ಕೋಲಾರ: ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ರೇಷ್ಮೆ ಕೃಷಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಮುಂದಾಗಬೇಕು. ಮಾರುಕಟ್ಟೆಗೆ ತಕ್ಕಂತೆ ದ್ವಿಸಂತತಿ ರೇಷ್ಮೆ ಹುಳು ಸಾಕಾಣಿಕೆಗೆ ಆದ್ಯತೆ ನೀಡಬೇಕು ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಮಂಜುನಾಥ ತಿಳಿಸಿದರು.
ತಾಲ್ಲೂಕಿನ ಹೊಸಮಟ್ನಹಳ್ಳಿಯಲ್ಲಿ ರೈತರಿಂದ ರೈತರಿಗೆ ರೇಷ್ಮೆ ಕೃಷಿ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ರೇಷ್ಮೆ ಆಮದು ಸುಂಕ ಏರಿಕೆ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯವಿದೆ ಎಂದ ಅವರು ರೈತರು ಗುಣಮಟ್ಟದ ಗೂಡಿನ ಉತ್ಪಾದನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ರೇಷ್ಮೆ ವಿಸ್ತರಣಾಧಿಕಾರಿ ಎಂ.ಎಸ್.ಕಲ್ಯಾಣ ಸ್ವಾಮಿ, ರೈತರ ಆಸಕ್ತ ಗುಂಪುಗಳ ರಚನೆ ಬಗ್ಗೆ ನಿರ್ವಹಣೆ, ರೈತ ಕಂಪನಿ ಮಹತ್ವದ ಬಗ್ಗೆ ಹಾಗೂ 3 ರೈತ ಆಸಕ್ತ ಗುಂಪುಗಳ ಜೊತೆ ಸಂವಾದ ನಡೆಸಿ ವ್ಯಾಪಾರ ವಹಿವಾಟು, ಬೆಳೆ ಆದಾಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ತರಬೇತಿಯಲ್ಲಿ ದ್ವಿತಳಿ ರೇಷ್ಮೆ ಗೂಡು ಇಳುವರಿ ಬಗ್ಗೆ ಪ್ರಸ್ತುತ ವಾತಾವರಣದಲ್ಲಿ ಶೈತ್ಯಾಂಶ ಹೆಚ್ಚಾದಾಗ ಬರುವ ಸುಣ್ಣಕಟ್ಟು ರೋಗ ತಡೆ, ನರೇಗಾ ಯೋಜನೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ರೈತ ಅಯ್ಯಪ್ಪಣ್ಣ, ಸತತ 5 ವರ್ಷಗಳಿಂದ ದ್ವಿತಳಿ ರೇಷ್ಮೆ ಬೆಳೆದಿದ್ದು ಅನುಭವಗಳನ್ನು ರೈತರಿಗೆ ತಿಳಿಸಿ ದ್ವಿತಳಿ ಬೆಳೆಯುವ ರೈತರಿಗೆ ತಾಂತ್ರಿಕ ಸಲಹೆಯನ್ನು ನೀಡುವೆ ಎಂದು ರೈತರಿಗೆ ಧೈರ್ಯ ತುಂಬಿದರು.
ವೇಮಗಲ್ ರೇಷ್ಮೆ ವಿಸ್ತರಣಾಧಿಕಾರಿ ಚಂದ್ರಶೇಖರಗೌಡ, ಹಿಪ್ಪುನೇರಳೆ ತೋಟ, ರೇಷ್ಮೆ ದ್ವಿತಳಿ ಬೆಳೆಗೆ ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಹಾಗೂ ಇಲಾಖೆಯ ಸಹಾಯಧನ ಮತ್ತು ಸೋಂಕು ನಿವಾರಕಗಳ ಬಳಕೆ ಮಾಡಿ ದ್ವಿತಳಿ ಬೆಳೆಯಬೇಕೆಂದು ರೈತರ ಅರಿವಿನ ಕಾರ್ಯಕ್ರಮದಲ್ಲಿ ತಿಳಿಸಿದರು.
ಗ್ರಾ.ಪಂ ಸದಸ್ಯ ರಮೇಶ್, ವೇಮಗಲ್ ಎಸ್‍ಎಫ್‍ಪಿಸಿಎಲ್ ಅಧ್ಯಕ್ಷ ಕೆ.ಜಿ.ದೇವರಾಜ್, ವೇಮಗಲ್ ಎಸ್‌ಎಫ್‌ಪಿಸಿಎಲ್ ಕೋಲಾರ ತಾಲ್ಲೂಕು ರೈತರಿಗೆ ಎಫ್‌ಐಜಿ ಕಂಪನಿ ಬಗ್ಗೆ ರೈತರೊಡನೆ ಚರ್ಚಿಸಿದರು. ಕೆ.ಸಿ.ವಿನೋದ್ ಕುಮಾರ್, ಕಿಶೋರ್.ಬಿ ಕಂಪನಿಯ ಎಲ್.ಆರ್.ಪಿ. ಅಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.