ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಟಿಪ್ಪರ್ ಚಾಲಕರ ಮುಷ್ಕರ

ನಗರಸಭೆಯಿಂದ ನಾಲ್ಕು ತಿಂಗಳ ವೇತನ ಬಿಡುಗಡೆ ವಿಳಂಬ
Last Updated 12 ಏಪ್ರಿಲ್ 2021, 5:16 IST
ಅಕ್ಷರ ಗಾತ್ರ

ಕೆಜಿಎಫ್: ನಾಲ್ಕು ತಿಂಗಳಿಂದ ವೇತನ ನೀಡಿಲ್ಲ ಎಂದು ದೂರಿ ರಾಬರ್ಟಸನ್ ಪೇಟೆ ನಗರಸಭೆಯ ಗುತ್ತಿಗೆ ಆಟೊ ಟಿಪ್ಪರ್ ಚಾಲಕರು ಭಾನುವಾರ ದಿಢೀರ್ ಮುಷ್ಕರ ಆರಂಭಿಸಿದರು.

ಡಿಸೆಂಬರ್ ತಿಂಗಳಿಂದ ಇದುವರೆವಿಗೂ ವೇತನ ನೀಡಿಲ್ಲ. ಯುಗಾದಿ ಹಬ್ಬ ಬಂದಿದೆ. ಮನೆ ಖರ್ಚಿನ ಜೊತೆಗೆ ಹಬ್ಬದ ಖರ್ಚು ಕೂಡ ಹೆಚ್ಚಾಗಿದೆ. ಕಾಯಂ ನೌಕರರಿಗಿಂತ ಹೆಚ್ಚಿನ ಕೆಲಸ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವೇತನ ನೀಡದೆ ಸತಾಯಿಸಲಾಗುತ್ತಿದೆ. ವೇತನ ಪಾವತಿ ಮಾಡದ ಹೊರತು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಚಾಲಕರು ಪಟ್ಟುಹಿಡಿದರು.

ಮೊದಲಿನಿಂದಲೂ ಗುತ್ತಿಗೆ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ಸರಿಯಾದ ಸಮಯಕ್ಕೆ ಸಂಬಳ ನೀಡುತ್ತಿಲ್ಲ. ಪಿಎಫ್, ಇಎಸ್ಐ ಸೌಲಭ್ಯ ಕೊಡುತ್ತಿಲ್ಲ. ವಾಗ್ದಾನ ಮಾಡಿದ ಸಂಬಳಕ್ಕಿಂತ ಕಡಿಮೆ ಕೊಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದರು.ನಂತರ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅವರನ್ನು ಭೇಟಿ ಮಾಡಿ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಈ ಹಂತದಲ್ಲಿ ಚಾಲಕರನ್ನು ತರಾಟೆಗೆ ತೆಗೆದುಕೊಂಡ ವಳ್ಳಲ್ ಮುನಿಸ್ವಾಮಿ, ನಗರಸಭೆಯ ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುವುದನ್ನು ಮೊದಲು ಬಿಡಬೇಕು. ಜನವರಿ ಮತ್ತು ಫೆಬ್ರುವರಿ ತಿಂಗಳ ವೇತನವನ್ನು ಹಳೇ ಗುತ್ತಿಗೆದಾರನಿಗೆ ನೀಡಲಾಗುವುದು. ಹಳೇ ಗುತ್ತಿಗೆದಾರ ಹದಿನಾಲ್ಕು ವರ್ಷಗಳಿಂದ ನಗರಸಭೆಯಲ್ಲಿ ಗುತ್ತಿಗೆ ಪಡೆದಿದ್ದಾರೆ. 50 ಮಂದಿ ಕೆಲಸಗಾರರನ್ನು ನಿಯೋಜಿಸದೆ ಮೋಸ ಮಾಡುತ್ತಿದ್ದರು. ಸಾಕಷ್ಟು ದೂರು ಬಂದಿದ್ದರಿಂದ ಈ ಬಾರಿ ಗುತ್ತಿಗೆಯನ್ನು ಮೂರು ಮಂದಿಗೆ ನೀಡಲಾಗಿದೆ ಎಂದರು.

ಈಗ ಎರಡು ತಿಂಗಳ ಸಂಬಳವನ್ನು ಹಳೇ ಗುತ್ತಿಗೆದಾರನಿಗೆ ನೀಡಲಾಗಿದೆ. ಆತ ಓಡಿಹೋದರೆ ಗುತ್ತಿಗೆ ನೌಕರರಿಗೆ ಸಂಬಳ ಇರುವುದಿಲ್ಲ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಮಾರ್ಚ್ ತಿಂಗಳ ವೇತನವನ್ನು ನೀಡಲು ಹೊಸ ಗುತ್ತಿಗೆದಾರ ಸಿದ್ಧವಿದ್ದಾರೆ. ಆದರೆ ಅದನ್ನು ಪಡೆಯಲು ಚಾಲಕರು ಒಪ್ಪುತ್ತಿಲ್ಲ. ನಗರಸಭೆಗೂ ಮತ್ತು ಗುತ್ತಿಗೆ ಚಾಲಕರಿಗೆ ನೇರ ಸಂಬಂಧವಿಲ್ಲ. ನಗರಸಭೆಯಿಂದ ಹಣವನ್ನು ಗುತ್ತಿಗೆದಾರನಿಗೆ ನೀಡಲಾಗುತ್ತದೆ. ಆತ ವೇತನ ನೀಡಬೇಕು. ಯಾರದೋ ಚಿತಾವಣೆ ಮೇಲೆ ಅಧಿಕಾರಿಗಳನ್ನು ಮೇಲೆ ಬ್ಲಾಕ್‌ಮೇಲ್‌ ಮಾಡಲು ಹೊರಟರೆ, ನಿಮ್ಮನ್ನೆಲ್ಲಾ ತೆಗೆದುಹಾಕಿ ಹೊಸ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಧ್ಯಕ್ಷರ ಎಚ್ಚರಿಕೆಗೆ ಮಣಿದ ಚಾಲಕರು ಮುಷ್ಕರ ನಿಲ್ಲಿಸಿ, ಕೆಲಸಕ್ಕೆ ತೆರಳಿದರು.

ಅಧಿಕಾರಿಗಳ ಲೋಪ: ‘ಬೆಳಿಗ್ಗೆ 5 ಗಂಟೆಗೆ ನಗರಸಭೆಗೆ ಬಂದು ಪೌರಕಾರ್ಮಿಕರ ಉಪಸ್ಥಿತಿ ಮತ್ತು ನಿಯೋಜನೆ ಬಗ್ಗೆ ಆಯುಕ್ತರು ಖುದ್ದು ಪರಿಶೀಲಿಸಬೇಕು. ಆದರೆ, ಅವರು ಇದುವರೆವಿಗೂ ಬಂದಿಲ್ಲ. ಇತರೇ ಅಧಿಕಾರಿಗಳು ಕೂಡ ಈ ಕೆಲಸ ಮಾಡುತ್ತಿಲ್ಲ. ಇದರ ಸದುಪಯೋಗ ಪಡೆದ ಹಳೇ ಗುತ್ತಿಗೆದಾರ ನಿಯೋಜನೆ ಮಾಡಬೇಕಾದ ನೌಕರರಿಗಿಂತ ಕಡಿಮೆ ಸಂಖ್ಯೆಯ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಇದರಿಂದ ನಗರದಲ್ಲಿ ಸ್ವಚ್ಛತೆ ಕಾರ್ಯ ವಿಳಂಬವಾಗುತ್ತಿತ್ತು’ ಎಂದು ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT