ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಖರೀದಿ ದರ ಹೆಚ್ಚಳಕ್ಕೆ ಮನವಿ

Last Updated 2 ಡಿಸೆಂಬರ್ 2021, 13:20 IST
ಅಕ್ಷರ ಗಾತ್ರ

ಕೋಲಾರ: ಹಾಲು ಖರೀದಿ ದರ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇಲ್ಲಿ ಗುರುವಾರ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಅವರಿಗೆ ಮನವಿ ಸಲ್ಲಿಸಿದರು.

‘ಹಾಲಿನ ಖರೀದಿ ದರವನ್ನು ಕನಿಷ್ಠ ₹ 30ಕ್ಕೆ ಹೆಚ್ಚಿಸಬೇಕು. ಸಂಘಗಳಿಗೆ ನೀಡುವ ನಿರ್ವಹಣೆ ವೆಚ್ಚವನ್ನು ₹ 1 ಹೆಚ್ಚಿಸಬೇಕು. ಸಂಘಗಳ ಸಿಬ್ಬಂದಿ ವರ್ಗಕ್ಕೆ ವಿಮೆ ಮುಂದುವರಿಸಬೇಕು’ ಎಂದು ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಒತ್ತಾಯಿಸಿದರು.

‘ಕೋಚಿಮುಲ್ ವಿಮೆ ಅವಧಿ ಮುಗಿದಿದ್ದು, ಮೃತ ಸಿಬ್ಬಂದಿಗೆ ದತ್ತಿ ವತಿಯಿಂದ ₹ 2 ಲಕ್ಷ ಸಹಾಯಧನ ನೀಡಬೇಕು. ಹಾಲು ಉತ್ಪಾದಕರಿಗೂ ವಿಮೆ ಮುಂದುವರಿಸಬೇಕು. ಡೀಸೆಲ್ ಮತ್ತು ವಿದ್ಯುತ್ ದರ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ಬಿಎಂಸಿ ನಿರ್ವಹಣೆ ವೆಚ್ಚ ಸಾಮರ್ಥ್ಯಕ್ಕೆ ಅನುಗುಣವಾಗಿ 70 ಪೈಸೆ, 75 ಪೈಸೆ ಹಾಗೂ 80 ಪೈಸೆಗೆ ಏರಿಕೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಪ್ರಾಥಮಿಕ ಸಂಘಗಳಲ್ಲಿ ನಿವೃತ್ತಿಯಾದ ಸಿಬ್ಬಂದಿಗೆ ನೀಡುವ ನಿವೃತ್ತಿ ಧನವನ್ನು ಪಕ್ಕದ ಬೆಂಗಳೂರು ಹಾಲು ಒಕ್ಕೂಟದಂತೆಯೇ ಸಮನಾಂತರವಾಗಿ ಅವರ ಹುದ್ದೆ ಹಾಗೂ ಸೇವೆಗೆ ಅನುಣವಾಗಿ ಸಹಾಯಕರಿಗೆ ₹ 2 ಲಕ್ಷ, ಹಾಲು ಪರೀಕ್ಷಕರಿಗೆ ₹ 3 ಲಕ್ಷ ಹಾಗೂ ಕಾರ್ಯದರ್ಶಿಗಳಿಗೆ ₹ 5 ಲಕ್ಷ ನೀಡಬೇಕು’ ಎಂದು ಮನವಿ ಮಾಡಿದರು.

‘ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ನೀಡುವ ವೇತನ ಹಾಗೂ ಬಿಎಂಸಿ ಭತ್ಯೆಯನ್ನು ಒಕ್ಕೂಟದ ಸುತ್ತೋಲೆಯಂತೆ ನೇರವಾಗಿ ಸಿಬ್ಬಂದಿಯ ಬ್ಯಾಂಕ್‌ ಖಾತೆಗೆ ಪಾವತಿಸಬೇಕು. ಈ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದರೆ ಒಕ್ಕೂಟದ ಮುಂದೆ ಹಾಲು ಉತ್ಪಾದಕರೊಂದಿಗೆ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮನವಿಗೆ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕರು, ‘ಈ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶಗೌಡ, ಉಪಾಧ್ಯಕ್ಷ ಮುನಿರಾಜು, ಸದಸ್ಯರಾದ ಗೋವಿಂದರಾಜು, ಆರ್.ಶ್ರೀರಾಮರೆಡ್ಡಿ, ನರಸಿಂಹಮೂರ್ತಿ, ಬಚ್ಚರೆಡ್ಡಿ, ದೇವರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT