ಮಂಗಳವಾರ, ಆಗಸ್ಟ್ 3, 2021
28 °C
ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕ ರಮೇಶ್‌ಕುಮಾರ್‌ ಸೂಚನೆ

ದಲ್ಲಾಳಿ–ಮಧ್ಯವರ್ತಿಗಳ ಹಾವಳಿ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಿ. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿದರೆ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ತಾಲ್ಲೂಕು ಕಚೇರಿಯ ಆರೋಗ್ಯ ಕೆಟ್ಟಿದೆ. ಈ ಹಿಂದೆ ಇದ್ದ ಶಾಸಕರು ದಲ್ಲಾಳಿಗಳಿಗೆ ಸಹಕಾರ ನೀಡುತ್ತಿದ್ದರು. ಕಚೇರಿಯ ಕ್ಲರ್ಕ್‌ಗಳು ಮತ್ತು ಸಿಬ್ಬಂದಿಗೆ ಚುರುಕು ಮುಟ್ಟಿಸಬೇಕು’ ಎಂದು ತಹಶೀಲ್ದಾರ್‌ಗೆ ಸೂಚನೆ ನೀಡಿದರು.

‘ಸರ್ಕಾರಿ ಜಾಗ, ಗುಂಡು ತೋಪು, ಗೋಮಾಳದ ಜಾಗವನ್ನು ಸಾರ್ವಜನಿಕರ ಉದ್ದೇಶಕ್ಕೆ ಮಂಜೂರು ಮಾಡಬಹುದು. ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಗಳನ್ನು ಗುರುತಿಸಿ ಜಾಗ ನೀಡುವಂತೆ ಹಿಂದೆಯೇ ತಿಳಿಸಿದ್ದೆ. ಆದರೆ, ಇನ್ನು ಕೆಲ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಜಾಗವಿಲ್ಲ. ಕೂಡಲೇ ಜಮೀನು ಗುರುತಿಸಿಕೊಟ್ಟರೆ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅನುಮೋದನೆ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಹಲವು ದಶಕಗಳಿಂದ ಜಮೀನಿನ ಅನುಭವದಲ್ಲಿ ಇರುತ್ತಾರೆ. ಆದರೆ, ಅಂತಹ ಜಮೀನುಗಳಿಗೆ ಕೆಲ ಬಲಾಢ್ಯರು ದಾಖಲೆಪತ್ರ ಸೃಷ್ಟಿಸುತ್ತಾರೆ. ಇಲಾಖೆಯಲ್ಲಿನ ಕೆಲ ಅಧಿಕಾರಿಗಳು ಅಂತಹ ಭೂಗಳ್ಳರಿಗೆ ಸ್ಪಂದಿಸುತ್ತಾರೆ. ಉಳ್ಳವರು, ಇಲ್ಲದವರನ್ನು ಗುರುತಿಸಬೇಕು. ಭೂಮಿ ಇಲ್ಲದವರಿಗೆ ಆದ್ಯತೆ ಮೇರೆಗೆ ಜಮೀನು ಹಂಚಿಕೆ ಮಾಡಬೇಕು’ ಎಂದು ತಿಳಿಸಿದರು.

ಶೀಘ್ರವೇ ವಿಲೇವಾರಿ: ‘ಜಮೀನು ಅನುಭವದಲ್ಲಿರುವ ರೈತರು ಫಾರಂ 57ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಂಡಿದ್ದೇವೆ. ಹೋಳೂರು ಹೋಬಳಿಯ 26 ಹಾಗೂ ಸುಗಟೂರು ಹೋಬಳಿಯ 20 ಅರ್ಜಿ ಬಾಕಿ ಇದ್ದು, ಶೀಘ್ರವೇ ವಿಲೇವಾರಿ ಮಾಡುತ್ತೇವೆ’ ಎಂದು ತಹಶೀಲ್ದಾರ್ ಶೋಭಿತಾ ವಿವರಿಸಿದರು.

‘ಆ.20ಕ್ಕೆ ದೇವರಾಜ ಅರಸು ಜಯಂತಿಯಿದ್ದು, ಆ ದಿನದೊಳಗೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 7 ಹೋಬಳಿಗಳ ರೈತರ ಪಿ ನಂಬರ್ ಸಮಸ್ಯೆ ಬಗೆಹರಿಯಬೇಕು. ಜತೆಗೆ ಬಾಕಿ ಇರುವ ರೈತರಿಗೆ ಅಂಚೆ ಮೂಲಕ ಸಾಗುವಳಿ ಚೀಟಿ ಕಳುಹಿಸಲು ಕ್ರಮ ಕೈಗೊಳ್ಳಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸದಿದ್ದರೆ ರೈತರ ಸಮಸ್ಯೆ ಶಾಶ್ವತವಾಗಿ ಉಳಿಯುತ್ತವೆ’ ಎಂದು ರಮೇಶ್‌ಕುಮಾರ್‌ ಎಚ್ಚರಿಕೆ ನೀಡಿದರು.

ಮಾಸಾಶನ ತಾರತಮ್ಯ: ‘60 ವರ್ಷ ದಾಟಿದ ವಯೋವೃದ್ಧರಿಗೆ ಬರುತ್ತಿರುವ ಮಾಸಾಶನ ವಿತರಣೆಯಲ್ಲಿ ತಾರತಮ್ಯವಿದೆ. ಕೆಲವರಿಗೆ ₹ 600 ಹಾಗೂ ಮತ್ತೆ ಕೆಲವರಿಗೆ ₹ 1 ಸಾವಿರ ಮಾಸಾಶನ ಬರುತ್ತಿದೆ. ಈ ಬಗ್ಗೆ ಸಾಕಷ್ಟು ದೂರು ಬಂದಿವೆ. ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಮಾಸಾಶನ ಬರುವಂತೆ ಕಂದಾಯ ನಿರೀಕ್ಷಕರು ಮಾಡಬೇಕು. ತಾರತಮ್ಯ ಮುಂದುವರಿದರೆ ಸಹಿಸಲ್ಲ’ ಎಂದು ಗುಡುಗಿದರು.

‘ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿಯು ಒಂದು ಪಕ್ಷ ಅಥವಾ ವ್ಯಕ್ತಿ ಪರವಾಗಿ ಕೆಲಸ ಮಾಡಬಾರದು, ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಹೀಗೆ ತಾರತಮ್ಯ ಮಾಡಬಾರದು. ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಕೆಲಸ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಭೂಮಿ ನೀಡಬೇಕು’ ಎಂದು ಸೂಚನೆ ನೀಡಿದರು.

ಉಪ ವಿಭಾಗಾಧಿಕಾರಿ ಸೋಮಶೇಖರ್, ಡಿಡಿಎಲ್‍ಆರ್ ಗೋಪಾಲಯ್ಯ, ಶ್ರೀನಿವಾಸಪುರ ತಹಶೀಲ್ದಾರ್ ಶ್ರೀನಿವಾಸ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.