ಶನಿವಾರ, ಸೆಪ್ಟೆಂಬರ್ 18, 2021
30 °C
ಟೊಮೆಟೊ ವಹಿವಾಟು ಹೆಚ್ಚಲಿದೆ: ಅಧ್ಯಕ್ಷ ನಾಗರಾಜ್‌ ಹೇಳಿಕೆ

ಎಪಿಎಂಸಿ: ಸೂಕ್ತ ವ್ಯವಸ್ಥೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಟೊಮೆಟೊ ಸುಗ್ಗಿ ಕಾಲಕ್ಕೆ ಎಪಿಎಂಸಿಯಲ್ಲಿ ಹೆಚ್ಚಿನ ವಹಿವಾಟು ನಡೆಯಲಿದ್ದು, ಮುಂದಾಲೋಚನೆಯಿಂದ ಮೊದಲೇ ಸೂಕ್ತ ವ್ಯವಸ್ಥೆ ಮಾಡಿ’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಬುಧವಾರ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತುರ್ತು ಸಭೆಯಲ್ಲಿ ಮಾತನಾಡಿ, ‘ಟೊಮೆಟೊ ಸುಗ್ಗಿ ಕಾಲದ 5 ತಿಂಗಳು ಸಾಕಷ್ಟು ಕೆಲಸ ಕಾರ್ಯಗಳಿರುತ್ತವೆ. ಆದ ಕಾರಣ 5 ತಿಂಗಳ ಅವಧಿಗೆ ಹೆಚ್ಚುವರಿ ಸಿಬ್ಬಂದಿಗಾಗಿ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಿ. ನಂತರ ಇಲಾಖೆ ನಿಯಮಾನುಸಾರ ಕ್ರಮ ವಹಿಸಿ’ ಎಂದು ಎಪಿಎಂಸಿ ಕಾರ್ಯದರ್ಶಿಗೆ ತಿಳಿಸಿದರು.

‘ಟೊಮೆಟೊ ಸುಗ್ಗಿ ಅವಧಿಗೆ ಮಾರುಕಟ್ಟೆ ಆವರಣದಲ್ಲಿ ವಾಹನ ಸಂಚಾರ ನಿರ್ವಹಣೆ ಹಾಗೂ ಭದ್ರತೆಗಾಗಿ ಗೃಹರಕ್ಷಕ ದಳ ಸಿಬ್ಬಂದಿ ಸೇವೆ ಪಡೆಯುವ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಸಂಬಂಧ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಗೃಹರಕ್ಷಕ, ಪೌರ ರಕ್ಷಣೆ ಮತ್ತು ಅಗ್ನಿಶಾಮಕ ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೀರಾ?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಪಿಎಂಸಿ ಕಾರ್ಯದರ್ಶಿ ಟಿ.ಎಸ್.ರವಿಕುಮಾರ್, ‘ಗೃಹರಕ್ಷಕ ದಳ ಸಿಬ್ಬಂದಿಯನ್ನು ತೆಗೆದುಕೊಳ್ಳುವ ಸಂಬಂಧ ಚರ್ಚಿಸಲಾಗಿದೆ. ಗೃಹರಕ್ಷಕರಿಗೆ ಸಮಿತಿಯಿಂದಲೇ ದಿನಕ್ಕೆ ₹ 380 ವೇತನ ಹಾಗೂ ₹ 80 ಭತ್ಯೆ ನೀಡಬೇಕು’ ಎಂದು ಉತ್ತರಿಸಿದರು.

‘ಗೃಹರಕ್ಷಕರಿಗೆ ದೈಹಿಕವಾಗಿ ಯಾವುದೇ ತೊಂದರೆ ಆಗಬಾರದು. ಕರ್ತವ್ಯ ನಿರ್ವಹಣೆ ವೇಳೆ ಯಾವುದೇ ಅವಘಡ ಸಂಭವಿಸಿದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಸಮಿತಿಯೇ ಹೊರಬೇಕು ಮತ್ತು ಪರಿಹಾರಧನ ನೀಡಬೇಕು’ ಎಂದು ವಿವರಿಸಿದರು.

ಪರ್ಯಾಯ ವ್ಯವಸ್ಥೆ: ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಇಷ್ಟೆಲ್ಲಾ ಷರತ್ತುಗಳಿದ್ದರೆ ಗೃಹ ರಕ್ಷಕರ ಸೇವೆ ಪಡೆಯದಿರುವುದೇ ಸೂಕ್ತ ಎನಿಸುತ್ತದೆ’ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಮಿತಿಯ ಇತರ ನಿರ್ದೇಶಕರು, ‘ಗೃಹರಕ್ಷಕ ದಳ ಸಿಬ್ಬಂದಿ ಸೇವೆಯ ಬದಲಿಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ಮಾಡೋಣ’ ಎಂದು ಸಲಹೆ ನೀಡಿದರು.

‘ಮಾರುಕಟ್ಟೆ ಆವರಣದಲ್ಲಿ ವಿದ್ಯುತ್‌ ತಂತಿ ತುಂಬಾ ಕೆಳ ಮಟ್ಟದಲ್ಲಿ ನೇತಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಭೂಮಿಯ ಒಳ ಭಾಗದಲ್ಲಿ ವಿದ್ಯುತ್‌ ಕೇಬಲ್ ಹಾಕುವ ಸಂಬಂಧ ಬೆಸ್ಕಾಂಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಬೆಸ್ಕಾಂ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಭದ್ರತಾ ಸಿಬ್ಬಂದಿ ನೇಮಕ: 20 ಮಂದಿ ಭದ್ರತಾ ಸಿಬ್ಬಂದಿ ನೇಮಕಕ್ಕೆ ಹಾಗೂ ಸ್ವಚ್ಛತಾ ಕಾರ್ಯ ನಿರ್ವಹಣೆಗೆ ಟೆಂಡರ್ ಕರೆಯಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜತೆಗೆ 20 ಮಂದಿಯ ಪರವಾನಗಿ ನವೀಕರಣ, ಎಪಿಎಂಸಿ ಆವರಣದಲ್ಲಿನ 4 ಶೆಡ್‌ಗಳನ್ನು ಬಾಡಿಗೆಗೆ ನೀಡಲು ಸಮ್ಮತಿಸಲಾಯಿತು.

ಸಮಿತಿ ಉಪಾಧ್ಯಕ್ಷರಾದ ಕೆ.ರವಿಶಂಕರ್, ನಿರ್ದೇಶಕರಾದ ಕೆ.ಮಂಜುನಾಥ್, ವೆಂಕಟೇಶಪ್ಪ, ಅಪ್ಪಯ್ಯಪ್ಪ, ಮಂಜುನಾಥ್, ನಾರಾಯಣಸ್ವಾಮಿ, ನಂದೀಶ್‌ಕುಮಾರ್, ನಟರಾಜ್, ರೇಖಾ, ಭಾಗ್ಯಮ್ಮ, ಸರ್ಕಾರಿ ವರ್ತಕರ ಸಂಘದ ಸದಸ್ಯ ದೇವರಾಜು, ಸಹಾಯಕ ಕಾರ್ಯದರ್ಶಿ ಎ.ವಿಶ್ವನಾಥ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು