ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾರ್ಮಿಕರ ಗುಳೆ ತಪ್ಪಿಸಿ: ಪಿಡಿಒಗಳಿಗೆ ಜಿ.ಪಂ ಸಿಇಒ ಜಗದೀಶ್‌ ಸೂಚನೆ

Last Updated 14 ಮೇ 2019, 12:38 IST
ಅಕ್ಷರ ಗಾತ್ರ

ಕೋಲಾರ: ‘ನರೇಗಾ ಕಾಮಗಾರಿಗಳಿಗೆ ಜೆಸಿಬಿ ಬಳಕೆ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಕಾಮಗಾರಿ ಸ್ಥಳದಲ್ಲೇ ಶಿಸ್ತುಕ್ರಮ ಜರುಗಿಸುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಮಳೆ ಬೆಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರಿಗೆ ನೇರವಾಗಿ ಕೂಲಿ ಕೊಡುವ ಉದ್ದೇಶದಿಂದ ನರೇಗಾ ಅಡಿ ಹಲವು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಯಂತ್ರೋಪಕರಣ ಬಳಸಬಾರದು’ ಎಂದು ಆದೇಶಿಸಿದರು.

‘ಕೆರೆಗಳಲ್ಲಿ ಹೂಳು ಎತ್ತುವುದು ಮಾತ್ರ ನಮ್ಮ ಉದ್ದೇಶವಲ್ಲ. ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಗುಳೆ ಹೋಗುವುದನ್ನು ತಪ್ಪಿಸಬೇಕು. ಜತೆಗೆ ಕೆರೆಗಳಲ್ಲಿ ಹೂಳು ತೆಗೆಸಬೇಕು. ಈ ಕೆಲಸವನ್ನು ಆಂದೋಲನದ ರೀತಿ ಮಾಡಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಹೊಸದಾಗಿ ಗ್ರಾಮ ಪಂಚಾಯಿತಿಗಳಿಂದ ಮನೆ ಮಂಜೂರಾಗಿದ್ದರೂ ಫಲಾನುಭವಿಗಳು ಈವರೆಗೂ ಮನೆ ಕಟ್ಟಿಲ್ಲ. ಅವರಿಗೆ ನೋಟಿಸ್‌ ಜಾರಿ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೆರಡು ದಿನದಲ್ಲಿ ಮತ್ತೊಂದು ನೋಟಿಸ್‌ ಕೊಟ್ಟು ವರದಿ ನೀಡಿ. ಫಲಾನುಭವಿಗಳಿಗೆ ಮನೆ ಬೇಡವಾದರೆ ಬೇರೆಯವರು ಮನೆಗಾಗಿ ಕಾಯುತ್ತಿದ್ದಾರೆ’ ಎಂದರು.

‘ಮನೆ ಮಂಜೂರು ಮಾಡಿಸಿಕೊಂಡಿರುವವರು ಈವರೆಗೂ ತಮ್ಮ ಮೊಬೈಲ್‌ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ಸಲ್ಲಿಸಿಲ್ಲ. ಅಂತಹವರ ಮನೆ ರದ್ದು ಮಾಡಿ. ಇದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ವಿವರಣೆ ನೀಡಬೇಕು’ ಎಂದು ಸೂಚಿಸಿದರು.

ತೆರಿಗೆ ಹೆಚ್ಚಳ: ‘ಜಿಲ್ಲೆಯಲ್ಲಿ ಈ ಬಾರಿ ₹ 10.66 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ತೆರಿಗೆ ಸಂಗ್ರಹ ಹೆಚ್ಚಳವಾಗಿರುವುದು ಸಂತಸದ ಸಂಗತಿ. ತೆರಿಗೆ ಸಂಗ್ರಹಣೆ ವಿವರವನ್ನು ಪ್ರತಿನಿತ್ಯ ಸರ್ಕಾರಕ್ಕೆ ಸಲ್ಲಿಸಬೇಕು. ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಕೆಲ ಫಲಾನುಭವಿಗಳಿಗೆ ಬಿಲ್‌ ಪಾವತಿಸಿಲ್ಲ. ಚುನಾವಣಾ ನೀತಿಸಂಹಿತೆಗೂ ಬಿಲ್‌ ಪಾವತಿಗೂ ಸಂಬಂಧವಿಲ್ಲ. ಶೀಘ್ರವೇ ಹಣ ಬಿಡುಗಡೆ ಮಾಡಿ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಜಾಗ ಹುಡುಕಿ ವರದಿ ಸಲ್ಲಿಸಬೇಕು. ನೀರು ಮತ್ತು ಕಸದ ಸಮಸ್ಯೆಗೆ ಸಂಬಂಧಿಸಿದ ದೂರು ಪರಿಶೀಲಿಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT