ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿ | ಭಾಷಾ ಸೇವೆಗೆ ಪುರಸ್ಕಾರದ ಗರಿ

Last Updated 28 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಪಿಯುಸಿ ವಿಜ್ಞಾನ ವಿಷಯದಲ್ಲಿ ಫೇಲ್‌ ಆದಾಗ, ಆದ ಅವಮಾನ ಅವರನ್ನು ಬಹಳ ನೋಯಿಸಿತು. ಆಗ ಇಷ್ಟವಲ್ಲದ ‘ವಿಜ್ಞಾನ’ ಬಿಟ್ಟು, ಇಷ್ಟವಾಗುವ ‘ಸಾಹಿತ್ಯ’ದತ್ತ ಹೊರಟರು. ಆಳವಾಗಿ ಅಧ್ಯಯನ ಮಾಡಿದರು. ಬಡತನವನ್ನೂ ಮೆಟ್ಟಿನಿಂತು, ಸೆಕ್ಯುರಿಟಿ ಕೆಲಸ ಮಾಡುತ್ತಲೇ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಪಡೆದರು. 20 ಕೃತಿಗಳನ್ನು ರಚಿಸಿದರು. ಪಿ.ಎಚ್‌ಡಿ ಮಾಡಿದರು. ಸಹ ಪ್ರಾಧ್ಯಾಪಕರಾದರು. ಈಗ ಯುವ ವಿದ್ವಾಂಸರಾಗಿ ‘ರಾಷ್ಟ್ರಪತಿ ಪುರಸ್ಕಾರ’ಕ್ಕೂ ಭಾಜನರಾಗಿದ್ದಾರೆ.

ಕಠಿಣ ಹಾದಿಯಲ್ಲಿ ಸಾಧನೆ ಮಾಡುತ್ತಾ ಪುರಸ್ಕಾರ ಕಿರೀಟ ಮುಡಿಗೇರಿಸಿಕೊಂಡ ಯುವ ವಿದ್ವಾಂಸರ ಹೆಸರು ಡಾ.ಕುಪ್ನಳ್ಳಿ ಎಂ.ಬೈರಪ್ಪ. ಇವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿಯವರು. ಮೈಸೂರು ವಿಶ್ವವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರ‍್ಯಾಂಕ್‌ನೊಂದಿಗೆ ಎಂ.ಎ ಪದವಿ ಪಡೆದಿದ್ದಾರೆ. ಹಿರಿಯ ವಿದ್ವಾಂಸ ಪ್ರೊ.ಕೃಷ್ಣಮೂರ್ತಿ ಹನೂರು ಅವರ ಮಾರ್ಗದರ್ಶನದಲ್ಲಿ ‘ಆಧುನಿಕ ಕನ್ನಡ ನಾಟಕಗಳಲ್ಲಿ ಸಾಂಸ್ಕೃತಿಕ ಸಂಘರ್ಷ’ ವಿಷಯದಲ್ಲಿ ಪಿ.ಎಚ್‌ಡಿ ಪಡೆದಿದ್ದಾರೆ.

ಪ್ರಸ್ತುತ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಹ ಸಂಶೋಧಕರಾಗಿದ್ದಾರೆ. ಶಾಸ್ತ್ರೀಯ ಭಾಷೆಗೆ ಸಲ್ಲಿಸಿದ ಸೇವೆಗಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ‘ರಾಷ್ಟ್ರಪತಿ ಪುರಸ್ಕಾರ’ದ ಭಾಗವಾಗಿ ಯುವ ವಿದ್ವಾಂಸರಿಗೆ ಕೊಡ ಮಾಡುವ ಪ್ರಸಕ್ತ ಸಾಲಿನ ‘ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿ’ಗೆ ಬೈರಪ್ಪ ಭಾಜನರಾಗಿದ್ದಾರೆ. ಇದೇ ಪುರಸ್ಕಾರಕ್ಕೆ ಈ ಬಾರಿ ಹಿರಿಯ ವಿದ್ವಾಂಸ ಪ್ರೊ. ಹಂ.ಪ.ನಾಗರಾಜಯ್ಯ, ಯುವ ವಿದ್ವಾಂಸರಾದ ಡಾ.ಜಿ.ಬಿ.ಹರೀಶ್, ಡಾ.ಎಸ್. ಕಾರ್ತಿಕ್ ಅವರೂ ಭಾಜನರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಲ್ಲಿ 33ರ ಹರೆಯದ ಬೈರಪ್ಪ ಕಿರಿಯ ವಯಸ್ಸಿನವರು. ಈ ಪ್ರಶಸ್ತಿಯು ₹1 ಲಕ್ಷ.

ಕಠಿಣ ಹಾದಿಯ ಪಯಣ

ಸಾಹಿತ್ಯ ಓದುವ ಆಸೆ ಇತ್ತು. ಆದರೆ, ವಿಜ್ಞಾನ ವಿಷಯದಲ್ಲಿ ಓದಿದರೆ ಬೇಗ ಕೆಲಸ ಸಿಗುತ್ತದೆ ಎಂಬ ಹಿರಿಯರು, ಸರೀಕರ ಒತ್ತಾಯದಿಂದ ಒಲ್ಲದ ಮನಸ್ಸಿನಿಂದ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡರು ಬೈರಪ್ಪ. ಭಾವನೆ ಹಾಗೂ ಜ್ಞಾನ ಎರಡನ್ನೂ ಅಭಿವ್ಯಕ್ತಿಸಲು ಇಂಗ್ಲಿಷ್ ಭಾಷೆ, ವಿಜ್ಞಾನ ದಾರಿ ತೋರಲಿಲ್ಲ. ಮಾತೃಭಾಷೆಯಲ್ಲಿ ಅಭಿವ್ಯಕ್ತಿಸಲು ಮನಸ್ಸು ತುಡಿಯುತ್ತಿತ್ತು. ಶೈಕ್ಷಣಿಕವಾಗಿ ಎದುರಾದ ಈ ಸವಾಲನ್ನು ಗೆಲ್ಲಲು ಸಾಧ್ಯವಾಗದೆ ಕುಗ್ಗಿ ಹೋದರು. ಪಿಯುಸಿ ಪಾಸು ಮಾಡಲಾಗಲಿಲ್ಲ.

ಫೇಲ್‌ ಆದಾಗ, ಸುತ್ತಲಿನವರ ಚುಚ್ಚು ಮಾತು ಬೇಸರ ತರಿಸಿತ್ತು. ಊರು ಬಿಟ್ಟು ಬೆಂಗಳೂರು ಸೇರಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸೇರಿದರು. ಎಂಟು ಗಂಟೆ ಕೆಲಸ. ನಂತರ ಹೋಟೆಲ್‌ನಲ್ಲಿ ನೌಕರಿ. ‘ಈ ಕೆಲಸಗಳ ನಡುವೆಯೇ ಫೇಲ್‌ ಆಗಿದ್ದ ಪಿಯುಸಿ ಪಾಸ್ ಮಾಡಿದೆ. ‘ವಿಜ್ಞಾನ ಭೂತ’ದಿಂದ ಬಿಡುಗಡೆ ಸಿಕ್ಕಿತು’ ಎಂದು ಆರಂಭದ ದಿನಗಳನ್ನು ಬೈರಪ್ಪ ನೆನಪಿಸಿಕೊಂಡರು.

ಸಾಹಿತ್ಯದೊಂದಿಗೆ ಒಡನಾಟ

ವಿಜ್ಞಾನದಿಂದ ಬಿಡುಗಡೆಯಾದ ಮೇಲೆ ಪದವಿಯಲ್ಲಿ ಐಚ್ಛಿಕ ಕನ್ನಡ ಆಯ್ಕೆ ಮಾಡಿಕೊಂಡರು. ಕಾಲೇಜಿನ ಶುಲ್ಕ ಪಾವತಿಗೆ, ಸಾಹಿತ್ಯ ಕೃತಿಗಳನ್ನು ಖರೀದಿಸಲೂ ಹಣ ಇರಲಿಲ್ಲ. ಇದಕ್ಕಾಗಿ ಊರಿನ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ತೋಟದ ಮನೆಯಲ್ಲಿ ವಾಸ್ತವ್ಯ. ಬೆಳಿಗ್ಗೆ 4 ಗಂಟೆಗೆ ಎದ್ದು 9 ಗಂಟೆವರೆಗೂ ಕೆಲಸ. ನಂತರ ಕಾಲೇಜು. ಸಂಜೆ 4ರಿಂದ 6ರವರೆಗೆ ಲೈಬ್ರರಿಯಲ್ಲಿ ಪುಸ್ತಕಗಳ ಅಧ್ಯಯನ. ‘ಇವೆಲ್ಲದರ ನಡುವೆಯೂ ಉತ್ತಮ ಗುರುಗಳು ಸಿಕ್ಕಿದ್ದು, ಅವರ ಮಾರ್ಗದರ್ಶನದಿಂದ ಕನ್ನಡ ಸಾಹಿತ್ಯವನ್ನು ಅರಿಯಲು ಸಾಧ್ಯವಾಯಿತು’ ಎಂದು ಎಳೆ ಎಳೆಯಾಗಿ ನೆನಪುಗಳನ್ನು ಬಿಚ್ಚಿಟ್ಟರು.

ಬೈರಪ್ಪ ಅವರ ಸಾಹಿತ್ಯ ಅಧ್ಯಯನಕ್ಕೆ ನೀರು ಎರೆದಿದ್ದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ಓದಿನ ವಾತಾವರಣ. ಇದರ ಜತೆಗೆ ಗುರು ಹಿರಿಯರ ಪ್ರೀತಿ, ಅಧ್ಯಯನಶೀಲ ಸ್ನೇಹಿತರು. ‘ಈ ವಾತಾವರಣವೇ ನನ್ನೊಳಗಿನ ಓದುಗನನ್ನು ಹೆಚ್ಚು ಕ್ರಿಯಾಶೀಲಗೊಳಿಸಿತು’ ಎಂಬುದು ಅವರ ಅಭಿಪ್ರಾಯ. ಹೀಗೆ ಹೆಚ್ಚು ಹೆಚ್ಚ ಸಾಹಿತ್ಯ ಓದಿನ ಜತೆ ಜತೆಗೆ ಅವರು ಸಾಂಸ್ಕೃತಿಕ ಹಾಗೂ ಜನಪದ ಕಲೆಗಳನ್ನು ಕಲಿಯಲು ಆರಂಭಿಸಿದರು.

ಓದಿಗೆ ಪೂರಕ ಚಟುವಟಿಕೆ

‘ಪ್ರಬಂಧ, ಲೇಖನ, ಕವಿತೆ ರಚನೆಯಂತಹ ಸ್ಪರ್ಧಾತ್ಮಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಇದಕ್ಕಾಗಿ ಹೆಚ್ಚು ಓದುತ್ತಿದ್ದೆ. ಓದುವಾಗ ಮೂಡುತ್ತಿದ್ದ ಅನುಮಾನಗಳನ್ನು ಪರಿಹರಿಸಲು ಮಾಹಿತಿಗಾಗಿ ಹುಡುಕಾಡುತ್ತಿದ್ದೆ. ಆಗ ನನ್ನೊಳಗಿನ ಬರಹಗಾರ ಚಿಗುರೊಡೆಯುತ್ತಿದ್ದ. ಹೀಗೆ ಬರವಣಿಗೆ ಆರಂಭವಾಯಿತು’ ಎಂದು ಸಾಹಿತ್ಯಯಾನದ ಆರಂಭವನ್ನು ಉಲ್ಲೇಖಿಸುತ್ತಾರೆ ಬೈರಪ್ಪ.

ಬರವಣಿಗೆ ವಿಷಯ ಮಾತನಾಡುತ್ತಾ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಹೊರತಂದ ‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’ ಸಂಪುಟಗಳಿಗೆ 30ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ‘ಈ ಸಂದರ್ಭದಲ್ಲಿ ತತ್ವಪದ, ಜಾನಪದ, ಹಳಗನ್ನಡ, ರಂಗಭೂಮಿ ನಡು ಗನ್ನಡ, ವಚನ ಸಾಹಿತ್ಯ ಹಾಗೂ ಬೌದ್ಧ ಸಾಹಿತ್ಯ ಓದಲು ಸಾಧ್ಯವಾಯಿತು’ ಎಂದು ಖುಷಿಯಿಂದ ಹೇಳುತ್ತಾರೆ.

‘ವಿಷಯಗಳನ್ನು ಓದಿ, ಅವುಗಳ ಬಗ್ಗೆ ಸಂಶೋಧನೆ ಮಾಡಿ ಲೇಖನಗಳನ್ನು ರಚಿಸುವುದು, ಆಯ್ದ ಲೇಖನಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಈ ಕೃತಿಗಳಿಗೆ ರಾಷ್ಟ್ರಪತಿ ಪುರಸ್ಕಾರ ಸಿಕ್ಕಿದೆ’ ಎಂದು ಅವರು ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯನ್ನೂ ತೆರೆದಿಡುತ್ತಾರೆ.

ಸಾಧನೆ ಎನ್ನುವುದು ಬಡತನ–ಸಿರಿತನದಲ್ಲಿಲ್ಲ. ಆಸಕ್ತಿ ಮತ್ತು ಬದ್ಧತೆಯಲ್ಲಿದೆ ಎನ್ನುವುದನ್ನು ಬೈರಪ್ಪ ಅವರು ಈ‘ಪುರಸ್ಕಾರ’ಕ್ಕೆ ಆಯ್ಕೆಯಾಗುವ ಮೂಲಕ ಸಾಧಿಸಿ ತೋರಿಸಿದ್ದಾರೆ.

ಪುರಸ್ಕಾರಕ್ಕೆ ಆಯ್ಕೆ ಪ್ರಕ್ರಿಯೆ ಹೇಗೆ?

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಷ್ಟ್ರಪತಿ ಪುರಸ್ಕಾರಕ್ಕೆ ಅಧಿಸೂಚನೆ ಹೊರಡಿಸುತ್ತದೆ. ಈ ಪ್ರಶಸ್ತಿಗೆ ಹಿರಿಯ ಮತ್ತು ಯುವ ವಿದ್ವಾಂಸರನ್ನು ಶಿಫಾರಸು ಮಾಡುವಂತೆ ಕೋರಿ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳು, ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು, ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಶಿಕ್ಷಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ವಿಶ್ವವಿದ್ಯಾಲಯಗಳ ಕುಲಪತಿ, ಈ ಹಿಂದೆ ರಾಷ್ಟ್ರಪತಿ ಪುರಸ್ಕಾರ ಪಡೆದ ವಿದ್ವಾಂಸರಿಗೆ ಅಧಿಸೂಚನೆ ಕಳುಹಿಸಲಾಗುತ್ತದೆ. ಪ್ರಮುಖವಾಗಿ ಈ ಪುರಸ್ಕಾರವನ್ನು ಭಾರತೀಯ ಭಾಷೆಗಳಲ್ಲಿ ಸಂಸ್ಕೃತ, ಪಾಳಿ, ಪ್ರಾಕೃತ, ಅರೇಬಿಕ್, ಪರ್ಶಿಯನ್, ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಒರಿಯಾ ಭಾಷೆಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹಿರಿಯ ಹಾಗೂ ಯುವ ವಿದ್ವಾಂಸರಿಗೆ ನೀಡಲಾಗುತ್ತದೆ.

ಶಿಫಾರಸು ಮಾಡುವವರು ಆಯಾ ವಿದ್ವಾಂಸರ ಐದು ಕೃತಿಗಳನ್ನು ಕಳುಹಿಸಬೇಕು. ಶಿಫಾರಸು ಹಾಗೂ ಐದು ಕೃತಿಗಳನ್ನು ಉನ್ನತ ಮಟ್ಟದಲ್ಲಿ ಮೌಲ್ಯೀಕರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಹಿರಿಯ ವಿದ್ವಾಂಸರಿಗೆ ₹5 ಲಕ್ಷ, ಯುವ ವಿದ್ವಾಂಸರಿಗೆ ₹1 ಲಕ್ಷ ನಗದು ಬಹುಮಾನ ಇರುತ್ತದೆ. ಈ ಪುರಸ್ಕಾರವನ್ನು ಸ್ವಾತಂತ್ರ್ಯ ದಿನಾಚರಣೆಯಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಘೋಷಿಸುತ್ತದೆ.

ಸಾಹಿತ್ಯ ಕೃಷಿ

ಬೈರಪ್ಪ ಅವರು 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪ್ರಮುಖವಾಗಿ ಕರ್ಣರಸಾಯನ, ಅಂತರಗಂಗವ್ವ, ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ, ಬಸವ ಸಿನಿಮಾ ಬುದ್ಧ ಪ್ರತಿಮಾ, ಬೌದ್ಧಯಾನಿ ಚಾಮುಂಡಿ, ಜನಮುಖಿ (ಪ್ರೊ.ಎಲ್.ಬಸವರಾಜು ಅವರ ಕೃತಿಶೋಧ), ಕತ್ತಲನಾಡಿನ ಬೆಳಕಿನ ಹಾಡು, ಮೈಸೂರು– ಚಾಮರಾಜನಗರದ ತತ್ವಪದಗಳು, ಬುದ್ಧನಗೆಯ ತಾಯಿ ನದಿ, ಬೋಧಿಯಾನ, ಹರಿಶ್ಚಂದ್ರ ಕಾವ್ಯ: ಸಾಂಸ್ಕೃತಿಕ ವಿವೇಚನೆ, ವಡ್ಡಾರಾಧನೆಯ ಕಥೆಗಳು: ಸಾಂಸ್ಕೃತಿಕ ಮುಖಾಮುಖಿ, ಶರಣಯಾನ ಮೊದಲಾದ ಸಂಶೋಧನಾ ಹಾಗೂ ಸಂಪಾದನಾ ಕೃತಿಗಳನ್ನು ಹೊರತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT