ಬೆರೆಸಿ ಸಿಂಪಡಿಸಿ. ಹೂವು ಬಿಡುವ ಹಂತದ ಬೆಳೆಯಾದರೆ ಕ್ಯಾಲ್ಸಿಯಂ ಮತ್ತು ಬೋರಾನ್ ಪೋಷಕಾಂಶ ಸಿಂಪಡಣೆ ಮಾಡಬೇಕು ಎಂದು ಹೇಳಿದ್ದಾರೆ.

ಬೆಳೆಯು ಕಟಾವಿನ ಹಂತದಲ್ಲಿದ್ದರೆ ಮ್ಯೂರೆಟ್ ಆಫ್ ಪೊಟ್ಯಾಷ್ (ಎಮ್ಒಪಿ) ಸಿಂಪಡಿಸಬೇಕು. ಪ್ಲಾಸ್ಟಿಕ್ ಹೊದಿಕೆ ಬಳಸದಿರುವ ಬೆಳೆಗಳಲ್ಲಿ ಮಣ್ಣನ್ನು ಏರಿಸಬೇಕು. ಟೊಮೆಟೊ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿ ಕಟ್ಟುವಾಗ ಗಿಡಗಳ ಮಧ್ಯೆ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇರಬೇಕು. ತರಕಾರಿ ಬೆಳೆಗಳಲ್ಲಿ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಹೊದಿಕೆಗೆ ತಾಕುವ ಹಳೆಯ ಎಲೆಗಳನ್ನು ಗಿಡಕ್ಕೆ ಹಾನಿಯಾಗದಂತೆ ತೆಗೆಯುವುದರಿಂದ ರೋಗದ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT