ಕೋಲಾರ: ‘ಮುಂದಿನ ಪೀಳಿಗೆಯ ಆರೋಗ್ಯಕರವಾಗಿರಲು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಪೌಷ್ಟಿಕತೆ ಬಗ್ಗೆ ಅರಿವು ಮೂಡಿಸಬೇಕು. ಅಪೌಷ್ಟಿಕತೆ ನಿರ್ಮೂಲನೆ ಮಾಡಿ ಆರೋಗ್ಯಕರ ಸಮಾಜ ನಿರ್ಮಿಸಲು ಎಲ್ಲರೂ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಪಿರುಲಿನ್ ಪ್ರತಿಷ್ಠಾನ ಬಿಎಚ್‌ಇಎಲ್ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜಿಲ್ಲೆಯಲ್ಲಿ 2 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಮತ್ತು 100 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅಪೌಷ್ಟಿಕತೆ ದೂರ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದು ಸೂಚಿಸಿದರು.
‘ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರನ್ನು ಮೊದಲನೇ ಅಥವಾ ಎರಡನೇ ತ್ರೈಮಾಸಿಕದಲ್ಲಿ ಗುರುತಿಸಿ ನೋಂದಾಯಿಸಬೇಕು. ಇದರಿಂದ ಅವರಿಗೆ ಪೌಷ್ಟಿಕ ಆಹಾರ ಒದಗಿಸಲು ಅನುಕೂಲವಾಗುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಂತ ಮಗು ಜನಿಸಿದರೆ ಒಳ್ಳೆಯ ಸಮುದಾಯ ಕಟ್ಟಲು ಸಾಧ್ಯ. ಪೋಷಣ್ ಅಭಿಯಾನದ ಮೂಲಕ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಪೌಷ್ಟಿಕತೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.
‘ಸಂಭವನೀಯ ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬಿಎಚ್‌ಇಎಲ್ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಮಾಸ್ಕ್, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನರ್‌ಗಳನ್ನು ಸದ್ಬಳಕೆ ಮಾಡಿಕೊಂಡು ಅಂಗನವಾಡಿ ಹಂತದಲ್ಲೇ ಕೋವಿಡ್ 3ನೇ ಅಲೆ ನಿಯಂತ್ರಿಸಬೇಕು’ ಎಂದು ಹೇಳಿದರು.
ಮಿದುಳು ಬೆಳವಣಿಗೆ: ‘ಮಕ್ಕಳಿಗೆ ಗರ್ಭದಲ್ಲಿರುವ ಸಂದರ್ಭದಿಂದ ಸಾವಿರ ದಿನಗಳ ಕಾಲ ಮಿದುಳು ಬೆಳೆಯುತ್ತದೆ. ಈ ಸಂದರ್ಭದಲ್ಲಿ ತಾಯಿ ಮತ್ತು ಮಗುವಿಗೆ ಪೌಷ್ಟಿಕ ಆಹಾರ ನೀಡಬೇಕು. ಮಕ್ಕಳಿಗೆ ಹೆಚ್ಚಿನ ಪೌಷ್ಟಿಕ ಆಹಾರ ನೀಡಿದರೆ ಅಪೌಷ್ಟಿಕತೆ ನಿರ್ಮೂಲನೆಯಾಗುತ್ತದೆ’ ಎಂದು ಸ್ಪಿರುಲಿನಾ ಪ್ರತಿಷ್ಠಾನದ ಪ್ರಧಾನ ಸಲಹೆಗಾರ ಡಾ. ಸಿ.ಎಸ್.ಕೇದಾರ್ ಸಲಹೆ ನೀಡಿದರು.
‘ಕಡಿಮೆ ಪ್ರಮಾಣದಲ್ಲಿ ಆಹಾರ ತಿಂದರೂ ಹೆಚ್ಚಿನ ಶಕ್ತಿ ನೀಡುವಂತ ಆಹಾರ ಸೇವಿಸಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡುವ ಉದ್ದೇಶಕ್ಕೆ ಪ್ರತಿಷ್ಠಾನವು ಮಕ್ಕಳಿಗೆ ಸ್ಪಿರಿನ್ (ಚಿಕ್ಕಿ) ನೀಡುತ್ತಿದೆ. ಜಾಗತಿಕವಾಗಿ ಸ್ಪಿರಿನ್ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ದೇಶದಲ್ಲಿ 7 ಲಕ್ಷ ಮಕ್ಕಳು ಸ್ಪಿರಿನ್ ಸೇವಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಸ್ವಂತವಾಗಿ ಸ್ಪಿರಿನ್ ತಯಾರಿಸಬಹುದು. ಇದಕ್ಕೆ ಪ್ರತಿಷ್ಠಾನದಿಂದ ತರಬೇತಿ ಹಾಗೂ ಮಾಹಿತಿ ನೀಡಲಾಗುವುದು’ ಎಂದರು.
ಶಾಲೆ ನಿರ್ಮಾಣ: ‘ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನುದಾನದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಲವೆಡೆ ಅಂಗನವಾಡಿ ಕಟ್ಟಡ, ಶಾಲೆಗಳನ್ನು ನಿರ್ಮಿಸಲಾಗಿದೆ’ ಎಂದು ಬಿಎಚ್‌ಇಎಲ್ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಬಿ.ಜಾರ್ಜ್ ವಿವರಿಸಿದರು.
‘ಸಂಸ್ಥೆಯಿಂದ ಕೌಶಲ ತರಬೇತಿ, ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿರುವ ಮಾಸ್ಕ್, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನರ್ ಉಪಕರಣಗಳಿಂದ ಕೋವಿಡ್ ತುರ್ತು ಸಂದರ್ಭದಲ್ಲಿ ತಾಯಿ ಮಕ್ಕಳ ರಕ್ಷಣೆಗೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಬಿಎಚ್‌ಇಎಲ್ ಉಪ ಪ್ರಧಾನ ವ್ಯವಸ್ಥಾಪಕ ಜೆ.ಜಾನ್ ಆಂಬ್ರೋಸ್, ಸ್ಪಿರುಲಿನಾ ಪ್ರತಿಷ್ಠಾನದ ಅಧ್ಯಕ್ಷ ಆರ್.ವಿ.ಮಹೇಶ್, ಉಪ ವಿಭಾಗಾಧಿಕಾರಿ ಅನಂದ್‌ಪ್ರಕಾಶ್ ಮೀನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ರಮೇಶ್ ಪಾಲ್ಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.