ಸೋಮವಾರ, ಆಗಸ್ಟ್ 2, 2021
20 °C
ಅರಿವು ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿಕೆ

ಅಂತರ್ಜಲ ವೃದ್ಧಿಗೆ ಅಟಲ್ ಭೂಜಲ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೇಂದ್ರ ಸರ್ಕಾರವು ಅಂತರ್ಜಲ ವೃದ್ಧಿ ಹಾಗೂ ನೀರಿನ ಸಂರಕ್ಷಣೆಗಾಗಿ ಅಟಲ್ ಭೂಜಲ ಯೋಜನೆ ಜಾರಿಗೆ ತಂದಿದೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸುಸ್ಥಿರ ಅಂತರ್ಜಲ ನಿರ್ವಹಣೆಗೆ ಅಟಲ್ ಭೂಜಲ ಯೋಜನೆ ಕುರಿತು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ, ಟ್ರೀಸ್‌ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೆಲ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ 1,200 ಅಡಿ ಆಳಕ್ಕೆ ಕುಸಿದಿದೆ. ಕೋಲಾರ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿಯಿದೆ. ಅಂತರ್ಜಲ ಮಟ್ಟವನ್ನು 300 ಅಡಿಗೆ ತರುವುದು ಯೋಜನೆಯ ಪ್ರಮುಖ ಉದ್ದೇಶ. ಅಂತರ್ಜಲ ವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳನ್ನು ಗ್ರಾಮಸಭೆಗಳ ಮೂಲಕ ಆಯ್ಕೆ ಮಾಡಲಾಗುವುದು. ಯೋಜನೆಯನ್ನು 3 ಹಂತದಲ್ಲಿ ಅನುಷ್ಠಾನಗೊಳಿಸಲಾಗುವುದು’ ಎಂದು ವಿವರಿಸಿದರು.

‘ಮೊದಲ ಹಂತದಲ್ಲಿ ನೀರಿನ ಲಭ್ಯತೆ ಬಗ್ಗೆ ಅಧ್ಯಯನ ನಡೆಸಿ ಅವಶ್ಯಕತೆಗೆ ಅನುಗುಣವಾಗಿ ಬಳಸುವಂತೆ ಮಾಡುವುದು. 2ನೇ ಹಂತದಲ್ಲಿ ಕೃಷಿ ಹೊಂಡ, ಚೆಕ್‌ಡ್ಯಾಂ, ಕುಂಟೆ ನಿರ್ಮಿಸಿ ನೀರು ಸಂರಕ್ಷಿಸುವುದು. ನೀರಿನ ಆವಿ ಪ್ರಮಾಣ ತಗ್ಗಿಸುವುದು ಹಾಗೂ ವಾತಾವರಣದಲ್ಲಿ ತೇವಾಂಶ ಕಾಪಾಡುವುದು. ಮೂರನೆಯದಾಗಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ನೀರಿನ ಬಳಕೆ ಕಡಿಮೆ ಮಾಡಬಹುದು’ ಎಂದು ಮಾಹಿತಿ ನೀಡಿದರು.

‘ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ. ಎತ್ತಿನಹೊಳೆ ಯೋಜನೆ ಮೂಲಕ 24 ಟಿಎಂಸಿ ನೀರನ್ನು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಹರಿಸಲಾಗುವುದು. ಕೃಷ್ಣ ಜಲಾನಯನ ಪ್ರದೇಶಕ್ಕೆ ಹರಿಯುವ ವ್ಯರ್ಥ ನೀರನ್ನು ತಡೆದು ಇಂಗುವಂತೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ’ ಎಂದರು.

ನೀರಿಗೆ ಕಷ್ಟ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ನೀರಿಗೆ ತುಂಬಾ ಕಷ್ಟಪಡುತ್ತಿದ್ದಾರೆ. ಕೆಲವೆಡೆ ಕೆ.ಸಿ ವ್ಯಾಲಿ ನೀರು ಹರಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಅಂರ್ತಜಲ ವೃದ್ಧಿಯಾಗಿದೆ. ಕೆರೆ, ಕುಂಟೆ, ಕಾಲುವೆಗಳನ್ನು ಸಂರಕ್ಷಿಸಿಬೇಕು. ಚೆಕ್‌ಡ್ಯಾಂ ನಿರ್ಮಿಸಿ ನೀರು ಹರಿಯದಂತೆ ತಡೆದು ಅಂತರ್ಜಲ ವೃದ್ಧಿಸಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಸಲಹೆ ನೀಡಿದರು.

‘ರೈತರಿಗೆ ಅನುಕೂಲವಾಗುವಂತೆ ಅವರ ಆದಾಯ ದ್ವಿಗುಣಗೊಳಿಸಬೇಕು. ಕೃಷಿಯಲ್ಲಿ ಜಿಲ್ಲೆ ಇಸ್ರೇಲ್‌ಗೆ ಮಾದರಿಯಾಗುವಂತೆ ಮಾಡಬೇಕು. ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಇರುವ ಎಲ್ಲಾ ಅಡೆತಡೆಗಳನ್ನು ಶೀಘ್ರವೇ ಬಗೆಹರಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಖನಿಜವೆಂದು ಘೋಷಿಸಿ: ‘ಸರ್ಕಾರ ನೀರನ್ನು ಖನಿಜವೆಂದು ಘೋಷಣೆ ಮಾಡಬೇಕು. ಹನಿ ನೀರಾವರಿ ಪದ್ಧತಿ ಅಳವಡಿಕೆ ಕಡ್ಡಾಯಗೊಳಿಸಬೇಕು. ಕೆರೆ, ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ನೀಲಗಿರಿ, ಅಕೇಶಿಯಾ, ಬಳ್ಳಾರಿ ಜಾಲಿ, ಕರಿ ಜಾಲಿ, ಪಾರ್ಥೇನಿಯಂ ಗಿಡಗಳನ್ನು ತೆರವು ಮಾಡಿಸಬೇಕು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಕೋರಿದರು.

‘ಜಿಲ್ಲೆಯ ರೈತರು ಕೃಷಿ ಮತ್ತು ಹೈನುಗಾರಿಕೆ ನಂಬಿಕೊಂಡಿದ್ದಾರೆ. ಬಹಳ ವರ್ಷಗಳಿಂದ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಜಲ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯ’ ಎಂದು ಶಾಸಕಿ ಎಂ.ರೂಪಕಲಾ ಕಿವಿಮಾತು ಹೇಳಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರ ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್, ವೈ.ಎ.ನಾರಾಯಣಸ್ವಾಮಿ, ಗೋವಿಂದರಾಜು, ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ತಹಶೀಲ್ದಾರ್‌ ಶೋಭಿತಾ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು