ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂ ಉಸ್ತುವಾರಿ ಸಚಿವರ ನೇಮಿಸಿ: ರೈತ ಸಂಘದ ಕಾರ್ಯಕರ್ತರಿಂದ ಮುಖ್ಯಮಂತ್ರಿಗೆ ಮನವಿ

ರೈತ ಸಂಘದ ಕಾರ್ಯಕರ್ತರಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ
Last Updated 6 ಫೆಬ್ರುವರಿ 2021, 5:07 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಗೆ ಕಾಯಂ ಉಸ್ತುವಾರಿ ಸಚಿವರನ್ನು ನೇಮಿಸಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿ ರೈತಸಂಘದಿಂದ ಶುಕ್ರವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲೆಯ ಪಕ್ಷೇತರ ಶಾಸಕರಾಗಿದ್ದ ಎಚ್.ನಾಗೇಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ನಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಲು ರಾಮನಗರ ಜಿಲ್ಲೆಯ ಸಿ.ಪಿ.ಯೋಗೇಶ್ವರ್ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿ ಸರ್ಕಾರ ಆದೇಶ ಮಾಡಿತ್ತು. ಆ ನಂತರ 15 ದಿನಗಳು ಕಳೆದರೂ ಈವರೆಗೂ ಕಾಯಂ ಉಸ್ತುವಾರಿ ಸಚಿವರಿಲ್ಲದೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಸಚಿವರಿಲ್ಲದಾಗಿದೆ ಎಂದರು.

ಜಿಲ್ಲೆಯಲ್ಲಿ ದಿನೇದಿನೇ ಜನಸಾಮಾನ್ಯರ ಸಮಸ್ಯೆಗಳು ದ್ವಿಗುಣವಾಗುತ್ತಿವೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ಹಾಗೂ ದಲ್ಲಾಳಿಗಳಿಲ್ಲದೆ ಇಲಾಖೆಯ ಒಳಗೆ ಕಾಲಿಡಲೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.

ರೈತರ ಒಡನಾಡಿಯಾಗಿರುವ ಮಾರುಕಟ್ಟೆಯ ಜಾಗದ ಸಮಸ್ಯೆ, ಇಲಾಖೆಗಳಲ್ಲಿನ ಅನುದಾನಗಳ ವಿತರಣೆ ತಾರತಮ್ಯ ಒಟ್ಟಾರೆಯಾಗಿ ಜಿಲ್ಲೆ ಸಮಸ್ಯೆಗಳ ಕೇಂದ್ರ ಬಿಂದುವಾಗಿದೆ. ರಾಜ್ಯದ ಬಜೆಟ್ ಮಂಡನೆಯಾಗುವ ಸಮಯದಲ್ಲಿ ಕಾಯಂ ಉಸ್ತುವಾರಿ ಸಚಿವರಿಲ್ಲದ ಕಾರಣ ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಲು ತೊಂದರೆಯಾಗುತ್ತದೆ ಎಂದು ಎಚ್ಚರಿಸಿದರು.

ತಾಲ್ಲೂಕು ರೈತಸಂಘದ ಅಧ್ಯಕ್ಷ ಈಕಂಬಳ್ಳಿ ಮಂಜು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ 6 ಶಾಸಕರು ಕಾಂಗ್ರೆಸ್ ಮತ್ತಿತರ ಪಕ್ಷಗಳಲ್ಲಿ ಗೆದ್ದಿರುವ ಕಾರಣ ಬಿಜೆಪಿಯ ಯಾವೊಬ್ಬ ಶಾಸಕರೂ ಇಲ್ಲದೆ ಪ್ರತಿ ಬಾರಿ ಹೊರ ಜಿಲ್ಲೆಯವರಿಗೆ ಉಸ್ತುವಾರಿ ಸಚಿವರ ಸ್ಥಾನ ಕೊಡುತ್ತಿದ್ದಾರೆ. ಸಚಿವರಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವು ಇಲ್ಲದ ಕಾರಣ ಹೆಚ್ಚಿನ ಅನುದಾನಗಳು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಬಯಲುಸೀಮೆಗೆ ಪ್ರತಿ ಬಜೆಟ್‍ನಲ್ಲೂ ಅನ್ಯಾಯವಾಗುತ್ತಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳಿರುವ ಕಾರಣ ಜಿಲ್ಲೆಯ ಬಗ್ಗೆ ಕಾಳಜಿ ಮತ್ತು ಜನರ ವಿಶ್ವಾಸಗಳಿಸುವ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸೀಮಿತವಾಗದ ಸೂಕ್ತ ಸಚಿವರನ್ನು ಜಿಲ್ಲೆಗೆ ನೇಮಕ ಮಾಡಿ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮುಖ್ಯಮಂತ್ರಿ ಆದೇಶ ಮಾಡಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ್ ಕೊಂಡಪ್ಪ, ತಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.

ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ರಾಜ್ಯ ಸಂಚಾಲಕರಾದ ಬಂಗವಾದಿ ನಾಗರಾಜಗೌಡ, ಅನಿಲ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ತಾಲೂಕು ಅಧ್ಯಕ್ಷ ಚಲಪತಿ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವಡಗೂರು ಮಂಜುನಾಥ್, ಸುಪ್ರೀಂಚಲ, ಸಾಗರ್, ಮುನಿರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT